ಎಐ ಬಳಸಿ ನಾಗರಿಕ ಸಮಸ್ಯೆ ಪತ್ತೆ ಯೋಜನೆಗೆ ಗ್ರಹಣ!

Published : Nov 29, 2025, 11:59 AM IST
artificial intelligence

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ನಗರ ಪಾಲಿಕೆಯ ಹಿರಿಯ ಅಧಿಕಾರಿಗಳ ಚಲನವಲನ ಪತ್ತೆ ಸುಲಭವಾಗಲಿದೆ ಎಂಬ ಕಾರಣಕ್ಕೆ ರಸ್ತೆ ಗುಂಡಿ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಎಐ  ಬಳಸಿ ಸ್ವಯಂ ಪ್ರೇರಿತ ದೂರು ದಾಖಲಿಸುವ ಕ್ಯಾಮೆರಾಗಳನ್ನು ಕಾರುಗಳಿಗೆ ಅಳವಡಿಕೆಯ ಯೋಜನೆ ನೆನಗುದಿಗೆ ಬಿದ್ದಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ನಗರ ಪಾಲಿಕೆಯ ಹಿರಿಯ ಅಧಿಕಾರಿಗಳ ಚಲನವಲನ ಪತ್ತೆ ಸುಲಭವಾಗಲಿದೆ ಎಂಬ ಕಾರಣಕ್ಕೆ ರಸ್ತೆ ಗುಂಡಿ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸ್ವಯಂ ಪ್ರೇರಿತ ದೂರು ದಾಖಲಿಸುವ ಕ್ಯಾಮೆರಾಗಳನ್ನು ಕಾರುಗಳಿಗೆ ಅಳವಡಿಕೆಯ ಯೋಜನೆ ನೆನಗುದಿಗೆ ಬಿದ್ದಿದೆ.

ರಸ್ತೆ ಗುಂಡಿ, ಕಸದ ಸಮಸ್ಯೆ ತ್ವರಿತ ಪರಿಹಾರ ಮಾಡುವ ಉದ್ದೇಶದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಪಾಲಿಕೆಯ ಎಲ್ಲ ವಾಹನಗಳಿಗೆ ಕ್ಯಾಮೆರಾ ಅಳವಡಿಕೆಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆ ಗುಂಡಿ, ಕಸ, ಕಟ್ಟಡ ತ್ಯಾಜ್ಯ, ಅನಧಿಕೃತ ಜಾಹೀರಾತು ಫಲಕ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಸ್ವಯಂ ಪ್ರೇರಿತವಾಗಿ ಪತ್ತೆ ಮಾಡಿ, ಫೋಟೋ, ವಿಡಿಯೋದೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೇರವಾಗಿ ದೂರು ಸಲ್ಲಿಕೆ ಆಗುವಂತೆ ಮಾಡುವುದಕ್ಕೆ 3 ಕೋಟಿ ರು. ವೆಚ್ಚದಲ್ಲಿ 250 ಎಐ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಧಿಕಾರಿಗಳ ಓಡಾಟದ ಕಾರು ಸೇರಿದಂತೆ ಪಾಲಿಕೆಯ ಎಲ್ಲ ವಾಹನಗಳಿಗೆ ಅಳವಡಿಕೆ ಮಾಡುವುದಕ್ಕೆ ಯೋಜನೆ ರೂಪಿಸಲಾಗಿತ್ತು.

