ಬಿಟ್‌ಕಾಯಿನ್‌ ಹಗರಣದಲ್ಲಿ ನಲಪಾಡ್‌ಗೆ ಇದೀಗ ಎಸ್ಐಟಿ ಚಾರ್ಜ್‌ಶೀಟ್‌ ಶಾಕ್‌!

Published : Jun 09, 2026, 04:38 AM IST
nalapad case

ಸಾರಾಂಶ

ಬಿಟ್‌ ಕಾಯಿನ್ ಹಗರಣ ಸಂಬಂಧ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ನ ಹಿರಿಯ ಮುಖಂಡರೂ ಆಗಿರುವ ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಹಿರಿಯ ಪುತ್ರ ಮೊಹಮ್ಮದ್ ನಲಪಾಡ್ ಅವರಿಗೆ ಸಂಕಷ್ಟ ಎದುರಾಗಿದೆ.

 ಬೆಂಗಳೂರು :  ಬಿಟ್‌ ಕಾಯಿನ್ ಹಗರಣ ಸಂಬಂಧ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ನ ಹಿರಿಯ ಮುಖಂಡರೂ ಆಗಿರುವ ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಹಿರಿಯ ಪುತ್ರ ಮೊಹಮ್ಮದ್ ನಲಪಾಡ್ ಅವರಿಗೆ ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಲಪಾಡ್‌ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

ಇದೇ ಪ್ರಕರಣದಡಿ ಹಣ ವರ್ಗಾವಣೆ ಆರೋಪದಲ್ಲಿ ಇ.ಡಿ (ಜಾರಿ ನಿರ್ದೇಶನಾಲಯ) ತನಿಖೆ ನಡೆಸುತ್ತಿದ್ದು, ಇತ್ತೀಚೆಗೆ ನಲಪಾಡ್‌ ಮನೆ ಮೇಲೆ ಈ ಸಂಬಂಧ ದಾಳಿಯೂ ನಡೆಸಿತ್ತು. ಇದರ ಬೆನ್ನಲ್ಲೇ ಎಸ್‌ಐಟಿ ಚಾರ್ಜ್‌ಶೀಟ್‌ ಸಲ್ಲಿಸಿದೆ.

ತುಮಕೂರಿನ ಖಾಸಗಿ ಕಂಪನಿಯ ಬಿಟ್‌ ಕಾಯಿನ್‌ ಕಳವು ಕೃತ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ನಲಪಾಡ್‌ಗೆ ‘ಪಾಲು’ ಸಿಕ್ಕಿದೆ ಎಂದು ಎಸ್‌ಐಟಿ ಉಲ್ಲೇಖಿಸಿರುವುದಾಗಿ ‘ಕನ್ನಡಪ್ರಭ’ಕ್ಕೆ ಮೂಲಗಳು ತಿಳಿಸಿವೆ. ನಲಪಾಡ್ ಜೊತೆ ಅವರ ಆಪ್ತ ಸ್ನೇಹಿತರ ಹೆಸರೂ ಹಗರಣದಲ್ಲಿ ಪ್ರಸ್ತಾಪವಾಗಿದೆ ಎನ್ನಲಾಗಿದೆ.

ನಲಪಾಡ್‌ಗೆ ಸಿಕ್ಕಿದ್ದೆಷ್ಟು?:

2017ರಲ್ಲಿ ಬಿಟ್ ಕಾಯಿನ್ ಟ್ರೇಡಿಂಗ್ ಕಂಪನಿಯಾದ ತುಮಕೂರಿನ ಖಾಸಗಿ ಕಂಪನಿ ವೆಬ್‌ಸೈಟ್‌ಗೆ ಕನ್ನ ಹಾಕಿ 60 ಕಾಯಿನ್‌ಗಳನ್ನು (2024ರಲ್ಲಿ ಮಾರುಕಟ್ಟೆ ಮೌಲ್ಯ 1.14 ಕೋಟಿ ರು.) ಶ್ರೀಕಿ ಗ್ಯಾಂಗ್ ದೋಚಿತ್ತು. ಈ ಬಗ್ಗೆ ತುಮಕೂರಿನ ಹೊಸ ಬಡಾವಣೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ಪೂರ್ಣಗೊಳಿಸಿದ ಎಸ್‌ಐಟಿ ಅಧಿಕಾರಿಗಳು, ಕೆಲ ದಿನಗಳ ಹಿಂದೆ ಹ್ಯಾಕರ್ ಶ್ರೀಕಿ ಮತ್ತು ಆತನ ಸ್ನೇಹಿತ ರಾಬಿನ್ ಖಂಡೇವಾಲಾ, ಮೊಹಮ್ಮದ್ ನಲಪಾಡ್ ಸೇರಿ ಇತರರ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಈ ಕೃತ್ಯದಲ್ಲಿ ದೋಚಿದ್ದ ಬಿಟ್‌ ಕಾಯಿನ್‌ಗಳನ್ನು ನಲಪಾಡ್ ಸಂಪರ್ಕ ಜಾಲ ಬಳಸಿ ಶ್ರೀಕಿ ನಗದು ಮಾಡಿಕೊಂಡಿದ್ದ. ಇದಕ್ಕೆ ಪ್ರತಿಯಾಗಿ ನಲಪಾಡ್ ಅವರಿಗೆ ‘ಹಣ’ ಸಿಕ್ಕಿದೆ. ತನ್ನ ಮುಂಬೈ ಗೆಳೆಯನ ಮುಖಾಂತರ ಹವಾಲಾದಲ್ಲಿ ನಲಪಾಡ್‌ಗೆ ಹಣ ವರ್ಗಾವಣೆಯಾಗಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.

