ರಸ್ತೆಗೆ ಕಸ ಎಸೆದರೆ ಇನ್ನು ಮುಂದೆ ₹2 ಸಾವಿರ ದಂಡ!

Published : Sep 13, 2025, 08:22 AM IST
Bengaluru Garbage Dump

ಸಾರಾಂಶ

ನಗರದ ರಸ್ತೆಗಳು, ಕಾಲುವೆಗಳು ಹಾಗೂ ಬ್ಲಾಕ್‌ ಸ್ಪಾಟ್‌ಗಳಿಗೆ ಕಸ ಎಸೆದರೆ ಇನ್ನು ಮುಂದೆ 2 ಸಾವಿರ ರು. ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ತಿಳಿಸಿದರು.

  ಬೆಂಗಳೂರು :  ನಗರದ ರಸ್ತೆಗಳು, ಕಾಲುವೆಗಳು ಹಾಗೂ ಬ್ಲಾಕ್‌ ಸ್ಪಾಟ್‌ಗಳಿಗೆ ಕಸ ಎಸೆದರೆ ಇನ್ನು ಮುಂದೆ 2 ಸಾವಿರ ರು. ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ತಿಳಿಸಿದರು.

ವಸಂತನಗರದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈವರೆಗೆ ರಸ್ತೆ ಕಸ ಎಸೆದರೆ ಮೊದಲ ಬಾರಿಗೆ 500 ರು. ಎರಡನೇ ಬಾರಿಗೆ 1 ಸಾವಿರ ರು. ಮೂರನೇ ಬಾರಿಗೆ ಕಸ ಎಸೆದರೆ 2 ಸಾವಿರ ರು. ದಂಡ ಹಾಕಲಾಗುತ್ತಿತ್ತು. ಇನ್ನು ಮುಂದೆ 2 ಸಾವಿರ ರು. ದಂಡ ವಿಧಿಸುವುದಕ್ಕೆ ತೀರ್ಮಾನಿಸಲಾಗಿದೆ. ಹಾಗಾಗಿ, ನಗರದ ಪ್ರತಿಯೊಬ್ಬರು ಹಸಿ ಮತ್ತು ಒಣ ಕಸ ಬೇರ್ಪಡಿಸಿ ಪಾಲಿಕೆ ಆಟೋಗಳಿಗೇ ನೀಡುವಂತೆ ಮನವಿ ಮಾಡಿದರು.

ಕಳೆದ ಆಗಸ್ಟ್‌ನಲ್ಲಿ ನಗರದಲ್ಲಿ 1483 ಬ್ಲಾಕ್‌ ಸ್ಪಾಟ್ ಗಳ ಕುರಿತು ದೂರು ಬಂದಿದ್ದವು, ಈ ಪೈಕಿ 1464 ಬ್ಲಾಕ್‌ ಸ್ಪಾಟ್‌ ಸ್ವಚ್ಛಗೊಳಿಸಲಾಗಿತ್ತು. ಸೆಪ್ಟಂಬರ್‌ನಲ್ಲಿ 515 ದೂರು ಬಂದಿದ್ದು, 423 ಸ್ವಚ್ಛಗೊಳಿಸಲಾಗಿದ್ದು, ಇನ್ನೂ 92 ಸ್ವಚ್ಛಗೊಳಿಸಬೇಕಿದೆ ಎಂದು ಅವರು ವಿವರಿಸಿದರು.

ನಗರವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸುವ ಉದ್ದೇಶದಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯಿಂದ ಸಹಾಯಕ ಪ್ರಧಾನ ವ್ಯವಸ್ಥಾಪಕರ ನೇತೃತ್ವದಲ್ಲಿ 27 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಪ್ಲಾಸ್ಟಿಕ್ ತಯಾರಕರು, ಸಗಟು ಮಾರಾಟಗಾರರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿ 49.14 ಲಕ್ಷ ರು. ಮೌಲ್ಯದ 24.57 ಟನ್‌ ಪ್ಲಾಸ್ಟಿಕ್ ವಶಪಡಿಸಿಕೊಂಡು 38.07 ಲಕ್ಷ ರು. ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಾಕ್ಸ್...ಕುಂದುಕೊರತೆ ಪರಿಹಾರಕ್ಕೆ ಕ್ರಮ

ಡಿಜಿಟಲ್ ದೂರು ಪರಿಹಾರ ವೇದಿಕೆಯ ಮೂಲಕ ದಿನ 24 ಗಂಟೆ ದೂರು ದಾಖಲಿಸಿಕೊಳ್ಳಲಾಗುತ್ತಿದೆ. ವ್ಯಾಟ್ಸಪ್ ಚಾಟ್ ಸಂಖ್ಯೆ 9448197197 ಅನ್ನು ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ತ್ವರಿತವಾಗಿ ಸ್ಪಂದಿಸಲಾಗುತ್ತಿದೆ. ಜತೆಗೆ, ಟೋಲ್‌ಫ್ರೀ ಸಹಾಯವಾಣಿ 1533, ಸಹಾಯ ಆ್ಯಪ್‌ ಮೂಲಕ ಸಹ ದೂರು ದಾಖಲಿಸಬಹುದಾಗಿದೆ.

ಆಟೋ ಟಿಪ್ಪರ್ ಗಳ ಸಮಯ ಪರಿಷ್ಕರಣೆ ಯಶಸ್ವಿಯಾಗಿದೆ. ಆಟೋಗಳ ಸ್ಕ್ಯಾನಿಂಗ್ ಸಮಯವನ್ನು ಬೆಳಗ್ಗೆ 5.30 ರಿಂದ 6.30 ರವರೆಗೆ ನಿಗದಿಪಡಿಸಲಾಗಿದೆ. ಇದರಿಂದ ಹಾಜರಾತಿ ಸಂಖ್ಯೆ ಹಾಗೂ ಸ್ವಚ್ಛತೆಯಲ್ಲಿ ಪರಿಣಾಮಕಾರಿ ಬದಲಾವಣೆ ಆಗಿದೆ ಎಂದು ತಿಳಿಸಿದರು.

PREV
Read more Articles on

Recommended Stories

ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ
‘ಕನ್ನಡ ಸಂಘ ಬಹರೈನ್‌’ಗೆ ಸರ್ಕಾರದಿಂದ ₹1 ಕೋಟಿ