ಬಿಬಿಎಂಪಿಯ ಅವಧಿಯಲ್ಲಿಯೇ ಟೆಂಡರ್‌ ನಡೆಸಿ ಆಗಸ್ಟ್‌ನಲ್ಲಿ ಕಾರ್ಯಾದೇಶ ನೀಡಲಾಗಿತ್ತು. ಆ ಬಳಿಕ ಗುತ್ತಿಗೆದಾರರು ಮೊದಲ ಹಂತದಲ್ಲಿ 30 ಎಐ ಕ್ಯಾಮೆರಾಗಳನ್ನು ಪಾಲಿಕೆಗೆ ನೀಡಿದ್ದರು. ಈ ನಡುವೆ ಬಿಬಿಎಂಪಿ ಅಸ್ತಿತ್ವ ಕಳೆದುಕೊಂಡು ಜಿಬಿಎ ಮತ್ತು ಹೊಸ ಐದು ನಗರ ಪಾಲಿಕೆ ರಚನೆಗೊಂಡ ನೆಪ ಹೇಳಿಕೊಂಡು ಎಐ ಕ್ಯಾಮೆರಾ ಅಳವಡಿಕೆ ನಿಂತು ಹೋಗಿದೆ.

ಹಿರಿಯ ಅಧಿಕಾರಿಗಳೇ ವಿರೋಧ

ಮೊದಲ ಹಂತದಲ್ಲಿ ಹಿರಿಯ ಅಧಿಕಾರಿಗಳು ಸಂಚಾರ ಮಾಡುವ ಕಾರುಗಳಿಗೆ ಈ ಎಐ ಕ್ಯಾಮೆರಾ ಅಳವಡಿಕೆ ಮಾಡುವುದು. ನಂತರ, ಕಿರಿಯ ಅಧಿಕಾರಿಗಳ ಕಾರುಗಳು, ತದ ನಂತರ ಪಾಲಿಕೆಯ ಇತರೆ ವಾಹನಗಳಿಗೆ ಅಳವಡಿಸಲು ತೀರ್ಮಾನಿಸಲಾಗಿತ್ತು.

ಸಂಬಂಧಪಟ್ಟ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಓಡಾಡುವ ಸರ್ಕಾರಿ ಕಾರುಗಳಿಗೆ ಕ್ಯಾಮೆರಾ ಅಳವಡಿಕೆಗೆ ಮುಂದಾಗಲು ನಿರ್ದೇಶಿಸಿದ್ದಾರೆ. ಹೀಗಾಗಿ, ಎಐ ಕ್ಯಾಮೆರಾ ಅಳವಡಿಕೆ ಮೂಲಕ ರಸ್ತೆ ಗುಂಡಿ ಗುರುತಿಸುವುದು ಸೇರಿದಂತೆ ಸಾರ್ವಜನಿಕ ಸಮಸ್ಯೆ ಪತ್ತೆ ಮಾಡುವ ಇಡೀ ಯೋಜನೆ ಸ್ಥಗಿತಗೊಂಡಂತಾಗಿದೆ.

ವಿರೋಧ ಏಕೆ?

ಹಿರಿಯ ಅಧಿಕಾರಿಗಳು ಕಚೇರಿ ಕಾರ್ಯದ ಓಡಾಟಕ್ಕೆ ಸರ್ಕಾರಿ ಕಾರು ಬಳಕೆ ಮಾಡುತ್ತಾರೆ. ಎಲ್ಲೆಲ್ಲಿ ಓಡಾಟ ನಡೆಸುತ್ತಾರೆ ಎಂಬುದು ಚಾಲಕನಿಗೆ ಹೊರತು ಪಡಿಸಿ ಬೇರೆ ಯಾರಿಗೂ ಅಷ್ಟು ಸುಲಭವಾಗಿ ತಿಳಿಯುವುದಿಲ್ಲ. ಎಐ ಕ್ಯಾಮೆರಾ ಅಳವಡಿಕೆ ಮಾಡಿದರೆ ಹಿರಿಯ ಅಧಿಕಾರಿಯ ಕಾರು ಎಲ್ಲೆಲ್ಲಿ ಓಡಾಟ ನಡೆಸುತ್ತಿದೆ ಎಂಬ ಪ್ರತಿಯೊಂದು ಮಾಹಿತಿಯು ದಾಖಲಾಗಲಿದೆ. ಗೌಪ್ಯತೆಗೆ ಭಂಗ ಉಂಟಾಗಲಿದೆ ಎಂಬ ಕಾರಣಕ್ಕೆ ಎಐ ಕ್ಯಾಮೆರಾ ಅಳವಡಿಕೆಗೆ ಅವಕಾಶ ನೀಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

