ರಾಜ್ಯದ ಹಲವೆಡೆ ಮುಂದುವರಿದ ಮಳೆ ಅಬ್ಬರ

Published : Jun 28, 2025, 11:08 AM IST
Madhya Pradesh Heavy Rain

ಸಾರಾಂಶ

ಬೆಳಗಾವಿ ಹಾಗೂ ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಭಾರೀ ಪ್ರಮಾಣದ ಮಳೆಯಿಂದಾಗಿ ಭೀಮಾ ನದಿ ಪಾತ್ರದಲ್ಲಿ ಒಳಹರಿವು ರಭಸವಾಗಿ ಹೆಚ್ಚುತ್ತಿದ್ದು, ನದಿಯಲ್ಲಿ ದೇವಸ್ಥಾನಗಳು ಮುಳುಗಡೆಯಾಗಿವೆ.

  ಬೆಂಗಳೂರು :  ಬೆಳಗಾವಿ ಹಾಗೂ ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಭಾರೀ ಪ್ರಮಾಣದ ಮಳೆಯಿಂದಾಗಿ ಭೀಮಾ ನದಿ ಪಾತ್ರದಲ್ಲಿ ಒಳಹರಿವು ರಭಸವಾಗಿ ಹೆಚ್ಚುತ್ತಿದ್ದು, ನದಿಯಲ್ಲಿ ದೇವಸ್ಥಾನಗಳು ಮುಳುಗಡೆಯಾಗಿವೆ. ಕರಾವಳಿ, ಕೊಡಗಿನಲ್ಲಿ ತುಂತುರು ಮಳೆ ಮುಂದುವರೆದಿದ್ದು, ಕೊಡಗು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಜೂ.28ರಂದು ರಜೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಿರುಸೆತುವೆ ಕುಸಿದಿದ್ದು, ವರ್ಷಧಾರೆಗೆ ಜನಜೀವನ ಅಸ್ತವ್ಯಸ್ತವಾಗಿದೆ.

ನೀರಿನ ಒಳಹರಿವು ಹೆಚ್ಚಾದ ಪರಿಣಾಮ ಯಾದಗಿರಿ ಹೊರವಲಯದ ಭೀಮಾ ಬ್ರಿಡ್ಜ್‌ ಕಂ ಬ್ಯಾರೇಜಿನಿಂದ ಸುಮಾರು 30 ಸಾವಿರ ಕ್ಯುಸೆಕ್ ಪ್ರಮಾಣದಷ್ಟು ನೀರನ್ನು ನದಿಗೆ ಬಿಡಲಾಗಿದ್ದು, ನದಿ ತೀರದ ಗ್ರಾಮಗಳಲ್ಲೀಗ ಪ್ರವಾಹ ಭೀತಿ ಎದುರಾಗಿದೆ. ಭೀಮಾ ನದಿ ದಡದಲ್ಲಿರುವ ಶ್ರೀಕಂಗಳೇಶ್ವರ, ಶ್ರೀ ವೀರಾಂಜನೇಯ ದೇವಸ್ಥಾನಗಳು ಮುಳುಗಡೆಯಾಗಿವೆ. ಕೆಲವರು ನದಿದಡದಲ್ಲೇ ಕುಳಿತು ದೇವರಿಗೆ ಪೂಜೆ ಸಲ್ಲಿಸಿದ್ದು, ಬಟ್ಟೆ ಒಗೆಯಲು, ಈಜಾಡಲು ಬಂದವರನ್ನು ರಕ್ಷಣಾ ಸಿಬ್ಬಂದಿ ವಾಪಸ್‌ ಕಳುಹಿಸಿದ್ದಾರೆ. ವಡಗೇರಾ ತಾಲೂಕಿನ ಮಾಚನೂರಿನಲ್ಲಿ ಶುಕ್ರವಾರ ಬೆಳಗ್ಗೆ ಜಾನುವಾರುಗೆ ನೀರು ಕುಡಿಸಲು ಭೀಮಾ ನದಿಗೆ ಇಳಿದಿದ್ದ ದನಗಾಹಿ ಯುವಕರಿಬ್ಬರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ನೀರುಪಾಲಾದ ರಮೇಶ (17) ಮತ್ತು ಸಿದ್ದಪ್ಪ (20) ಎಂಬ ಯುವಕರನ್ನು ಪತ್ತೆ ಹಚ್ಚಲು ಈಜುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್‌ ಮೂಲಕ ಶೋಧ ಕಾರ್ಯಾಚಾರಣೆ ನಡೆಸಿದ್ದಾರೆ.

