ಬೆಂಗಳೂರು : ನಾಗರಹೊಳೆ ಅಭಯಾರಣ್ಯದ ಕರಡಿಕಲ್ಲು ಹತ್ತೂರು ಕೊಲ್ಲೆಹಾಡಿಯ ಗ್ರಾಮದಲ್ಲಿ ನೆಲೆಸಿರುವ 52 ಕುರುಬ ಆದಿವಾಸಿ ಕುಟುಂಬಗಳನ್ನು ಎತ್ತಂಗಡಿ ಮಾಡುವ ಪ್ರಯತ್ನವನ್ನು ಆದಿವಾಸಿ ಮತ್ತು ಇತರ ಅರಣ್ಯವಾಸಿಗಳ ಹಿತರಕ್ಷಣಾ ಸಂಸ್ಥೆಯಾಗಿರುವ ಸಿಎನ್‌ಎಪಿಎ ಖಂಡಿಸಿದೆ.
ಮೇ 7ರಂದು ಸಂಜೆ 7 ಗಂಟೆ ಸುಮಾರಿಗೆ ಕೊಲ್ಲೆಹಾಡಿಯ ಗ್ರಾಮಕ್ಕೆ ತೆರಳಿದ್ದ ವಿಶೇಷ ಹುಲಿ ರಕ್ಷಣಾ ಪಡೆ (ಎಸ್‌ಟಿಪಿಎಫ್) ಮತ್ತು ಪೊಲೀಸ್ ಸಿಬ್ಬಂದಿಯವರು ಲಂಟಾನ ಮರ ಮತ್ತು ಟಾರ್ಪಾಲಿನ್ ಬಳಸಿ ನಿರ್ಮಿಸಿದ್ದ ಆದಿವಾಸಿಗಳ ಶೆಡ್‌ಗಳನ್ನು ನಾಶಪಡಿಸಿ ಹಾಡಿ ಜನರನ್ನು ಬಲವಂತವಾಗಿ ಕಾಡಿನಿಂದ ಹೊರ ಹಾಕಲು ಪ್ರಯತ್ನಿಸಿದ್ದಾರೆ. ವೈಯಕ್ತಿಕ ಅರಣ್ಯ ಭೂಮಿ ಹಕ್ಕುಗಳು, ಸಮುದಾಯ ಅರಣ್ಯ ಹಕ್ಕುಗಳು, ಸಮುದಾಯ ಅರಣ್ಯ ಸಂಪನ್ಮೂಲ ಹಕ್ಕುಗಳು ಅಡಿ ಸಲ್ಲಿಕೆಯಾಗಿದ್ದ ಈ 52 ಕುಟುಂಬಗಳ ಅರ್ಜಿಗಳು ತಿರಸ್ಕೃತಗೊಂಡಿರುವ ಕಾರಣ ಇವರನ್ನು ಅರಣ್ಯದಿಂದ ತೆರವುಗೊಳಿಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಆದರೆ, ಈ ಕುರಿತಾದ ಯಾವುದೇ ಅಧಿಕೃತ ಆದೇಶಗಳು ನಮಗೆ ಬಂದಿಲ್ಲ ಎಂದು ನಾಗರಹೊಳೆ ಆದಿವಾಸಿ ಜಮ್ಮಪಲೆ ಹಕ್ಕು ಸ್ಥಾಪನಾ ಸಮಿತಿ ಮುಖಂಡ ಜೆ.ಎ.ಶಿವು ಹೇಳಿದ್ದಾರೆ.
ಇದಲ್ಲದೆ ಆದಿವಾಸಿಗಳ ಸಂಚಾರಕ್ಕೆ ಇದ್ದ ಏಕೈಕ ರಸ್ತೆಯನ್ನು ಅಧಿಕಾರಿಗಳು ರಾತ್ರೋರಾತ್ರಿ ಚೆಕ್‌ಪೋಸ್ಟ್ ಹಾಕಿ ನಿರ್ಬಂಧ ವಿಧಿಸಿದ್ದಾರೆ. ಆದಿವಾಸಿಗಳ ವಿರುದ್ಧ ನಡೆಯುತ್ತಿರುವ ದಬ್ಬಾಳಿಕೆ ಬಹಿರಂಗಪಡಿಸಲು ಪ್ರಯತ್ನಿಸುತ್ತಿರುವ ಇತರ ಆದಿವಾಸಿಗಳು, ಗ್ರಾಮಸ್ಥರು ಹಾಗೂ ಆದಿವಾಸಿ ಹೋರಾಟಗಾರರನ್ನು ಅರಣ್ಯ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಕೊಲ್ಲೆಹಾಡಿಯ 52 ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಗಳ ಅಡಿ ದೊರೆಯಬೇಕಾದ ಎಲ್ಲಾ ಹಕ್ಕುಗಳು, ಸೌಲಭ್ಯಗಳನ್ನು ಗುರುತಿಸಿ ಒದಗಿಸಿಕೊಡಬೇಕು. ಈ ಕುರಿತು ಚರ್ಚೆಗೆ ಮುಂದಾಗಬೇಕು ಎಂದ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.