30 ಕ್ಯಾಮೆರಾ ಹಂಚಿಕೆಗೆ ತೀರ್ಮಾನ

ಜಿಬಿಎ ಮತ್ತು ನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಕ್ಯಾಮೆರಾ ಅಳವಡಿಕೆ ಬೇಡ ಎನ್ನುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರ ಪೂರೈಕೆ ಮಾಡಿರುವ 30 ಕ್ಯಾಮೆರಾಗಳನ್ನು ಐದು ನಗರ ಪಾಲಿಕೆಗೆ ತಲಾ 6 ರಂತೆ ಹಂಚಿಕೆ ಮಾಡುವುದಕ್ಕೆ ಜಿಬಿಎ ಮಾಹಿತಿ ತಂತ್ರಜ್ಞಾನ ವಿಭಾಗ ತೀರ್ಮಾನಿಸಿದೆ. ಅಳವಡಿಕೆ ಮಾಡಿಕೊಳ್ಳುವುದು ಬಿಡುವುದು, ಆಯಾ ನಗರ ಪಾಲಿಕೆಯ ಅಧಿಕಾರಿಗಳಿಗೆ ಬಿಡುವುದಕ್ಕೆ ನಿರ್ಧರಿಸಲಾಗಿದೆ.

ಎಐ ಕ್ಯಾಮೆರಾ ಕಾರ್ಯ ಹೇಗೆ?

ನಗರದಲ್ಲಿ ಸುಮಾರು 14 ಸಾವಿರ ಕಿ.ಮೀ. ಉದ್ದದ ರಸ್ತೆ ಜಾಲವಿದ್ದು, ಜಿಬಿಎ ಮತ್ತು ನಗರ ಪಾಲಿಕೆಯ ವಾಹನಗಳು ಈ ರಸ್ತೆಗಳಲ್ಲಿ ಪ್ರತಿ ದಿನ ಸಂಚಾರ ನಡೆಸಲಿವೆ. ಸಂಚಾರ ನಡೆಸುವ ಸಂದರ್ಭದಲ್ಲಿ ರಸ್ತೆಯಲ್ಲಿ ಗುಂಡಿ, ರಸ್ತೆ ಅಕ್ಕ-ಪಕ್ಕದಲ್ಲಿ ಕಸ, ಕಟ್ಟಡ ತ್ಯಾಜ್ಯ, ಫ್ಲೆಕ್ಸ್‌, ಬ್ಯಾನರ್‌, ಹೋಲ್ಡಿಂಗ್‌ ಕಂಡು ಬಂದರೆ ಸ್ವಯಂ ಚಾಲಿತವಾಗಿ ಫೋಟೋ ಮತ್ತು ವಿಡಿಯೋ ದೃಶ್ಯ ಸೆರೆ ಹಿಡಿಯಲಿದೆ. ಎಐ ತಂತ್ರಜ್ಞಾನ ಬಳಕೆ ಮಾಡಿ ಸಂಗ್ರಹಿಸಿ ಫೋಟೋ, ವಿರೋಧ ದತ್ತಾಂಶವನ್ನು ವಿಶ್ಲೇಷಣೆ ಮಾಡಿ ಸಂಬಂಧಪಟ್ಟ ಅಧಿಕಾರಿಗೆ ದೂರು ಮಾದರಿಯಲ್ಲಿ ಸಲ್ಲಿಸಲಿದೆ. ಸಂಬಂಧಪಟ್ಟ ಅಧಿಕಾರಿ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಿದ್ದಾರೆ. ಭೌತಿಕವಾಗಿ ಸಾರ್ವಜನಿಕರು ದೂರು ನೀಡಬೇಕಾಗಿಲ್ಲ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