ದೊಡ್ಡಬಳ್ಳಾಪುರ: ಮುಂಬರುವ ಬೇಸಿಗೆಯಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಕೊರತೆ ಆಗದಂತೆ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸೂಚಿಸಿದರು.

ದೊಡ್ಡಬಳ್ಳಾಪುರ: ಮುಂಬರುವ ಬೇಸಿಗೆಯಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಕೊರತೆ ಆಗದಂತೆ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸೂಚಿಸಿದರು.

ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಮುಂಬರುವ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿಗೆ ಕೊರೆಯುವ ಕೊಳವೆ ಬಾವಿಗೆ, ಒಂದು ವಾರದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಒದಗಿಸಬೇಕು. ಕುಡಿಯುವ ನೀರು ಸಮಸ್ಯೆಗೆ ತಕ್ಷಣ ಹಣ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಅರ್ಹ ಫಲಾನುಭವಿಗಳಿಗೆ ನಿವೇಶನ:

ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೆ ತಯಾರಿ ನಡೆಸಲಾಗಿದೆ. ಎಲ್ಲಿ ಸರ್ಕಾರಿ ಜಾಗ ಇದೆಯೋ ಅಲ್ಲಿ ನಿವೇಶನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ತಾಲೂಕು ವ್ಯಾಪ್ತಿಯಲ್ಲಿ 500ಕ್ಕಿಂತ ಹೆಚ್ಚು ಸೈಟ್ ಗಳನ್ನು ಸಿದ್ದ ಪಡಿಸಲಾಗಿದೆ. ದೇವನಹಳ್ಳಿಯಲ್ಲಿ ಮುಂದಿನ 15 ದಿನದಲ್ಲಿ 1000 ಸೈಟ್ ಕೊಡಲು ತೀರ್ಮಾನಿಸಲಾಗಿದೆ. ವಸತಿ ಯೋಜನೆಯಡಿ ಜಿಲ್ಲೆಗೆ 2500 ನಿವೇಶನ ಮಂಜೂರಾಗಿದೆ. ತಾಲೂಕಿಗೆ 500ರಂತೆ ಹಂಚಿಕೆ ಮಾಡಲಾಗುವುದು. ಮನೆ ಕಟ್ಟಲು ನಿವೇಶನ ಅಗತ್ಯವಿದ್ದು, ಮೊದಲು ನಿವೇಶನ ಹಂಚಿಕೆಗೆ ಕ್ರಮ ವಹಿಸಲಾಗುವುದು ಎಂದರು.

ಬೆಂಬಲ ಬೆಲೆ ಯೋಜನೆಯಡಿ ರಾಗಿ ನೋಂದಣಿಗೆ ಜಿಲ್ಲೆಯಲ್ಲಿ ಸುಮಾರು 2500 ರೈತರು ಬಾಕಿ ಉಳಿದಿದ್ದಾರೆ. ಅವರಿಗೆ ಉಪ ಸಮಿತಿಯಲ್ಲಿ ಚರ್ಚಿಸಿ ನಂತರ ತೀರ್ಮಾನಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು ಕೈಗಾರಿಕೆಗಳ ಸಂಖ್ಯೆ ಹಾಗೂ ಅಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಪಟ್ಟಿ ತಯಾರಿಸಿ ತ್ವರಿತವಾಗಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕ ಶ್ರೀನಿವಾಸ್, ಶಾಸಕ ಧೀರಜ್ ಮುನಿರಾಜು ಮಾತನಾಡಿದರು. ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ ಹೆಗಡೆ, ಜಿಲ್ಲಾಧ್ಯಕ್ಷ ರಾಜಣ್ಣ, ಬಯಪ ಅಧ್ಯಕ್ಷ ವಿ. ಶಾಂತಕುಮಾರ್, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಸಿಇಒ ಡಾ. ಅನುರಾಧ, ಎಸ್ಪಿ ಚಂದ್ರಕಾಂತ್, ಸಚಿವರ ಆಪ್ತ ಕಾರ್ಯದರ್ಶಿ ನಟರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

9ಕೆಡಿಬಿಪಿ2-

ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.