;Resize=(412,232))
ಬೆಂಗಳೂರು : ಚಲ್ಲಘಟ್ಟದಲ್ಲಿ 230 ಅಂಗವಿಕಲರ ಕುಟುಂಬಗಳಿಗೆ ಸರ್ಕಾರವೇ ಮಂಜೂರು ಮಾಡಿ ಹಕ್ಕುಪತ್ರ ವಿತರಿಸಿರುವ 5 ಎಕರೆ ಜಮೀನನ್ನು ಇದೀಗ ಬಿಡಿಎ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಅಧಿಸೂಚನೆ ಮಾಡಿರುವುದಾಗಿ ಏಕಾಏಕಿ ನೋಟಿಸ್ ನೀಡಿದೆ.
2010 ಜನವರಿ 6ರಂದು ರಾಜ್ಯ ಸರ್ಕಾರವೇ ಮಂಜೂರು ಮಾಡಿದ್ದ ಚಲ್ಲಘಟ್ಟ ಗ್ರಾಮದ ಸರ್ವೆ ನಂ.13ರ ಐದು ಎಕರೆ ಜಮೀನನ್ನು 230 ನಿವೇಶನಗಳಾಗಿ ಪರಿವರ್ತಿಸಿ, ಹಂಚಿಕೆ ಮಾಡಲಾಗಿದೆ. 2024ರಲ್ಲಿ ಅಂಗವಿಕಲ ಫಲಾನುಭವಿಗಳಿಗೆ ಸ್ಥಳೀಯ ಶಾಸಕ ಎಸ್.ಟಿ.ಸೋಮಶೇಖರ್ ಅವರ ಸಮ್ಮುಖದಲ್ಲೇ ಹಕ್ಕುಪತ್ರಗಳನ್ನು ಕೂಡ ವಿತರಿಸಲಾಗಿದ್ದು, ಇ-ಖಾತಾ, ನೋಂದಣಿ, ಕಂದಾಯ ಪಾವತಿ ಆಗಿದೆ. ಆದರೆ, ಇದೀಗ ಬಿಡಿಎ ನೋಟಿಸ್ ನೀಡಿದೆ.
2010 ಫೆಬ್ರವರಿ 18ರಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಗೆಂದು ಈ ಜಮೀನು ಅಂತಿಮ ಅಧಿಸೂಚನೆಗೆ ಒಳಪಟ್ಟಿತ್ತು. ಆದ್ದರಿಂದ ಜಮೀನು ಖಾಲಿ ಮಾಡುವಂತೆ ನೋಟಿಸ್ ನೀಡಿದೆ. . ಈ ಸಂಬಂಧ ಶೀಘ್ರ ಎಲ್ಲಾ ಫಲಾನುಭವಿಗಳೂ ಸೇರಿ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಿದ್ದು, ಕಾನೂನು ಹೋರಾಟವನ್ನೂ ನಡೆಸುತ್ತೆವೆ ಎಂದು ಫಲಾನುಭವಿಗಳು ಅಳಲು ತೋಡಿಕೊಂಡಿದ್ದಾರೆ.
ಕೆಂಗೇರಿ ಹೋಬಳಿ ಚಲ್ಲಘಟ್ಟ ಗ್ರಾಮದ ಸರ್ವೆ ನಂ.13ರಲ್ಲಿ 5 ಎಕರೆ ಜಮೀನನ್ನು ಶ್ರೀ ಮಾರುತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದವರಿಗೆ ನಿವೇಶನದ ಉದ್ದೇಶಕ್ಕಾಗಿ ನೀಡುವಂತೆ ವಿಶೇಷ ಜಿಲ್ಲಾಧಿಕಾರಿಯವರು 2010 ಜನವರಿ 6ರಂದು ಕಾಯ್ದಿರಿಸಿದ್ದರು. ಆ ನಂತರ ಎಲ್ಲ ಪ್ರಕ್ರಿಯೆ ನಡೆಸಿ ಜಮೀನಿನಲ್ಲಿ 20*30ರ ವಿಸ್ತೀರ್ಣದಂತೆ ಒಟ್ಟು 230 ನಿವೇಶಗಳನ್ನು ವಿಗಂಡಿಸಿ ರಾಜೀವ ಗಾಂಧಿ ವಸತಿ ನಿಗಮದ ಮೂಲಕ ಫಲಾನುಭವಿಗಳಿಗೆ ಮಂಜೂರು ಮಾಡಿತ್ತು. ಇಷ್ಟಾದರೂ ಹಕ್ಕುಪತ್ರ ನೀಡಲು ವಿಳಂಬ ಮಾಡಿದ್ದರ ವಿರುದ್ಧ ಸಂಘವು ಕಾನೂನು ಹೋರಾಟ ನಡೆಸಿ 2024ರಲ್ಲಿ ಹಕ್ಕುಪತ್ರ ಹಂಚಿಕೆ ಮಾಡುವಲ್ಲಿ ಯಶಸ್ವಿಯಾಗಿತ್ತು.
ಕಾನೂನುಬದ್ಧವಾಗಿ ನಮಗೆ ನಿವೇಶನಗಳನ್ನು ಕೊಡಲಾಗಿದೆ. 2006ರಿಂದಲೂ ಅದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದು, ಅಂಗವಿಕಲರಿಗಾಗಿ ಮಂಜೂರಾದ ಜಮೀನು ಇದಾಗಿದೆ. ಈ ನಿವೇಶನಗಳಿಗೆ ಹಕ್ಕುಪತ್ರ ಪಡೆದಿರುವವರೆ ಕಾನೂನುಬಧ್ದ ಮಾಲೀಕರು. ಅದರ ಹೊರತು ಬೇರೆ ಯಾರಿಗೂ ಹಕ್ಕಾಗಲೀ ಹಿತಾಸಕ್ತಿಯಾಗಲೀ ಇಲ್ಲ. ಇದರ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧ.
- ಎಂ.ಜೆ.ರಂಗಸ್ವಾಮಿ, ಅಧ್ಯಕ್ಷರು, ಶ್ರೀ ಮಾರುತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