98ರಲ್ಲಿ ಏರೋ ಶೋಗೆ ಬಂದಿದ್ದ ಬೆಂಗ್ಳೂರು ಹುಡುಗ ಅರ್ಜುನ್‌ ಈಗ ಸೂರ್ಯಕಿರಣ್‌ ಪೈಲಟ್‌!

Published : Feb 11, 2025, 09:05 AM IST
Suryakiran aerobatic team

ಸಾರಾಂಶ

ಬೆಂಗಳೂರಿನಲ್ಲಿ 1998ರಲ್ಲಿ ಏರೋ ಇಂಡಿಯಾ ನೋಡಲು ಪೋಷಕರೊಂದಿಗೆ ಬಂದಿದ್ದ ಆರನೇ ತರಗತಿಯ ಬೆಂಗಳೂರಿನ ಹುಡುಗ ಅಂದು ಪಣ ತೊಟ್ಟ ಫಲವಾಗಿ ಈಗ ದೇಶದ ಹೆಮ್ಮೆಯ ಸೂರ್ಯಕಿರಣ್‌ ವೈಮಾನಿಕ ಪ್ರದರ್ಶನ ತಂಡದ ವಿಂಗ್‌ ಕಮಾಂಡರ್‌!

  ಬೆಂಗಳೂರು : ಬೆಂಗಳೂರಿನಲ್ಲಿ 1998ರಲ್ಲಿ ಏರೋ ಇಂಡಿಯಾ ನೋಡಲು ಪೋಷಕರೊಂದಿಗೆ ಬಂದಿದ್ದ ಆರನೇ ತರಗತಿಯ ಬೆಂಗಳೂರಿನ ಹುಡುಗ ಅಂದು ಪಣ ತೊಟ್ಟ ಫಲವಾಗಿ ಈಗ ದೇಶದ ಹೆಮ್ಮೆಯ ಸೂರ್ಯಕಿರಣ್‌ ವೈಮಾನಿಕ ಪ್ರದರ್ಶನ ತಂಡದ ವಿಂಗ್‌ ಕಮಾಂಡರ್‌!

ಬೆಂಗಳೂರಿನ ಜಯಮಹಲ್‌ನ ನಂದಿದುರ್ಗ ರಸ್ತೆಯಲ್ಲಿ ಪೇಪರ್‌ ವಿಮಾನ ಹಾರಿಸುತ್ತಾ ಬೆಳೆದ ಅರ್ಜುನ್‌ ಈಗ ಯುದ್ಧ ವಿಮಾನದಲ್ಲಿ ಅತ್ಯಂತ ಕಠಿಣ ಸ್ಟಂಟ್‌ಗಳನ್ನು ಮಾಡುವ ಫೈಟರ್‌ ಜೆಟ್‌ ಪೈಲಟ್‌.

1- ಅರ್ಜುನ್‌ ಎಲ್ಲಿಯವರು? ಸೂರ್ಯಕಿರಣ್‌ ಸೇರಿದ್ದು ಹೇಗೆ?

ಜಯಮಹಲ್‌ನ ನಂದಿದುರ್ಗ ರಸ್ತೆಯಲ್ಲಿ ನನ್ನ ಮನೆ ಇದೆ. ನನ್ನ ಪೂರ್ವಜರ ಊರು ಸಹ ಇದೇ, ಹೀಗಾಗಿ ನಾನು ಬೆಂಗಳೂರಿಗ. ಆರ್‌.ಟಿ. ನಗರದ ಪ್ರೆಸಿಡೆನ್ಸಿ ಶಾಲೆ ಹಾಗೂ ಸೇಂಟ್‌ ಜೋಸೆಫ್‌ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಬಳಿಕ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಸೇರಿದೆ.

2- ಫೈಟರ್‌ ಜೆಟ್‌ ಪೈಲಟ್‌ ಆಗಲು ಕಾರಣವೇನು?

1998ರಲ್ಲಿ ಪೋಷಕರ ಜತೆ ಬೆಂಗಳೂರು ಏರೋ ಇಂಡಿಯಾಗೆ ತೆರಳಿದ್ದೆ. ಆಗ ಸಿಂಗಲ್‌ ಏರ್‌ಕ್ರ್ಯಾಫ್ಟ್‌ ಹಾರಾಟ, ಗ್ರೂಪ್‌ ಫಾರ್ಮೆಷನ್ಸ್‌ ನೋಡಿ ಥ್ರಿಲ್ಲಾಗಿದ್ದೆ. ನನಗೂ ಈ ರೀತಿ ಪೈಲಟ್‌ ಆಗಬೇಕು ಎಂಬ ಆಸೆ ಹುಟ್ಟಿತು. ಅಂದಿನಿಂದ ಅದನ್ನೇ ಪ್ಯಾಷನ್‌ ಆಗಿ ಸ್ವೀಕರಿಸಿದ್ದೆ.

