;Resize=(412,232))
ಬೆಂಗಳೂರು : ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಉಪಯೋಗವಾಗಬೇಕಿದ್ದ ಶಿಥಲೀಕರಣ ಘಟಕವನ್ನು (ಕೋಲ್ಡ್ ಸ್ಟೋರೇಜ್) ದುರಪಯೋಗ ಪಡಿಸಿಕೊಂಡಿರುವ ವಿಧಾನ ಪರಿಷತ್ತು ಮಾಜಿ ಸದಸ್ಯ ಬಿ.ಎಂ.ಫಾರೂಕ್ ಅವರಿಗೆ ಕೋಲ್ಡ್ ಸ್ಟೋರೇಜ್ ತೆರವುಗೊಳಿಸಲು 45 ದಿನಗಳ ಗಡುವು ನೀಡಿ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್) ನೋಟಿಸ್ ಜಾರಿ ಮಾಡಿದೆ.
ದೇವನಹಳ್ಳಿ ಸಮೀಪದ ಪೂಜೇನಹಳ್ಳಿಯಲ್ಲಿ ಕೆಪೆಕ್ ಹಣ್ಣು ಮತ್ತು ತರಕಾರಿಗಳ ದಾಸ್ತಾನು ಮತ್ತು ಸಂಸ್ಕರಣೆಗಾಗಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಿದೆ. ಇದರ ನಿರ್ವಹಣೆಯನ್ನು ಬಿ.ಎಂ.ಫಾರೂಕ್ ಒಡೆತನದ ಫಿಜ್ ಗ್ಲೋಬಲ್ ಆಗ್ರೋ ವೆಂಚರ್ ಪ್ರೈವೇಟ್ ಲಿಮಿಟೆಡ್‌ಗೆ 2024ರ ಜೂನ್‌ನಲ್ಲಿ ವಹಿಸಲಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ 2025 ಜುಲೈನಲ್ಲಿ ಒಪ್ಪಂದ ರದ್ದುಗೊಳಿಸಿ ತೆರವುಗೊಳಿಸುವಂತೆ ಸೂಚನೆ ನೀಡಿತ್ತಾದರೂ ಕೋಲ್ಡ್ ಸ್ಟೋರೇಜ್ ತೆರವುಗೊಳಿಸದೇ ಫೀಜ್ ಸಂಸ್ಥೆ ಅಕ್ರಮವಾಗಿ ಮುಂದುವರೆದಿತ್ತು.
ಕಳೆದ ತಿಂಗಳು ಸದರಿ ಕೋಲ್ಡ್ ಸ್ಟೋರೇಜ್‌ನಲ್ಲಿ ಸಿದ್ದಗೊಳಿಸಿದ ಉಡುಪುಗಳು ಹಾಗೂ ಮಸಾಲೆ ಪದಾರ್ಥಗಳ ಅಕ್ರಮ ದಾಸ್ತಾನು ಅನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದ ಜಪ್ತಿ ಮಾಡಿದ್ದರು. ಇದಕ್ಕೆ ಕಾರಣ ಕೇಳಿ ಕೆಪೆಕ್ ಬಿ.ಎಂ.ಫಾರೂಕ್ ಅವರ ಮಾಲೀಕತ್ವದ ಫಿಜ್ ಗ್ಲೋಬಲ್‌ಗೆ ನೋಟಿಸ್ ನೀಡಿದ್ದರೂ ಆ ಸಂಸ್ಥೆ ಸ್ಪಷ್ಟನೆ ನೀಡಿರಲಿಲ್ಲ.
ಹಾಗಾಗಿ 45 ದಿನಗಳ ಒಳಗೆ ಕೋಲ್ಡ್ ಸ್ಟೋರೇಜ್ ತೆರವು ಮಾಡಬೇಕು. ಅಲ್ಲಿವರೆಗೂ ಪ್ರತಿ ದಿನ 50,869 ರು.ನಂತೆ ಬಾಡಿಗೆ ಪಾವತಿಸಬೇಕು. ಜೊತೆಗೆ ಕೆಪೆಕ್‌ಗೆ ಬಾಕಿ ಉಳಿಸಿಕೊಂಡಿರುವ 2,48,69,000 ರು.ಗಳನ್ನು ಪಾವತಿಸಬೇಕು ಎಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್ ಅವರು ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ. ನಿಗದಿತ ಅವಧಿಯೊಳಗೆ ಖಾಲಿ ಮಾಡದಿದ್ದರೆ ಕೋಲ್ಡ್ ಸ್ಟೋರೇಜ್‌ನಲ್ಲಿರುವ ಎಲ್ಲ ವಸ್ತುಗಳನ್ನು ಜಪ್ತಿ ಮಾಡಿ, ಇಡೀ ಕಟ್ಟಡವನ್ನು ವಶಕ್ಕೆ ಪಡೆಯುವುದಾಗಿ ಎಚ್ಚರಿಸಿದ್ದಾರೆ.