60ಕ್ಕೆ ನಿವೃತ್ತಿ ಆಗದೇ ಶ್ರೀಗಳಿಂದ ಅಕ್ರಮ - ಪ್ರಶ್ನಿಸಿದವರನ್ನು ಕುಡುಕರು ಎಂದಿದ್ದಾರೆ: ಮಾಜಿ ಸಚಿವ ಕಿಡಿ

ಸಾರಾಂಶ

 ಶಿವಮೂರ್ತಿ ಶಿವಾಚಾರ್ಯರ  ಶ್ರೀಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಚಿಂತನೆ ನಡೆಸಿರುವುದಾಗಿ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

ಬೆಂಗಳೂರು :  ತರಳುಬಾಳು ಬೃಹನ್ಮಠದ ಆಸ್ತಿ ಕಬಳಿಸುವ ಪ್ರಯತ್ನದ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹಾಗೂ ಶಿವಮೂರ್ತಿ ಶಿವಾಚಾರ್ಯರ ನಿವೃತ್ತಿ ಹಾಗೂ ಟ್ರಸ್ಟ್ ಡೀಡ್ ವಿಚಾರ ಪ್ರಶ್ನಿಸಿದವರನ್ನು ಕುಡುಕರು ಎಂದು ತೇಜೋವಧೆ ಮಾಡಿದ ಶ್ರೀಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಚಿಂತನೆ ನಡೆಸಿರುವುದಾಗಿ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1977ರಲ್ಲಿ ಲಿಂಗೈಕ್ಯ ಶಿವಕುಮಾರ ಮಹಾಸ್ವಾಮಿಗಳು ಶ್ರೀ ಮತ್‌ ಸಾಧು ಸದ್ಧರ್ಮ ವೀರಶೈವ ಸಂಘ ನೋಂದಣಿ ಮಾಡಿದ್ದರು. ಶ್ರೀಗಳು 60 ವರ್ಷಕ್ಕೆ ಪೀಠತ್ಯಾಗ ಮಾಡಿ ಅಧಿಕಾರ ಹಸ್ತಾಂತರಿಸಬೇಕು ಎಂದು ಹೇಳಿದ್ದರು. 1979ರಲ್ಲಿ ಇದೇ ನಿಯಮದಡಿ ಶಿವಮೂರ್ತಿಗಳಿಗೆ ಪಟ್ಟ ಕಟ್ಟಿದ್ದರು. ನಿಯಮದಂತೆ ಶ್ರೀಗಳು ಒಪ್ಪದಿದ್ದರೂ ಜಗದ್ಗುರುಗಳು ಯಾರಾಗಬೇಕು ಎಂಬುದನ್ನು ಭಕ್ತರು ತೀರ್ಮಾನಿಸಬೇಕು ಎಂದಿದೆ. ಆದರೆ ಶಿವಮೂರ್ತಿಗಳು ಅದಕ್ಕೆ ಅವಕಾಶವಿಲ್ಲದಂತೆ ಭಕ್ತರ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿದರು.

ಶ್ರೀಗಳು ಭಕ್ತರ ಮುಗ್ಧತೆಯನ್ನು ಬಳಸಿಕೊಂಡು ವಂಚಿಸುತ್ತಿದ್ದಾರೆ. ತಾವು ಪೀಠಕ್ಕೆ ಬಂದ ಬಳಿಕ ‘ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀಮಠ ಪಾಲ್ಕುರಿಕೆ-ಸಿರಿಗೆರೆ ಶ್ರೀತರಳಬಾಳು ಜಗದ್ಗುರು ಬೃಹನ್ಮಠ’ ಎಂದಿದ್ದ ಮಠದ ಮೂಲ ಹೆಸರನ್ನು 1990ರಲ್ಲಿ ಬದಲಿಸಿ ಟ್ರಸ್ಟ್ ಡೀಡ್ ರಚಿಸಿ ‘ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀ ತರಳುಬಾಳು ಜಗದ್ಗುರು ಬೃಹನ್ಮಠ’ ಎಂದು ಬದಲಿಸಿದ್ದಾರೆ.

