ಗೋಪಾಲ್ ಯಡಗೆರೆ
ಶಿವಮೊಗ್ಗ : ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಾಗಿ ಆರ್‌ಬಿಐ ಆರಂಭಿಸಿದ ತಕ್ಷಣದ ಚೆಕ್ ನಗದೀಕರಣದ ಪ್ರಕ್ರಿಯೆಗೆ ತಾಂತ್ರಿಕ ಅಡಚಣೆ ಎದುರಾಗಿದ್ದರಿಂದ ಉದ್ಯಮ ವಲಯ ತತ್ತರಿಸಿದ್ದು, ಕಳೆದ 10 ದಿನಗಳಿಂದ ಬ್ಯಾಂಕ್‌ಗಳಿಗೆ ಹಾಜರುಪಡಿಸಿದ ಚೆಕ್‌ಗಳು ಇದುವರೆಗೆ ನಗದೀಕರಣಗೊಳ್ಳದೆ ಇರುವ ಕಾರಣ ಲಕ್ಷಾಂತರ ರು. ವ್ಯವಹಾರಕ್ಕೆ ಅಡಚಣೆಯಾಗಿದೆ.
ಈ ಹಿಂದೆ ಉದ್ಯಮಿಗಳು ಅಥವಾ ಗ್ರಾಹಕರು ತಾವು ಪಡೆದ ಚೆಕ್‌ಗಳನ್ನು ಬ್ಯಾಂಕ್‌ಗೆ ಕ್ಲಿಯರಿಂಗ್‌ಗಾಗಿ ಹಾಜರುಪಡಿಸಿ ಕೆಲವು ದಿನಗಳವರೆಗೆ ಕಾಯಬೇಕಿತ್ತು. ಚೆಕ್ ಸ್ವೀಕರಿಸಿದ ಬ್ಯಾಂಕ್ ಯಾವ ಬ್ಯಾಂಕ್‌ನ ಚೆಕ್ ಇದೆಯೋ ಆ ಬ್ಯಾಂಕ್‌ಗೆ ಆಗಿನ ಎಸ್‌ಬಿಎಂ ಬ್ಯಾಂಕ್ ಮೂಲಕ ಕಳುಹಿಸುತ್ತಿತ್ತು. ನಿತ್ಯ ಎಸ್‌ಬಿಎಂನಲ್ಲಿ ಕ್ಲಿಯರಿಂಗ್ ಹೌಸ್ ನಡೆಯುತ್ತಿತ್ತು. ಅಲ್ಲಿ ಪ್ರತಿ ಬ್ಯಾಂಕಿನ ಪ್ರತಿನಿಧಿಗಳು ಸೇರಿ ತಮ್ಮ ಬ್ಯಾಂಕಿನ ಚೆಕ್ ಪಡೆದು ಬ್ಯಾಂಕಿಗೆ ಹೋಗಿ ತಮ್ಮ ಶಾಖೆಗಳಿಗೆ ಕಳುಹಿಸುತ್ತಿದ್ದವು. ಹೀಗಾಗಿ ವಾರದವರೆಗೆ ಚೆಕ್ ಕ್ಲಿಯರ್ ಆಗಲು ಕಾಯಬೇಕಿತ್ತು.
ಚೆಕ್ ಕ್ಲಿಯೆರೆನ್ಸ್ ವಿಳಂಬವನ್ನು ಸರಿಪಡಿಸುವ ಮೊದಲ ಹಂತದ ಸುಧಾರಣೆಯಾಗಿ ಆನ್‌ಲೈನ್ ಮೂಲಕ ಕ್ಲಿಯರೆನ್ಸ್ ಜಾರಿಗೊಳಿಸಲಾಯಿತು. ಕೇಂದ್ರೀಕೃತ ವ್ಯವಸ್ಥೆ ಎಂದರೆ ಸಿಟಿಎಸ್ ಎಂಬ ಡಿಜಿಟಲ್ ವ್ಯವಸ್ಥೆ ಜಾರಿಗೆ ಬಂದಿತು.
ಏನು ಸುಧಾರಣೆ?:
ಇದೀಗ ಆರ್‌ಬಿಐ ಇನ್ನಷ್ಟು ಸುಧಾರಣೆಯ ಭಾಗವಾಗಿ 2 ಹಂತದಲ್ಲಿ ಯೋಜನೆ ರೂಪಿಸಿ ಚೆಕ್ ಸಲ್ಲಿಕೆಯಾದ ಒಂದೇ ದಿನದಲ್ಲಿ ಕ್ಲಿಯರಿಂಗ್ ಆಗುವಂತೆ ಮಾಡಿದೆ. ಇದರಲ್ಲಿ ಮೊದಲ ಹಂತ ಆ.4 ರಿಂದಲೇ ಜಾರಿಗೆ ಬಂದಿದ್ದು, ಪ್ರಸ್ತುತಪಡಿಸಿದ ಚೆಕ್‌ಗಳು ಅಂದೇ ಸಂಜೆ 7 ಗಂಟೆಯೊಳಗಾಗಿ ಹಾಜರುಪಡಿಸಿದವರ ಖಾತೆಗೆ ಸಂಬಂಧಪಟ್ಟ ಬ್ಯಾಂಕುಗಳು ಕ್ಲಿಯರ್ ಮಾಡಿ ಜಮಾ ಮಾಡಬೇಕು. ತಪ್ಪಿದಲ್ಲಿ ಚೆಕ್‌ಗಳು ಸ್ವಯಂ ಸ್ವೀಕೃತವಾಗಿ ಹಣ ಪಾವತಿಯಾಗುತ್ತದೆ. 2ನೇ ಹಂತವು 2026ರ ಜ.3ರಿಂದ ಜಾರಿಗೆ ಬರಲಿದ್ದು, ಈ ಹಂತದಲ್ಲಿ ಹಾಜರುಪಡಿಸಿದ ಚೆಕ್‌ಗಳು 3 ಗಂಟೆಯ ಒಳಗಾಗಿ ಕ್ಲಿಯರೆನ್ಸ್ ಆಗಿ ಹಾಜರುಪಡಿಸಿದವರ ಖಾತೆಗೆ ಹಣ ಜಮಾ ಆಗಬೇಕು. ಇದು ಆಗುವಂತೆ ಆರ್‌ಬಿಐ ಈ ಹಿಂದೆ ಇದ್ದ ಸಿಟಿಎಸ್ ವ್ಯವಸ್ಥೆಯನ್ನು ನಿರಂತರ ಕ್ಲಿಯರಿಂಗ್ ವ್ಯವಸ್ಥೆಯಾಗಿ ರೂಪಾಂತರಗೊಳಿಸಿದೆ.