3- ಇದಕ್ಕೆ ನಿಮ್ಮ ತಯಾರಿ ಹೇಗಿತ್ತು?

ನಾನು ಪಿಯು ಶಿಕ್ಷಣ ಮುಗಿಸಿ ಎನ್‌ಡಿಎ ಸೇರ್ಪಡೆಯಾದೆ. ಬಳಿಕ ಯುದ್ಧ ವಿಮಾನ ನಡೆಸಲು ಬೀದರ್‌ನಲ್ಲಿ ತರಬೇತಿ ನೀಡುತ್ತಾರೆ. ಅದನ್ನು ಮುಗಿಸಿ ಹೈದಬಾದ್‌ನ ಐಎಫ್‌ಎನಲ್ಲಿ ತರಬೇತಿ ಪಡೆದು ವಾಯುಸೇನೆಗೆ ಸೇರ್ಪಡೆಯಾದೆ. 1,000 ಗಂಟೆಗಳ ಹಾರಾಟ ಅನುಭವದ ಬಳಿಕ ಸೂರ್ಯಕಿರಣ್‌ ತಂಡದ ಕದ ತಟ್ಟಿದೆ.

4- ಸೂರ್ಯಕಿರಣ್‌ ತಂಡ ಸೇರುವ ಪ್ರಕ್ರಿಯೆ ಹೇಗೆ?

ಸೂರ್ಯಕಿರಣ್‌ ತಂಡ ಸೇರಲು ಕನಿಷ್ಠ ಅರ್ಹತೆ 1000 ಗಂಟೆಗಳ ಯುದ್ಧ ವಿಮಾನದ ಹಾರಾಟ. ಅಲ್ಲದೆ ಫೈಟರ್‌ ಇನ್‌ಸ್ಟ್ರಕ್ಟರ್‌, ಎಕ್ಸಾಮಿನರ್‌ ಆಗಿ ಅನುಭವ ಪಡೆಯಬೇಕು. ಬಳಿಕ ನಿಮಗೆ ಆಸಕ್ತಿ ಇದ್ದರೆ ಹೋಗಿ ಅಪ್ರೋಚ್ ಆಗಬಹುದು. ಅದಕ್ಕಾಗಿಯೇ ಪ್ರತ್ಯೇಕ ಸಮಿತಿ ಇರುತ್ತದೆ. ಎಲ್ಲಾ ರೀತಿಯಲ್ಲೂ ಪರೀಕ್ಷೆ ನಡೆಸಿ ನಿಮ್ಮ ಶಿಸ್ತು, ಬದ್ಧತೆ, ಕಾರ್ಯಕ್ಷಮತೆ ಎಲ್ಲವೂ ಪರಿಶೀಲಿಸಿ ಆರು ತಿಂಗಳ ತರಬೇತಿಗೆ ನೇಮಿಸಿಕೊಳ್ಳುತ್ತಾರೆ. ಬಳಿಕ ಆಯ್ಕೆ ಮಾಡುತ್ತಾರೆ.

5- ಒಟ್ಟಾರೆ ಎಷ್ಟು ಗಂಟೆ ಹಾರಾಟ ಮಾಡಿದ್ದೀರಿ? ಯಾವ್ಯಾವ ವಿಮಾನ ಹಾರಾಟ ಮಾಡಿದ್ದೀರಿ?

ಒಟ್ಟು 17 ವರ್ಷದ ಅನುಭವದಲ್ಲಿ (ತರಬೇತಿ ಸೇರಿ 18 ವರ್ಷ) 2100 ಗಂಟೆಗಳ ಯುದ್ಧ ವಿಮಾನದ ಹಾರಾಟ ಮಾಡಿದ್ದೇನೆ. ಇದರಲ್ಲಿ 400 ಗಂಟೆಗಳ ತೇಜಸ್‌ ಲಘು ಯುದ್ಧ ವಿಮಾನ ಸ್ಕ್ವಾಡ್ರನ್‌ನಲ್ಲೂ ಹಾರಾಟ ಮಾಡಿದ್ದೇನೆ. ಇದಕ್ಕೂ ಮೊದಲು ಮಿಗ್‌-21, ಮಿಗ್‌-27 ಮಾಡಿದ್ದೇನೆ. ಈಗ ಸೂರ್ಯಕಿರಣ್‌ನಲ್ಲಿ ಹಾಕ್‌ ಯುದ್ಧ ವಿಮಾನದಲ್ಲಿ ಹಾರಾಟ ಮಾಡುತ್ತಿದ್ದೇನೆ.

