ಬಿಇ ಸೀಟು ಬ್ಲಾಕಿಂಗ್‌: ಇ.ಡಿ. ದಾಳಿ ವೇಳೆ 1.37 ಕೋಟಿ ರು. ವಶ

Sujatha NRPublished : Jun 29, 2025 8:54 AM

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೀಟ್‌ ಬ್ಲಾಕಿಂಗ್‌ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದ 17 ಸ್ಥಳಗಳಲ್ಲಿ ನಡೆಸಿದ್ದ ದಾಳಿ ವೇಳೆ 1.37 ಕೋಟಿ ರು. ನಗದು ಸೇರಿದಂತೆ ಮಹತ್ವದ ದಾಖಲೆಗಳು ಹಾಗೂ ಡಿಜಿಟಲ್‌ ಸಾಧನಗಳು ಪತ್ತೆಯಾಗಿದೆ.

 ಬೆಂಗಳೂರು : ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೀಟ್‌ ಬ್ಲಾಕಿಂಗ್‌ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದ 17 ಸ್ಥಳಗಳಲ್ಲಿ ನಡೆಸಿದ್ದ ದಾಳಿ ವೇಳೆ 1.37 ಕೋಟಿ ರು. ನಗದು ಸೇರಿದಂತೆ ಮಹತ್ವದ ದಾಖಲೆಗಳು ಹಾಗೂ ಡಿಜಿಟಲ್‌ ಸಾಧನಗಳು ಪತ್ತೆಯಾಗಿದೆ. 

ಈ ಸೀಟ್‌ ಬ್ಲಾಕಿಂಗ್‌ ದಂಧೆಯಲ್ಲಿ ಅಕ್ರಮ ಹಣ ವರ್ಗಾವಣೆ ಬೆಳಕಿಗೆ ಬಂದಿದ್ದ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಜೂ.25 ಮತ್ತು 26ರಂದು ಬೆಂಗಳೂರಿನ ಪ್ರತಿಷ್ಠಿತ ಮೂರು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು, ಈ ಕಾಲೇಜುಗಳಿಗೆ ಸಂಬಂಧಿಸಿದ ವ್ಯಕ್ತಿಗಳು, ಶೈಕ್ಷಣಿಕ ಸಲಹಾ ಸೇವೆಯಲ್ಲಿ ತೊಡಗಿರುವ ಕೆಲ ಸಂಸ್ಥೆಗಳು ಹಾಗೂ ಮಧ್ಯವರ್ತಿಗಳ ಕಚೇರಿ, ಮನೆಗಳು ಸೇರಿದಂತೆ ರಾಜ್ಯದ 17 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧಿಸಿದ್ದರು. ಈ ದಾಳಿ ವೇಳೆ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಜನಪ್ರಿಯ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯಲ್ಲಿ ವ್ಯಾಪಕವಾಗಿ ಸೀಟ್‌ ಬ್ಲಾಕಿಂಗ್‌ ಮತ್ತು ಹಣ ಬಳಕೆ ಸಂಬಂಧ ಪುರಾವೆಗಳು ಸಿಕ್ಕಿವೆ. 

ಮುಖ್ಯವಾಗಿ 1.37 ಕೋಟಿ ರು. ನಗದು ಹಾಗೂ ವಿವಿಧ ಅಪರಾಧ ದಾಖಲೆಗಳು, ಡಿಜಿಟಲ್‌ ಸಾಧನಗಳು ಪತ್ತೆಯಾಗಿದ್ದು, ಅವುಗಳನ್ನು ಇ.ಡಿ. ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಈ ಸೀಟ್ ಬ್ಲಾಕಿಂಗ್‌ ದಂಧೆ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಅಧಿಕಾರಿಗಳು ಕಳೆದ ನವೆಂಬರ್‌ನಲ್ಲಿ ಮಲ್ಲೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆಗೆ ಇಳಿದಿದ್ದ ಪೊಲೀಸರು, ಕೆಇಎ ಹೊರಗುತ್ತಿಗೆ ನೌಕರರು, ಮಧ್ಯವರ್ತಿಗಳು ಸೇರಿದಂತೆ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. 

ಅಕ್ರಮ ಹಣ ವರ್ಗಾವಣೆ ಬೆಳಕಿಗೆ:

ಮುಂದುವರೆದ ತನಿಖೆಯಲ್ಲಿ ಸೀಟ್‌ ಬ್ಲಾಕಿಂಗ್‌ ಹೆಸರಿನಲ್ಲಿ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಮಧ್ಯವರ್ತಿಗಳ ಸಹಾಯದಿಂದ ಕೋಟ್ಯಂತರ ರು. ಲಾಭ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಸೀಟ್‌ ಬ್ಲಾಕಿಂಗ್‌ ದಂಧೆ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡಿರುವುದು ಬಯಲಾಗಿತ್ತು. ಕೋಟ್ಯಂತರ ರು. ಅಕ್ರಮ ಹಣ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ಆಧಾರದ ಮೇಲೆ ಇ.ಡಿ. ಅಧಿಕಾರಿಗಳು ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಮೂರು ಎಂಜಿನಿಯರಿಂಗ್‌ ಕಾಲೇಜುಗಳು ಸೇರಿದಂತೆ ರಾಜ್ಯದ 17 ಕಡೆ ದಾಳಿ ನಡೆಸಿದ್ದರು.

Read more Articles on