ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಮತ್ತೊಂದು ಸಾವು? - ಮಹಿಳೆ ಆತ್ಮಹತ್ಯೆಗೆ ಕಿರುಕುಳ ಶಂಕೆ

Published : Jan 23, 2025, 10:02 AM IST
deadbody

ಸಾರಾಂಶ

ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ರಾಮನಗರ ಜಿಲ್ಲೆಯ ತಿಮ್ಮಯ್ಯನದೊಡ್ಡಿಯಲ್ಲಿ ಮಹಿಳೆಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಮಾಸುವ ಬೆನ್ನಲ್ಲೆ ಅಂತಹದ್ದೆ ಘಟನೆ ಚನ್ನಪಟ್ಟಣ ತಾಲೂಕಿನ ಮೈಲನಾಯ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಚನ್ನಪಟ್ಟಣ : ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ರಾಮನಗರ ಜಿಲ್ಲೆಯ ತಿಮ್ಮಯ್ಯನದೊಡ್ಡಿಯಲ್ಲಿ ಮಹಿಳೆಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಮಾಸುವ ಬೆನ್ನಲ್ಲೆ ಅಂತಹದ್ದೆ ಘಟನೆ ಚನ್ನಪಟ್ಟಣ ತಾಲೂಕಿನ ಮೈಲನಾಯ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದ್ದು, ಈ ಆತ್ಮಹತ್ಯೆಗೂ ಮೈಕ್ರೋ ಫೈನಾನ್ಸ್‌ ಕಿರುಕುಳ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮೈಲನಾಯ್ಕನಹಳ್ಳಿ ಗ್ರಾಮದ ಲೀಲಾವತಿ (50) ಸಾಲದಿಂದ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲೀಲಾವತಿ ವಿವಿಧ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದಿದ್ದು, ಈ ಹಣದ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕೆ ವ್ಯಕ್ತಪಡಿಸಿ ಪತಿ ಶಿವಣ್ಣ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗೃಹಪಯೋಗಕ್ಕಾಗಿ ಲೀಲಾವತಿ ನಾಲ್ಕೈದು ಫೈನಾನ್ಸ್ ಕಂಪನಿಯ ಸಂಘಗಳಲ್ಲಿ ಸದಸ್ಯೆಯಾಗಿ ಸೇರ್ಪಡೆಗೊಂಡು ಸಾಲ ಪಡೆದುಕೊಂಡಿದ್ದರು. ಜ.21ರಂದು ಬೆಳಗ್ಗೆ ಪತಿ ಶಿವಣ್ಣ ಕೆಲಸಕ್ಕೆ ಹೋದ ಬಳಿಕ ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ಅವರಿಗೆ ತೋಟದ ಮಾಲೀಕ ರವಿಕುಮಾರ್ ನೇಣು ಬಿಗಿದುಕೊಂಡಿರುವ ವಿಚಾರ ತಿಳಿಸಿದ್ದಾರೆ. ತಕ್ಷಣ ಮನೆಗೆ ತೆರಳಿದ ಶಿವಣ್ಣ ಮತ್ತು ಅಕ್ಕಪಕ್ಕದ ಮನೆಯವರು ನೇಣು ಹಾಕಿಕೊಂಡಿದ್ದ ಲೀಲಾವತಿ ಅವರಲ್ಲಿ ಇನ್ನೂ ಸ್ವಲ್ಪ ಜೀವವಿದ್ದ ಕಾರಣ ನೇಣು ಹಗ್ಗವನ್ನು ಕತ್ತರಿಸಿ ಕೆಳಗಿಳಿಸಿದ್ದಾರೆ.

ಕೂಡಲೇ ಆಟೋದಲ್ಲಿ ಕರೆದೊಯ್ದು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬುಧವಾರ ಕನಕಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಇನ್ನೂ ರಾಮನಗರ ಜಿಲ್ಲೆಯ ತಿಮ್ಮಯ್ಯನದೊಡ್ಡಿ ಗ್ರಾಮದ ಯಶೋಧಮ್ಮ ಆತ್ಮಹತ್ಯೆ ಪ್ರಕರಣ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 7 ಮೈಕ್ರೋ ಫೈನಾನ್ಸ್ ಕಂಪನಿ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಡಗಿನಲ್ಲೂ ಊರು ತೊರೆದ ಗ್ರಾಮಸ್ಥರು

ಕುಶಾಲನಗರ: ಖಾಸಗಿ ಫೈನಾನ್ಸ್‌ ಸಂಸ್ಥೆಗಳ ಕಿರುಕುಳದಿಂದ ರಾಮನಗರ ತಾಲೂಕು ತಿಮ್ಮಯ್ಯನದೊಡ್ಡಿ ಗ್ರಾಮಸ್ಥರು ಊರು ಬಿಟ್ಟ ಆತಂಕಕಾರಿ ಘಟನೆ ಬೆನ್ನಲ್ಲೆ ಕೊಡಗು ಜಿಲ್ಲೆಯಲ್ಲೂ ಅಂತಹದ್ದೆ ಘಟನೆ ನಡೆದಿದೆ. ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರು ಸಾಲ ಮರುಪಾವತಿ ಸಾಧ್ಯವಾಗದೆ ಫೈನಾನ್ಸರ್‌ಗಳ ಕಿರುಕುಳದಿಂದ ಊರು ಬಿಟ್ಟ ಪ್ರಕರಣ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಮೀನುಕೊಲ್ಲಿ ಹಾಡಿ, ದಾಸವಾಳ ಪೈಸಾರಿ, ಬೆಳ್ಳಿ ಕಾಲನಿ ಈ ಭಾಗಗಳಲ್ಲಿ ಹಲವಾರು ಜನ ಕೂಲಿ ಕಾರ್ಮಿಕರಿದ್ದಾರೆ. ಇಲ್ಲಿನ ಕೆಲವು ನಿವಾಸಿಗಳು ವಿವಿಧ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗದೆ ಊರು ಬಿಟ್ಟಿದ್ದಾರೆ ಎಂದು ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್. ವಿಶ್ವ ತಿಳಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕೃತಕ ಬುದ್ದಿಮತ್ತೆ ಯುಗದಲ್ಲಿ ಕೌಶಲ್ಯಕ್ಕೆ ಮನ್ನಣೆ
ಟೌನ್ ಬ್ಯಾಂಕ್ ನೂತನ ಸದಸ್ಯರಿಗೆ ಶಾಸಕ ಶರತ್‌ ಅಭಿನಂದನೆ