ಬಾರ್‌, ಪಬ್‌ಗಳಿಗೆ ಗುರುತಿನ ಚೀಟಿ ಇಲ್ಲದಿದ್ರೆ ಪ್ರವೇಶವಿಲ್ಲ

Published : Jun 09, 2026, 06:38 AM IST
Priyank Kharge

ಸಾರಾಂಶ

ಬಾರ್‌, ಕ್ಲಬ್‌, ಮದ್ಯ ಮಳಿಗೆ ಸೇರಿ ಮದ್ಯಪಾನ ಮಾಡುವ ಯಾವುದೇ ಸ್ಥಳಗಳಲ್ಲಿ ಕಡ್ಡಾಯವಾಗಿ ವಯಸ್ಸಿನ ಪರಿಶೀಲನೆ ಮಾಡಬೇಕು. ಇದಕ್ಕಾಗಿ ಪ್ರವೇಶಕ್ಕೆ ಸರ್ಕಾರ ನೀಡಿರುವ ಅಧಿಕೃತ ಗುರುತಿನ ಚೀಟಿ (ಐಡಿ ಕಾರ್ಡ್‌) ಕಡ್ಡಾಯ ಮಾಡಬೇಕು’ -ಖರ್ಗೆ

  ಬೆಂಗಳೂರು :  ‘ಬಾರ್‌, ಕ್ಲಬ್‌, ಮದ್ಯ ಮಳಿಗೆ ಸೇರಿ ಮದ್ಯಪಾನ ಮಾಡುವ ಯಾವುದೇ ಸ್ಥಳಗಳಲ್ಲಿ ಕಡ್ಡಾಯವಾಗಿ ವಯಸ್ಸಿನ ಪರಿಶೀಲನೆ ಮಾಡಬೇಕು. ಇದಕ್ಕಾಗಿ ಪ್ರವೇಶಕ್ಕೆ ಸರ್ಕಾರ ನೀಡಿರುವ ಅಧಿಕೃತ ಗುರುತಿನ ಚೀಟಿ (ಐಡಿ ಕಾರ್ಡ್‌) ಕಡ್ಡಾಯ ಮಾಡಬೇಕು’ ಎಂದು ಹಿರಿಯ ಅಧಿಕಾರಿಗಳಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಸಂಬಂಧಪಟ್ಟ ಮಳಿಗೆಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ತಿಳಿವಳಿಕೆ ಮೂಡಿಸಬೇಕು. ವಯಸ್ಸಿನ ಪುರಾವೆಯ ಐಡಿ ಕಾರ್ಡ್ ಇಲ್ಲದಿದ್ದರೆ ಪ್ರವೇಶಕ್ಕೆ ಅವಕಾಶ ನೀಡಬಾರದು (ನೋ ಐಡಿ, ನೋ ಎಂಟ್ರಿ). ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು, ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಪ್ರಿಯಾಂಕ್ ಮನವಿ ಮಾಡಿದ್ದಾರೆ.

3 ಯುವಕರಲ್ಲಿ ಒಬ್ಬರಿಗೆ ಮದ್ಯ ವ್ಯಸನ:

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಪ್ರಿಯಾಂಕ್ ಖರ್ಗೆ ಅವರು, ‘ಬೆಂಗಳೂರಿನಲ್ಲಿ ಹದಿಹರೆಯದ ಯುವ ಜನತೆಯಲ್ಲಿ ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಬಳಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿನ 4 ಪ್ರಮುಖ ಶಿಕ್ಷಣ ಸಂಸ್ಥೆಗಳ ಪಿಯುಸಿ, ಪ್ರೌಢ ಶಾಲೆ ಹಾಗೂ ಪದವಿ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಲಾಯಿತು. ಈ ವರದಿಯಲ್ಲಿ 4,093 ವಿದ್ಯಾರ್ಥಿಗಳ ಪೈಕಿ ಪ್ರತಿ ಮೂವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಬಳಕೆ ಮಾಡುತ್ತಿರುವ ಆಘತಕಾರಿ ಅಂಶ ಬೆಳಕಿಗೆ ಬಂದಿದೆ’ ಎಂದು ಹೇಳಿದರು.