6- ಬೆಂಗಳೂರಿನಲ್ಲಿ ಪ್ರದರ್ಶನ ನೀಡುತ್ತಿರುವ ಅನುಭವ ಹೇಗಿದೆ?

ತುಂಬಾ ಖುಷಿಯಾಗುತ್ತಿದೆ. ಫೈಟರ್‌ ಜೆಟ್‌ನ ಪೈಲಟ್ ಆಗಬೇಕು ಎಂಬುದು ನನ್ನ ಆಸೆಯಾಗಿತ್ತು. ಆದರೆ ಬೆಂಗಳೂರು ಏರ್‌ಶೋದಲ್ಲೇ ಪ್ರದರ್ಶನ ನೀಡುತ್ತಿರುವುದು ದೇವರು ನನಗೆ ಕೊಟ್ಟ ಹೆಚ್ಚುವರಿ ವರ.

ನನ್ನ ಹೃದಯಕ್ಕೆ ತುಂಬಾ ಆಪ್ತತೆಯ ಅನುಭವ ಆಗುತ್ತಿದೆ. ತರಂಗ ಶಕ್ತಿ, ಗೋವಾದ ವೈಮಾನಿಕ ಪ್ರದರ್ಶನ ಸೇರಿ ಹಲವು ಕಡೆ ಪ್ರದರ್ಶನ ನೀಡಿದರೂ ನನಗೆ ಇದು ಹೆಚ್ಚುವರಿ ಥ್ರಿಲ್‌ ನೀಡುತ್ತಿದೆ.

7- ವೈಮಾನಿಕ ಪ್ರದರ್ಶನಕ್ಕೆ ನಿಮ್ಮ ಸಿದ್ಧತೆ ಹೇಗಿರುತ್ತದೆ?

ಶೇ.60 ರಷ್ಟು ಭಾಗ ವೈಮಾನಿಕ ಪ್ರದರ್ಶನದಲ್ಲಿ ಹಾರಾಟ ಮಾಡಿದರೆ ಶೇ.40 ರಷ್ಟು ತರಬೇತಿಗಾಗಿಯೇ ಹಾರಾಟ ಮಾಡುತ್ತೇವೆ. ವೈಮಾನಿಕ ಪ್ರದರ್ಶನ ಮುಗಿದ ಕೂಡಲೇ ಬೀದರ್‌ನ ವಾಯುನೆಲೆಯಲ್ಲಿ ಎಲ್ಲವನ್ನೂ ಮತ್ತೊಮ್ಮೆ ಪರಾಮರ್ಶೆ ಮಾಡಿಕೊಂಡು ಮಾಡಿರುವ ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇವೆ.

ಇಂದಿನಿಂದ ಹೆಚ್ಚುವರಿ ಪ್ರದರ್ಶನ: ವಿಂಗ್‌ಕಮಾಂಡರ್‌ ಕೆ.ಎಸ್‌. ಹೂಡ

ಮೊದಲ ದಿನವಾದ ಸೋಮವಾರ ಸೂರ್ಯಕಿರಣ್‌ ಏರೋ ಬ್ಯಾಟಿಂಗ್‌ ತಂಡ ಕೇವಲ 11-12 ನಿಮಿಷ ಮಾತ್ರ ಪ್ರದರ್ಶನ ನೀಡಿದೆ. ಮಂಗಳವಾರ ಹಾಗೂ ಬುಧವಾರ ದಿನಕ್ಕೆ ಒಂದು ಬಾರಿ 18-20 ನಿಮಿಷಗಳ ಹೆಚ್ಚುವರಿ ವಿನ್ಯಾಸಗಳೊಂದಿಗೆ ಪ್ರದರ್ಶನ ನೀಡುತ್ತೇವೆ. ಸಾರ್ವಜನಿಕರಿಗೆ ಅವಕಾಶವಿರುವ ಗುರುವಾರ ಹಾಗೂ ಶುಕ್ರವಾರ ಎರಡು ಬಾರಿ 20-22 ನಿಮಿಷಗಳ ಕಾಲ ಪ್ರದರ್ಶನ ನೀಡುತ್ತೇವೆ ಎಂದು ಸೂರ್ಯಕಿರಣ್‌ ತಂಡದ ಮತ್ತೊಬ್ಬ ವಿಂಗ್‌ ಕಮಾಂಡರ್‌ ಕೆ.ಎಸ್‌. ಹೂಡ ಕನ್ನಡಪ್ರಭಕ್ಕೆ ತಿಳಿಸಿದರು.

