ಬೆಂಗಳೂರು-ಪ್ರಯಾಗ್‌ರಾಜ್‌ ವಿಮಾನ ದರ ಶೇ.89ರಷ್ಟು ಏರಿಕೆ! - ಬಹುತೇಕ ನಗರಗಳ ವಿಮಾನದರ ಭಾರೀ ಹೆಚ್ಚಳ

ಸಾರಾಂಶ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದ ಸಂಭ್ರಮ ಮನೆ ಮಾಡಿದ್ದು, ಕೋಟ್ಯಂತರ ಭಕ್ತರು ಮಹಾ ಕುಂಭನಗರಕ್ಕೆ ಆಗಮಿಸುತ್ತಿದ್ದಾರೆ.

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದ ಸಂಭ್ರಮ ಮನೆ ಮಾಡಿದ್ದು, ಕೋಟ್ಯಂತರ ಭಕ್ತರು ಮಹಾ ಕುಂಭನಗರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ಪ್ರಮುಖ ನಗರಗಳಿಂದ ಪ್ರಯಾಗ್‌ರಾಜ್‌ಗೆ ಸಂಚರಿಸುವ ವಿಮಾನಗಳ ದರದಲ್ಲಿ ಹಲವು ಪಟ್ಟು ಏರಿಕೆಯಾಗಿದೆ. ರೈಲುಗಳ ಬುಕ್ಕಿಂಗ್‌ನಲ್ಲಿಯೂ ಹೆಚ್ಚಳವಾಗಿದೆ.

ಪ್ರಯಾಗ್‌ರಾಜ್‌ಗೆ ಸಂಚರಿಸುವ ವಿಮಾನಗಳ ಬುಕ್ಕಿಂಗ್‌ನಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂಕಿಅಂಶದ ಪ್ರಕಾರ, ಬೆಂಗಳೂರು ಮತ್ತು ಪ್ರಯಾಗ್‌ರಾಜ್ ನಡುವಿನ ದರದಲ್ಲಿ ಶೇ.89ರಷ್ಟು ಹೆಚ್ಚಳವಾಗಿದ್ದು, 11,158 ರು. ಆಗಿದೆ.ದೆಹಲಿಯಿಂದ ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನದ ದರದಲ್ಲಿ ಶೇ.21ರಷ್ಟು ಏರಿಕೆಯಾಗಿ 5,748ರು.ಕ್ಕೆ ತಲುಪಿದೆ. ಮುಂಬೈ - ಪ್ರಯಾಗ್‌ರಾಜ್ ನಡುವಿನ ವಿಮಾನ ದರ ಶೇ.13ರಷ್ಟು ಏರಿಕೆಯಾಗಿದ್ದು, 6,381ರು.ಗೆ ತಲುಪಿದೆ. ಈ ಹಿಂದೆ ಭೋಪಾಲ್ ಮತ್ತು ಪ್ರಯಾಗ್‌ರಾಜ್ 2,977 ರು.ಇತ್ತು. ಸದ್ಯದ ದರ 17,796 ರು. ಇದೆ.

ಇನ್ನು ಅಹಮದಾಬಾದ್‌- ಪ್ರಯಾಗ್‌ರಾಜ್ ನಡುವಿನ ದರ ಶೇ.41ರಷ್ಟು ಏರಿಕೆಯೊಂದಿಗೆ 10,364 ರು.ಗೆ ತಲುಪಿದೆ. ಮಾತ್ರವಲ್ಲದೇ ಮಹಾಕುಂಭ ನಡೆಯುತ್ತಿರುವ ಪ್ರಯಾಗ್‌ರಾಜ್‌ಗೆ ಸಮೀಪದಲ್ಲಿರುವ ಲಖನೌ, ವಾರಾಣಾಸಿಗೆ ವಿಮಾನ ಪ್ರಯಾಣ ಶೇ.3ರಿಂದ 21ರಷ್ಟು ಏರಿಕೆಯಾಗಿದೆ. ಈ ನಡುವೆ ಫೆ.26ರವರೆಗೆ ಪ್ರಯಾಗ್‌ರಾಜ್ ರೈಲುಗಳ ಬುಕ್ಕಿಂಗ್‌ನಲ್ಲಿ ಜಿಗಿತ ಕಂಡಿದೆ.

Share this article