ಕಿರುಸೇತುವೆ ಕುಸಿತ:

ಉತ್ತರ ಕನ್ನಡ ಜಿಲ್ಲೆ ಜೋಯಿಡಾ ಪಟ್ಟಣ ಬಳಿಯ ಗುಂದ-ಉಳವಿ ಮಾರ್ಗದ ಕೈಟಾ ಎಂಬಲ್ಲಿ ಕಿರು ಸೇತುವೆ ಕುಸಿದಿದ್ದು, ಇದೇ ಮಾರ್ಗದಲ್ಲಿ ಸಂಚರಿಸುವ ಗುಂದ, ಉಳವಿ, ದಾಂಡೇಲಿ, ಶಿರಸಿ, ಬೈಲಹೊಂಗಲ, ಬೆಳಗಾವಿಯ ಬಸ್‌ಗಳು ಓಡಾಟ ಅಸ್ತವ್ಯಸ್ತವಾಗಿದೆ. ಕೈಟಾ ಸೇತುವೆ ಕುಸಿತದಿಂದ ಜೋಯಿಡಾ, ದಾಂಡೇಲಿಗೆ ಸಂಪರ್ಕಿಸುವ ನಂದಿಗದ್ದೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಮಾರ್ಗ ಕಡಿತಗೊಂಡಿದ್ದಿ, ನೂರಾರು ಶಾಲಾ ವಿದ್ಯಾರ್ಥಿಗಳು, ಆ್ಯಂಬುಲೆನ್ಸ್, ಸಾರ್ವಜನಿಕರಿಗೆ ತೊಂದರೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಾದ್ಯಂತ ಶುಕ್ರವಾರ ಮಳೆಯ ಅಬ್ಬರ ಕಡಿಮೆಯಾಗಿತ್ತು. ಆದರೆ ಗುರುವಾರ ಸುರಿದ ಭಾರಿ ಮಳೆಯಿಂದ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿ ಭಾರತಿ ಬೀದಿ ಕೆವಿಆರ್ ವೃತ್ತ ಸಂಪರ್ಕ ಬೈಪಾಸ್ ರಸ್ತೆಗೆ ನೀರು ನುಗ್ಗಿತ್ತು. ಮಂಗಳೂರು ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ನೆಮ್ಮಾರು ಸಾಲ್ಮರ ಬಳಿ ಮತ್ತೆ ಗುಡ್ಡಕುಸಿದು ರಸ್ತೆಯ ಮೇಲೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ನೆಮ್ಮಾರು, ಕಿಗ್ಗಾ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮೊಬೈಲ್, ದೂರವಾಣಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಕೆಲಸಗಳಿಗೆ ಜನರು ಪರದಾಡುವಂತಾಗಿದೆ.

ಕೊಡಗಿನಲ್ಲಿ ತಗ್ಗಿದ ಪ್ರವಾಹ:  ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸರಾಸರಿ 40.50 ಮಿ.ಮೀ. ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿ ಹಲವು ಕಡೆಗಳಲ್ಲಿ ಮಳೆಯ ತೀವ್ರತೆ ತಗ್ಗಿದ್ದು, ಪ್ರವಾಹ ಇಳಿಮುಖಗೊಂಡಿದೆ. ಆಗಾಗ್ಗೆ ಸುರಿದ ವರ್ಷಧಾರೆಗೆ ಕೆಲವೆಡೆ ಸಣ್ಣ ಪ್ರಮಾಣದ ಹಾನಿಯುಂಟಾಗಿದೆ. ಕುಂದಳ್ಳಿ-ಪುಷ್ಪಗಿರಿ ಸಂಪರ್ಕಿಸುವ ರಸ್ತೆಯ ಮೇಲೆ ಹಾಗೂ ಚಿಣ್ಣರ ಹಾಡಿ ಸಂಪರ್ಕ ಸೇತುವೆ ಪಕ್ಕದಲ್ಲಿ ಬರೆ ಕುಸಿದಿದೆ. 1 ವಿದ್ಯುತ್ ಕಂಬ ಮುರಿದು ಕರೆಂಟ್‌ ಸಂಪರ್ಕ ಕಡಿತವಾಗಿದೆ. ಕೊಟ್ಟಗೇರಿ ಗ್ರಾಮದ ರಸ್ತೆ ಜಲಾವೃತಗೊಂಡಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ.

PREV
Read more Articles on

Recommended Stories

ಟಿಎಪಿಸಿಎಂಎಸ್‌ನಲ್ಲಿ ರಿಯಾಯಿತಿ ದರದಲ್ಲಿ ವಸ್ತುಗಳು ಲಭ್ಯ
ಸಮಗ್ರ ಅರಿವಿನಿಂದ ಸ್ವಾತಂತ್ರ್ಯದ ಸಾಕಾರ: ಅರವಿಂದ್‌