ಅಷ್ಟೇ ಅಲ್ಲ, ಪುಟ್ಟ ಬಾಲಕನಾಗಿದ್ದಾಗ ಏರೋ ಇಂಡಿಯಾದಲ್ಲಿ ಅಚ್ಚರಿ ಕಣ್ಣುಗಳಿಂದ ಲೋಹದ ಹಕ್ಕಿಗಳ ಹಾರಾಟ ನೋಡುತ್ತಿದ್ದ ಅದೇ ಹುಡುಗ ಈಗ ಹಾಕ್‌ ಎಂಕೆ-132ಯಂತಹ ವಿಮಾನದಲ್ಲಿ ಅದೇ ಏರೋ ಇಂಡಿಯಾದಲ್ಲೇ ಮೈನವಿರೇಳಿಸುವ ವೈಮಾನಿಕ ಸ್ಟಂಟ್‌ಗಳ ಪ್ರದರ್ಶನ ನೀಡುತ್ತಿದ್ದಾರೆ. ಹುಟ್ಟಿ ಬೆಳೆದ ನಗರದಲ್ಲಿ ವೈಮಾನಿಕ ಪ್ರದರ್ಶನ ನೀಡುತ್ತಿರುವ ಖುಷಿಯಲ್ಲಿದ್ದ ಅರ್ಜುನ್‌ ಕೆ. ಪಟೇಲ್‌ ''ಕನ್ನಡಪ್ರಭ'' ಜತೆ ತನ್ನ ಕನಸು ಹಾಗೂ ಕನಸು ನನಸಾದ ರೀತಿ ವಿವರವಾಗಿ ಹಂಚಿಕೊಂಡಿದ್ದಾರೆ.

ಕಿಯೋನಿಕ್ಸ್‌: ವೆಂಡರ್ಸ್‌ ಪ್ರತಿಭಟನೆ ಯತ್ನ ವಿಫಲ 

ಬಾಕಿ ಹಣ ನೀಡುವಂತೆ ಒತ್ತಾಯಿಸಿ ಕಿಯೋನಿಕ್ಸ್‌ ವೆಂಡರ್ಸ್‌ ಅಸೋಸಿಯೇಷನ್‌ ಸದಸ್ಯರು ಸೋಮವಾರ ಕಿಯೋನಿಕ್ಸ್‌ ಕಚೇರಿ ಎದುರು ವಿಷ ಕುಡಿದು ಪ್ರತಿಭಟನೆ ನಡೆಸಲು ವಿಫಲ ಯತ್ನ ನಡೆಸಿದರು. ಪ್ರತಿಭಟನೆಗೂ ಮೊದಲೇ ಸಂಘದ ಅಧ್ಯಕ್ಷರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಸಂಘದ ಸದಸ್ಯರ ಈ ಪ್ರತಿಭಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಹಿಂದಿನ ಬಿಜೆಪಿ ಸರ್ಕಾರದ ಲೋಪದಿಂದ ವೆಂಡರ್ಸ್‌ ಸಮಸ್ಯೆ ಎದುರಿಸುತ್ತಿದ್ದಾರೆ. ನಮ್ಮ ವಿರುದ್ಧ ಪ್ರತಿಭಟಿಸುವ ಬದಲು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ಮಾಡಲಿ ಎಂದು ಖಾರವಾಗಿ ಹೇಳಿದ್ದಾರೆ.

