ವಿದೇಶಿ ಶಿಕ್ಷಣಕ್ಕೆ ತೆರಳುವವರಿಗೆ ಪಿಯು ಮುದ್ರಿತ ಅಂಕಪಟ್ಟಿ ಲಭ್ಯ

Published : Apr 16, 2026, 11:04 AM IST
PUC

ಸಾರಾಂಶ

ರಾಜ್ಯದಲ್ಲಿ ಮುಂಬರುವ (2026-27) ಶೈಕ್ಷಣಿಕ ಸಾಲಿನಿಂದ ದ್ವಿತೀಯ ಪಿಯುಸಿ ಬಳಿಕ  ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗುವ ಮಕ್ಕಳಿಗೆ   ಅಗತ್ಯವಿದ್ದವರು ಮುದ್ರಿತ ಅಂಕಪಟ್ಟಿ ಪಡೆಯಲು ಅವಕಾಶವಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

  ಬೆಂಗಳೂರು :  ರಾಜ್ಯದಲ್ಲಿ ಮುಂಬರುವ (2026-27) ಶೈಕ್ಷಣಿಕ ಸಾಲಿನಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುದ್ರಿತ ಅಂಕಪಟ್ಟಿ ಬದಲು ಡಿಜಿಟಲ್‌ ಅಂಕಪಟ್ಟಿಯನ್ನು ಮಾತ್ರ ನೀಡುವ ಸರ್ಕಾರದ ನಿರ್ಧಾರದಿಂದ ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗುವ ಮಕ್ಕಳಿಗೆ ಸಮಸ್ಯೆಯಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಆದರೆ, ಅಗತ್ಯವಿದ್ದವರು ಮುದ್ರಿತ ಅಂಕಪಟ್ಟಿ ಪಡೆಯಲು ಅವಕಾಶವಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಯಾವುದೇ ಆತಂಕ ಬೇಡ

ಈ ಬಗ್ಗೆ ವಿವರಣೆ ನೀಡಿರುವ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಯಾವುದೇ ಆತಂಕ ಬೇಡ. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವಂತಹ ಮಕ್ಕಳು ಅರ್ಜಿ ಸಲ್ಲಿಸಿದರೆ ಅಂತಹವರು ಮುದ್ರಿತ ಅಂಕಪಟ್ಟಿಯನ್ನೂ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದ್ದಾರೆ.

ಡಿಜಿಟಲ್‌ ರೂಪದ ದಾಖಲೆಗಳಿಗೆ ಕಾನೂನಾತ್ಮಕವಾದ ಅನುಮತಿ

ಈ ಸಂಬಂಧ ‘ಕನ್ನಡಪ್ರಭ’ ದೊಂದಿಗೆ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಭರತ್‌ ಅವರು, ಇಂದಿನ ಡಿಜಿಟಲ್‌ ಯುಗದಲ್ಲಿ ಕೇಂದ್ರ ಸರ್ಕಾರವೇ ಸಾಕಷ್ಟು ಡಿಜಿಟಲ್‌ ರೂಪದ ದಾಖಲೆಗಳಿಗೆ ಕಾನೂನಾತ್ಮಕವಾದ ಅನುಮತಿ, ಮಾನ್ಯತೆ ನೀಡಿದೆ. ಇದರ ಆಧಾರದಲ್ಲಿ ರಾಜ್ಯದಲ್ಲೂ ಮುಂದಿನ ಸಾಲಿನಿಂದ ಡಿಜಿಟಲ್‌ ಅಂಕಪಟ್ಟಿ ನೀಡಲು ಚಿಂತನೆ ನಡೆಸಿದೆ. ಇದನ್ನು ಶಾಲಾ ಶಿಕ್ಷಣ ಸಚಿವರು ಕೂಡ ಹೇಳಿದ್ದಾರೆ ಎಂದಿದ್ದಾರೆ.

ಡಿಜಿಟಲ್‌ ಅಂಕಪಟ್ಟಿ ಅನುಷ್ಠಾನಕ್ಕೆ ಇನ್ನೂ ಒಂದು ವರ್ಷ ಸಮಯವಿದೆ. ನಮ್ಮ ರಾಜ್ಯ ಅಥವಾ ಡಿಜಿಲಾಕರ್‌ ಅಂಕಪಟ್ಟಿ ಪರಿಗಣಿಸುವ ಇತರೆ ರಾಜ್ಯಗಳಲ್ಲಿ ವ್ಯಾಸಂಗಕ್ಕೆ ಹೋಗುವ ಮಕ್ಕಳಿಗೆ ಸಮಸ್ಯೆ ಆಗುವುದಿಲ್ಲ. ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗುವ ಮಕ್ಕಳಿಗೆ ಮುದ್ರಿತ ಅಂಕಪಟ್ಟಿ ನೀಡುವುದು ಅಗತ್ಯ. ಹಾಗಾಗಿ ಅಂತಹ ಮಕ್ಕಳು ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿಸಿದರೆ ಮುದ್ರಿತ ಅಂಕಪಟ್ಟಿ ಪಡೆಯಲು ಸರ್ಕಾರ ಅವಕಾಶ ಮಾಡಿಕೊಡುತ್ತದೆ. ಹಾಗಾಗಿ ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗುವ ಮಕ್ಕಳಿಗೆ ಸಮಸ್ಯೆಯಾಗಲಿದೆ ಎನ್ನುವುದು ತಪ್ಪು ಕಲ್ಪನೆ ಎಂದು ಭರತ್‌ ಅವರು ಸ್ಪಷ್ಟಪಡಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗಳೂರು : ಬತ್ತಿದ ಬೋರ್‌ವೆಲ್‌ : ನಗರದಲ್ಲಿ ನೀರಿನ ಅಭಾವ
ಏ.24ಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ ಡೌಟ್‌