ಆದರೆ ಸದ್ಯ ಆಗುತ್ತಿರುವುದೇನು?:
ಆರ್‌ಬಿಐ ಪ್ರಕಟಣೆ ನೋಡಿದ ಉದ್ಯಮಿಗಳು ತಕ್ಷಣವೇ ಚೆಕ್ ಹಣ ತಮ್ಮ ಖಾತೆಗೆ ಜಮಾ ಆಗುತ್ತದೆ ಎಂದು ಖುಷಿಯಾಗಿದ್ದರು. ಆದರೆ, ಅ.4ರಿಂದ ಬ್ಯಾಂಕ್ ಶಾಖೆಗೆ ಹಾಜರುಪಡಿಸಿದ ಚೆಕ್‌ಗಳು ಆ ದಿನವೇ ಕ್ಲಿಯರಿಂಗ್ ಆಗುವುದಿರಲಿ 10 ದಿನ ಕಳೆದರೂ ಖಾತೆಗೆ ಹಣ ಜಮಾ ಆಗಿಲ್ಲ. ಇದರಿಂದ ಏಕಾಏಕಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಉದ್ಯಮ ವಲಯ ಕಂಗಾಲಾಗಿದೆ.
ಕಳೆದ 10 ದಿನಗಳಿಂದ ತಮ್ಮ ಖಾತೆಗೆ ಯಾವುದೇ ಚೆಕ್ ಹಣ ಜಮೆ ಆಗಿಲ್ಲ ಎನ್ನುತ್ತಿರುವ ಗ್ರಾಹಕರು ಈ ಕುರಿತು ಬ್ಯಾಂಕಿನ ಪ್ರಬಂಧಕರಲ್ಲಿ ವಿಚಾರಿಸಿದರೆ ಬ್ಯಾಂಕ್‌ನವರಿಗೂ ಈ ಕುರಿತು ಸರಿಯಾದ ಮಾಹಿತಿ ಇಲ್ಲ. ಸಾಫ್ಟ್‌ವೇರ್ ಸಮಸ್ಯೆ ಇರಬೇಕು. ಇನ್ನೊಂದು ದಿನ ಕಾಯಿರಿ, ಎಲ್ಲವೂ ಸರಿಯಾಗುತ್ತದೆ ಎನ್ನುತ್ತಿದ್ದಾರೆ.
ಒಟ್ಟಾರೆಯಾಗಿ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ ಎಂದು ಖುಷಿಯಾಗಿದ್ದ ಗ್ರಾಹಕರು ತಕ್ಷಣಕ್ಕಂತೂ ದುಃಖದಲ್ಲಿದ್ದಾರೆ. ಈ ಬಗ್ಗೆ ಆರ್‌ಬಿಐ ಇದುವರೆಗೆ ಸರಿಯಾದ ಸ್ಪಷ್ಟನೆ ನೀಡಿಲ್ಲ.
ಚೆಕ್ ಮಾಹಿತಿಯೇ ಇಲ್ಲ
ಕಳೆದ 10 ದಿನಗಳಿಂದ ಖಾತೆಗೆ ಹಾಜರುಪಡಿಸಿದ ಯಾವ ಚೆಕ್‌ಗಳೂ ಜಮೆಯಾಗುತ್ತಿಲ್ಲ. ಇದರಿಂದ ನಾವು ಕಂಗಾಲಾಗಿದ್ದೇವೆ. ಈ ಚೆಕ್‌ಗಳನ್ನು ನಂಬಿಕೊಂಡು ಬೇರೆ ಕಮಿಟ್‌ಮೆಂಟ್ ಮಾಡಿಕೊಂಡಿರುತ್ತೇವೆ. ಆದರೆ ಚೆಕ್‌ಗಳ ಕುರಿತು ಯಾವ ಮಾಹಿತಿಯೂ ಇಲ್ಲವಾಗಿದೆ.
-ಸುರೇಶ್ ಉಮಾರಾಣಿ, ಖಾಸಗಿ ಸಂಸ್ಥೆ ಮ್ಯಾನೇಜರ್