ಬೆಳಗ್ಗೆ 11 ಗಂಟೆಗೆ ಕಿಯೋನಿಕ್ಸ್‌ ಕಚೇರಿ ಎದುರು ವಿಷ ಕುಡಿದು ಪ್ರತಿಭಟಿಸುವುದಾಗಿ ಈ ಮೊದಲೇ ಘೋಷಿಸಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರು ಕಚೇರಿಗೂ ಬರುವ ಮುನ್ನವೇ ಸಂಘದ ಅಧ್ಯಕ್ಷ ವಸಂತ್ ಬಂಗೇರಾ ಹಾಗೂ ಉಮೇಶ್‌ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಈಡೇರದ ಭರವಸೆ: ಸರ್ಕಾರದಿಂದ ಬಾಕಿ ಇರುವ ಸುಮಾರು 400 ಕೋಟಿ ರು.ಗಿಂತ ಹೆಚ್ಚು ಹಣ ಪಾವತಿ ಮಾಡುವಂತೆ ಸಂಘ ಅನೇಕ ಬಾರಿ ಪ್ರತಿಭಟನೆ ನಡೆಸಿದೆ. ಸಚಿವ ಪ್ರಿಯಾಂಕ್‌, ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ಅವರಿಗೆ ಮನವಿ ಮಾಡಿ ಒಂದೆರಡು ಬಾರಿ ಸಭೆ ಸಹ ನಡೆಸಿದೆ. ಹಣ ಬಿಡುಗಡೆ ಮಾಡುವುದಾಗಿ ಸಹ ಅಧ್ಯಕ್ಷರು ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರದ ಕಾರಣ ವೆಂಡರ್ಸ್‌ ಅಸೋಸಿಯೇಷನ್‌ ಮಾತ್ರ ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ಇತ್ತೀಚೆಗೆ ರಾಷ್ಟ್ರಪತಿ, ಪ್ರಧಾನ ಮಂತ್ರಿ ಅವರಿಗೆ ದಯಾಮರಣ ಕೋರಿ ಪತ್ರ ಬರೆದಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಸೋಮವಾರ ಪ್ರತಿಭಟನೆಗೆ ಮುಂದಾಗಿತ್ತು.

ಯಾಕೆ ಬ್ಲಾಕ್‌ ಮೇಲ್‌?: ಈ ನಡುವೆ ಸಚಿವ ಪ್ರಿಯಾಂಕ್‌ ಸುದ್ದಿಗಾರರ ಜೊತೆ ಮಾತನಾಡಿ, ವೆಂಡರ್ಸ್‌ ಪ್ರತಿಭಟನೆ ಅತಿಯಾಯಿತು, ನಾವೇನು ಮಾಡಿದ್ದೇವೆಂದು ಈ ರೀತಿ ಬ್ಲಾಕ್ ಮೇಲ್‌ ಮಾಡುತ್ತಾರೆ? ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆದ ಲೋಪಗಳಿಂದ ಅವರಿಗೆ ತೊಂದರೆಯಾಗಿದೆ, ಸಿಎಜಿ ವರದಿಯಲ್ಲೂ ಸಹ ಅಕ್ರಮ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ನಾವು ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದೇವೆ ಎಂದರು.

ನಿಜವಾಗಿ ಅವರಿಗೆ ಪ್ರತಿಭಟನೆ ಮಾಡಬೇಕೆಂದಿದ್ದರೆ ಬಿಜೆಪಿ ಕಚೇರಿ ಎದುರು ಪ್ರತಿಭಟಿಸಲಿ, ವೆಂಡರ್ಸ್‌ಗೆ ಯಾವ ಕಾನೂನು, ಯಾವ ಯೋಜನೆಯಡಿ ಹಣ ಕೊಡಬಹುದು ಎಂದು ತಿಳಿಸಲಿ. ಈ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ಸರ್ಕಾರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುವುದಿಲ್ಲ, ಪ್ರತಿಭಟಿಸುವುದು ಅವರ ಹಕ್ಕು, ಆದರೆ ವಿಷದ ಬಾಟಲ್‌ ತೆಗೆದುಕೊಂಡು ಬನ್ನಿ ಎಂದೆಲ್ಲ ಪ್ರಚೋದನೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

PREV

Latest Stories

30X40 ಸೈಟಿನ 3 ಅಂತಸ್ತು ಕಟ್ಟಡಗಳಿಗೆ ಓಸಿ ವಿನಾಯ್ತಿ
ನೋಟಿಸ್‌ಗೆ ಬೆಚ್ಚಿದ ವರ್ತಕರು ಯುಪಿಎ ಪೇಮೆಂಟ್‌ ಬೇಡ, ಓನ್ಲಿ ಕ್ಯಾಷ್‌!
ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