ಅಪ್ರಾಪ್ತ ವಯಸ್ಕರಲ್ಲಿನ ಮದ್ಯಪಾನಕ್ಕೆ ಕೇವಲ ಪರವಾನಗಿ ನಿಯಮಗಳು ಸಾಲದು. ಬದಲಿಗೆ ಯುವಕರ ಸುರಕ್ಷತೆ, ಆರೋಗ್ಯದ ದೃಷ್ಟಿಯಿಂಧ ಗಂಭೀರ ಕಾಳಜಿ ವಹಿಸಬೇಕು. ಮದ್ಯ ಮಾರಾಟ ಮಾಡುವ ಎಲ್ಲಾ ಮಳಿಗೆ ಅಥವಾ ಸಂಸ್ಥೆಗಳು ವಯಸ್ಸಿನ ಪರಿಶೀಲನಾ ನಿಯಮ ಪಾಲಿಸಬೇಕು. ಕಡ್ಡಾಯವಾಗಿ ಸರ್ಕಾರ ನೀಡಿದ ಅಧಿಕೃತ ಗುರುತಿನ ಚೀಟಿ ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಪ್ರಿಯಾಂಕ್‌ ಹೇಳಿದ್ದಾರೆ.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ:

ಅಪ್ರಾಪ್ತ ವಯಸ್ಕರಿಗೆ ಮದ್ಯ ಸರಬರಾಜು ಮಾಡುವ ಅಥವಾ ಅಪ್ರಾಪ್ತರ ಮದ್ಯಪಾನಕ್ಕೆ ಪ್ರಚೋದನೆ ನೀಡುವ ಯಾವುದೇ ಸಂಸ್ಥೆಯ ವಿರುದ್ಧ ಕಾನೂನಿನಡಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಸ್ಥೆ ಆವರಣದೊಳಗೆ ನಡೆಯುವ ನಿಯಮ ಉಲ್ಲಂಘನೆಗಳಿಗೆ ಆಯಾ ಸಂಸ್ಥೆಯ ಮಾಲೀಕರು, ವ್ಯವಸ್ಥಾಪಕರು, ಪರವಾನಗಿದಾರರು ಮತ್ತು ಕಾರ್ಯಕ್ರಮದ ಆಯೋಜಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಸಿಸಿಟಿವಿ ಕಡ್ಡಾಯ:

ಪ್ರವೇಶ ದ್ವಾರದ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ತನಿಖೆಯ ಸಮಯದಲ್ಲಿ ನಿಯಮ ಪಾಲನೆ ಪರಿಶೀಲಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ನಿಗದಿತ ಅವಧಿಯವರೆಗೆ ಸುರಕ್ಷಿತವಾಗಿ ಸಂಗ್ರಹಿಸಿಡಬೇಕು.

ಅಪ್ರಾಪ್ತರಿಗೆ ಮದ್ಯ ನೀಡುವ ಬಗ್ಗೆ ಶೂನ್ಯ ಸಹಿಷ್ಣುತೆ:

ಅಪ್ರಾಪ್ತ ವಯಸ್ಕರ ಮದ್ಯಪಾನಕ್ಕೆ ಪ್ರೋತ್ಸಾಹ ನೀಡುವ ಅಥವಾ ಅದಕ್ಕೆ ಕಾರಣವಾಗುವ ಸಂಸ್ಥೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅಳವಡಿಸಿಕೊಳ್ಳುತ್ತೇವೆ. ನಮ್ಮ ಸರ್ಕಾರ ಯಾವುದೇ ರಾಜಿ ಇಲ್ಲದೆ ಕ್ರಮ ಕೈಗೊಳ್ಳಲಿದೆ.

ಅಪ್ರಾಪ್ತ ವಯಸ್ಕರು ಮದ್ಯ, ತಂಬಾಕು ಮತ್ತು ಮಾದಕ ದ್ರವ್ಯಗಳಿಗೆ ಬಲಿಯಾಗುವುದನ್ನು ತಡೆಯಲು ಪೊಲೀಸರು ಶಿಕ್ಷಣ ಸಂಸ್ಥೆಗಳು, ಪೋಷಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯೂಎ) ಮತ್ತು ನಾಗರಿಕ ಗುಂಪುಗಳೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಶೇ.33ರಷ್ಟು ವಿದ್ಯಾರ್ಥಿಗಳು ಮದ್ಯದಾಸರು!

ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು, ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಮಣಿಪಾಲದ ಕಸ್ತೂರಿ ಬಾ ವೈದ್ಯಕೀಯ ಕಾಲೇಜಿನ ಸಂಶೋಧಕರು ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡ ಯುವಕರಲ್ಲಿ ಶೇ.33 ರಷ್ಟು ಮಂದಿ ಮದ್ಯ ಸೇವಿಸುತ್ತಿದ್ದರೆ, ಶೇ. 18 ರಷ್ಟು ಮಂದಿ ತಂಬಾಕು ಚಟಕ್ಕೆ ದಾಸರಾಗಿರುವುದು ಬೆಳಕಿಗೆ ಬಂದಿದೆ.

ಇದು ತಂಬಾಕು ಬಳಕೆಯ ರಾಷ್ಟ್ರೀಯ ಸರಾಸರಿ (ಶೇ. 8.7) ಮತ್ತು ಮದ್ಯಪಾನದ ರಾಷ್ಟ್ರೀಯ ಸರಾಸರಿಗಿಂತ (ಶೇ. 7.9) ಹೆಚ್ಚಿದೆ. ಅಲ್ಲದೆ, ಕರ್ನಾಟಕದ ಒಟ್ಟಾರೆ ಸರಾಸರಿಯಾದ ಶೇ.4.7 (ತಂಬಾಕು) ಮತ್ತು ಶೇ.8.5ಕ್ಕಿಂತಲೂ (ಮದ್ಯಪಾನ) ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಹದಿಹರೆಯದವರು ಮದ್ಯಪಾನ ಮಾಡಲು ಪ್ರಾರಂಭಿಸುವ ಸರಾಸರಿ ವಯಸ್ಸು 17 ವರ್ಷ, ಕೆಲವರು ಕೇವಲ 8-10 ವರ್ಷ ವಯಸ್ಸಿನಲ್ಲೇ ಮದ್ಯಪಾನದ ಹವ್ಯಾಸ ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ ಎಂದು ಗೃಹ ಸಚಿವರ ಕಚೇರಿಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಚಿವರ ಸೂಚನೆ ಏನು?

- ಹದಿಹರೆಯದ ಯುವ ಜನತೆಯಲ್ಲಿ ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಬಳಕೆ ಹೆಚ್ಚಳ

- ಬೆಂಗಳೂರಿನ ಶೇ.33 ವಿದ್ಯಾರ್ಥಿಗಳು ಮದ್ಯದಾಸರ ಎಂದು ಆಧ್ಯಯನದಲ್ಲಿ ಬಹಿರಂಗ

- ಇದು ಆತಂಕಕಾರಿ. ಹೀಗಾಗಿಯೇ ಪಬ್‌, ಬಾರ್‌ಗೆ ನೋ ಐಡಿ, ನೋ ಎಂಟ್ರಿ ನಿಯಮ

- ಈ ಕುರಿತು ಸಂಬಂಧಪಟ್ಟ ಮಳಿಗೆಗಳ ಮಾಲೀಕರಿಗೆ ನೋಟಿಸ್ ಜಾರಿಮಾಡಿ ಜಾಗೃತಿ

- ವಯಸ್ಸಿನ ಪುರಾವೆಯ ಐಡಿ ಕಾರ್ಡ್ ಇಲ್ಲದಿದ್ದರೆ ಪ್ರವೇಶಕ್ಕೆ ಅವಕಾಶ ನೀಡಬಾರದು

- ಪೋಷಕರು, ಶಿಕ್ಷಕರು, ಬಾರ್‌ ಮಾಲೀಕರು ಪೊಲೀಸರೊಂದಿಗೆ ಪೂರ್ಣ ಸಹಕರಿಸಬೇಕು

- ಬಾರ್‌ ದ್ವಾರದಲ್ಲಿ ಸಿಸಿಟೀವಿ ಹಾಕಬೇಕು. ಅಪ್ರಾಪ್ತರಿಗೆ ಮದ್ಯ ನೀಡಿದರೆ ಕಠಿಣ ಕ್ರಮ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗೈನೆಕಾಲಜಿಸ್ಟ್‌ಗಳಿಗಾಗಿ ಐವಿಎಫ್ ಮತ್ತು ಎಆರ್‌ಟಿ ಕುರಿತ ಹೈಬ್ರಿಡ್ ಫೆಲೋಷಿಪ್ ಆರಂಭಿಸಿದ ಮಿಲನ್ ಅಕಾಡೆಮಿ
ದಳ ಅಭ್ಯರ್ಥಿ ಗೋವಿಂದರಾಜು ಆಸ್ತಿ ₹173 ಕೋಟಿ!