ದುಬಾರಿ ಕಾರು ಖರೀದಿ

ಇದೇ ಪ್ರಕರಣದ ಹಣದಲ್ಲೇ ಐಷರಾಮಿ ಕಾರನ್ನು ನಲಪಾಡ್ ಆಪ್ತ ಸ್ನೇಹಿತ ಹಾಗೂ ರಾಜ್ಯದ ನಿವೃತ್ತ ಐಪಿಎಸ್ ಅಧಿಕಾರಿ ಪುತ್ರ ಖರೀದಿಸಿದ್ದ. ಈ ಸಂಬಂಧ ವಿಚಾರಣೆ ನಡೆಸಿ ಈತನಿಂದ ಕೂಡ ಎಸ್ಐಟಿ ಕೇಳಿ ಪಡೆದಿದೆ ಎಂದು ಗೊತ್ತಾಗಿದೆ.

ನಲಪಾಡ್ ಬಾಲ್ಯ ಸ್ನೇಹಿತರು

ಪ್ರೌಢಶಾಲೆಯಲ್ಲಿ ಓದುವಾಗ ಮೊಹಮ್ಮದ್ ನಲಪಾಡ್ ಸೋದರ ಉಮರ್ ನಲವಾಡ್ ಹಾಗೂ ಶ್ರೀಕಿ ಸಹಪಾಠಿಗಳಾಗಿದ್ದು, ಬಾಲ್ಯದಿಂದ ಅವರಿಬ್ಬರು ಸ್ನೇಹಿತರು. ತನ್ನ ಸೋದರನ ಮೂಲಕ ಮೊಹಮ್ಮದ್‌ಗೆ ಶ್ರೀಕಿ ಗೆಳೆತನವಾಯಿತು. ಈ ಸ್ನೇಹದಲ್ಲೇ ಬಿಟ್ ಕಾಯಿನ್ ದಂಧೆಗೆ ಸಾಥ್ ಕೊಟ್ಟಿರಬಹುದು ಎಂಬ ಆರೋಪ ಕೇಳಿಬಂದಿದೆ.

ಚಾರ್ಜ್‌ಶೀಟಲ್ಲಿ ಏನಿದೆ?

- 2017ರಲ್ಲಿ ತುಮಕೂರಿನ ಬಿಟ್ ಕಾಯಿನ್ ಟ್ರೇಡಿಂಗ್ ಕಂಪನಿಯೊಂದಕ್ಕೆ ಶ್ರೀಕಿ ಗ್ಯಾಂಗ್‌ ಕನ್ನ

60 ಕಾಯಿನ್‌ಗಳ (2024ರಲ್ಲಿ ಮಾರುಕಟ್ಟೆ ಮೌಲ್ಯ 1.14 ಕೋಟಿ ರು.) ದೋಚಿದ್ದ ಶ್ರೀಕಿ ಗ್ಯಾಂಗ್

- ಕೃತ್ಯದಲ್ಲಿ ದೋಚಿದ್ದ ಬಿಟ್‌ ಕಾಯಿನ್‌ಗಳು ನಲಪಾಡ್ ಸಂಪರ್ಕ ಜಾಲ ಬಳಸಿ ಶ್ರೀಕಿ ನಗದೀಕರಣ

- ಮುಂಬೈ ಗೆಳೆಯನ ಮುಖಾಂತರ ಹವಾಲಾದಲ್ಲಿ ನಲಪಾಡ್‌ಗೆ ಹಣ ವರ್ಗಾವಣೆಯಾಗಿತ್ತು

- ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿರುವ ಅಂಶಗಳ ಬಗ್ಗೆ ಮೂಲಗಳಿಂದ ಕನ್ನಡಪ್ರಭಕ್ಕೆ ಮಾಹಿತಿ

- ಈಗಾಗಲೇ ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದಲೂ ತಬಿಖೆ ಪ್ರಗತಿಯಲ್ಲಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಹಳಿ ಇಲ್ಲದ ನೀಲಿ ಮಾರ್ಗಕ್ಕೆ ಮೆಟ್ರೋ ಬಂತು
ಡಿಜಿಟಲ್‌ ಹಾಜರಾತಿ : ಶಾಲಾ ಶಿಕ್ಷಕರಿಗೆ ಫಜೀತಿ!