ಹಿಂದಿನ ಮಠದ ಹೆಸರಿನ ಆಸ್ತಿಗಳನ್ನು ಇದೇ ಮಠದ ಹೆಸರಿನಡಿ ಸೇರಿಸಿದ್ದಾರೆ. ಮಠದ ಜವಾಬ್ದಾರಿ, ಉತ್ತರಾಧಿಕಾರಿ ನೇಮಕ ಎಲ್ಲ ಅಧಿಕಾರ ತಮಗೇ ಸೇರುವಂತೆ ಬಿಂಬಿಸಿಕೊಂಡಿದ್ದಾರೆ. ಭಕ್ತರಿಗೆ ಗೊತ್ತಾಗದಂತೆ ಟ್ರಸ್ಟ್ ಡೀಡ್ ಮಾಡಿಕೊಂಡು ಸರ್ವಾಧಿಕಾರಿ ರೀತಿಯಲ್ಲಿ ಮುಂದುವರಿದಿದ್ದಾರೆ ಎಂದು ದೂರಿದರು.

ಚುನಾವಣೆ ಮಾಡದೆ ತಮ್ಮ ಮನಸ್ಸಿಗೆ ಬಂದಂತೆ ಸದಸ್ಯರನ್ನು ನೇಮಿಸಿದ್ದಾರೆ. ಮಠದ ಅಭಿವೃದ್ಧಿಗೆ ಕಷ್ಟ ಪಟ್ಟವರನ್ನು ತೆಗೆದಿದ್ದಾರೆ. 2014ರಲ್ಲಿ ಸಿದ್ದಯ್ಯ ಅವರನ್ನು ಮಠದಿಂದ ತೆಗೆಯಲಾಯಿತು. ಅದನ್ನು ಪ್ರಶ್ನಿಸಿದಾಗ ನೇಮಿಸುವ, ತೆಗೆದುಹಾಕುವ ಅಧಿಕಾರ ತಮಗಿದೆ ಎಂದು ಹೇಳಿದ್ದಾರೆ. ಟ್ರಸ್ಟ್ ಡೀಡ್ ರದ್ದುಪಡಿಸಿ ಸಂಘವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಮುಂದುವರಿಸಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದರು.

ಈ ಸಂಬಂಧ ಶಿವಮೂರ್ತಿ ಶಿವಾಚಾರ್ಯರು ಅವರ ನಿವೃತ್ತಿ ಘೋಷಿಸಬೇಕು ಎಂದು ಭಕ್ತರು ಸಭೆ ಸೇರಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದೆವು. ಆದರೆ, ಮರುದಿನ ಸುದ್ದಿಗೋಷ್ಠಿಯಲ್ಲಿ ಶಿವಮೂರ್ತಿ ಸ್ವಾಮಿಗಳು ರೆಸಾರ್ಟ್‌ನಲ್ಲಿ ಸಭೆ ಸೇರಿದವರು, ಅಲ್ಲಿಗೆ ಬರೋರೆಲ್ಲ ಕುಡುಕರು ಎಂದು ಶಾಮನೂರು ಶಿವಶಂಕರಪ್ಪ ಅವರನ್ನೂ ಸೇರಿಸಿ ಭಕ್ತರನ್ನು ಅವಮಾನ ಮಾಡಿದ್ದಾರೆ. ಸಂಘಕ್ಕೆ ಅಗೌರವ ತೋರಿ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಹೀಗಾಗಿ ಸ್ವಾಮಿಗಳ ವಿರುದ್ಧ ಮಾನನಷ್ಟ ಮೌಕದ್ದಮೆ ಹೂಡುತ್ತೇವೆ ಎಂದು ಹೇಳಿದರು.

ಪ್ರೋ. ಲಿಂಗರಾಜು, ಡಾ. ಗುರುಸ್ವಾಮಿ, ಉದ್ಯಮಿ ರಾಜಣ್ಣ ಸೇರಿ ಇತರರಿದ್ದರು.

Share this article