ಬಿಯರ್‌ ದರ ಹೆಚ್ಚಳ: ಮತ್ತೆ ಪಾನಪ್ರಿಯರ ಜೇಬಿಗೆ ಸರ್ಕಾರ ಕತ್ತರಿ

ಸಾರಾಂಶ

ಡೀಸೆಲ್, ವಿದ್ಯುತ್, ಹಾಲು ಬೆಲೆ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಮದ್ಯದ ದರವನ್ನೂ ಹೆಚ್ಚಿಸಲು ಮುಂದಾಗಿದೆ. ಬ್ರಾಂಡಿ, ವಿಸ್ಕಿ, ರಮ್, ಜಿನ್ ಮುಂತಾದ ಮದ್ಯಗಳ ದರವನ್ನು ಪ್ರತಿ ಕ್ವಾರ್ಟರ್‌ಗೆ 10 ರಿಂದ 15 ರು.ವರೆಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. 

ಬೆಂಗಳೂರು : ಡೀಸೆಲ್, ವಿದ್ಯುತ್, ಹಾಲು ಬೆಲೆ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಮದ್ಯದ ದರವನ್ನೂ ಹೆಚ್ಚಿಸಲು ಮುಂದಾಗಿದೆ. ಬ್ರಾಂಡಿ, ವಿಸ್ಕಿ, ರಮ್, ಜಿನ್ ಮುಂತಾದ ಮದ್ಯಗಳ ದರವನ್ನು ಪ್ರತಿ ಕ್ವಾರ್ಟರ್‌ಗೆ 10 ರಿಂದ 15 ರು.ವರೆಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಇನ್ನು ಬಿಯರ್‌ ದರವನ್ನು ಎಲ್ಲಾ ವರ್ಗಗಳಲ್ಲಿ ಶೇ.10ರಷ್ಟು ಹೆಚ್ಚಿಸಲು ಮುಂದಾಗಿದೆ.

ಅಬಕಾರಿ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ನಾಗರಿಕರಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಿದೆ. ಮಧ್ಯಮ ಶ್ರೇಣಿಯ ಮದ್ಯಕ್ಕೂ ತುಸು ಪ್ರಮಾಣದಲ್ಲಿ ದರ ಏರಿಕೆ ಆಗಲಿದೆ. ಆದರೆ, ಹೈ ಎಂಡ್ (ಅಥವಾ ಪ್ರೀಮಿಯಂ ಬ್ರ್ಯಾಂಡ್) ಮದ್ಯಗಳ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ವೈನ್, ಫೆನ್ನಿ ಸೇರಿ ಕೆಲ ಮದ್ಯಗಳನ್ನು ದರ ಏರಿಕೆಯಿಂದ ಹೊರಗಿಡಲಾಗಿದೆ.

₹40 ಸಾವಿರ ಕೋಟಿ ಆದಾಯದ ಗುರಿ:

ರಾಜ್ಯದ ಆರ್ಥಿಕ ಗುರಿಗಳನ್ನು ಸಾಧಿಸಲು ಮದ್ಯ ಮಾರಾಟದಿಂದ 40 ಸಾವಿರ ಕೋಟಿ ರು. ಆದಾಯ ಸಂಗ್ರಹ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಸದ್ಯ ಬಿಯರ್​ ಮೇಲಿನ ಎಇಡಿಯು ಉತ್ಪಾದನಾ ವೆಚ್ಚದ ಶೇ.195ರಷ್ಟಿದೆ. ಇದೀಗ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.205ಕ್ಕೆ ಹೆಚ್ಚಿಸುವ ಬಗ್ಗೆ ಅಧಿಸೂಚನೆಯಲ್ಲಿ ಉಲ್ಲೆಖಿಸಲಾಗಿದೆ. ಇದರೊಂದಿಗೆ ಪ್ರೀಮಿಯಂ ಅಥವಾ ಇತರೆ ಬಿಯರ್​ ಬ್ರ್ಯಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲಿಗೆ ಸರಾಸರಿ 10ರಿಂದ 20 ರು. ಏರಿಕೆ ಆಗಬಹುದೆಂದು ಅಂದಾಜಿಸಲಾಗಿದೆ.

ಮಧ್ಯಮ ಶ್ರೇಣಿ ಮತ್ತು ಅಗ್ಗದ ಸ್ಥಳೀಯ ಬ್ರ್ಯಾಂಡ್‌ಗಳ ಬಿಯರ್​ ದರ 5 ರು.ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಬೆಲೆ ಏರಿಕೆ ಬ್ರ್ಯಾಂಡ್​ನಿಂದ ಬ್ರ್ಯಾಂಡ್​​ಗೆ ವ್ಯತ್ಯಾಸವಾಗಲಿದೆ. ಆಲ್ಕೋಹಾಲ್​ ಪ್ರಮಾಣ ಹೆಚ್ಚಿರುವ ಬ್ರ್ಯಾಂಡ್​​ಗಳ ಬಿಯರ್​ ಬೆಲೆ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಕರಡು ಅಧಿಸೂಚನೆಯಲ್ಲಿನ ಪ್ರಸ್ತಾವಿತ ಎಇಡಿ ಹೆಚ್ಚಳದೊಂದಿಗೆ 2 ವರ್ಷಗಳ ಅವಧಿಯಲ್ಲಿ ಬಿಯರ್​ ಮೇಲಿನ ತೆರಿಗೆಯನ್ನು 3ನೇ ಬಾರಿಗೆ ಏರಿಕೆ ಮಾಡಿದಂತಾಗಲಿದೆ. 2023ರ ಜುಲೈನಲ್ಲಿ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.175ರಿಂದ ಶೇ.185ಕ್ಕೆ ಹೆಚ್ಚಿಸಿತ್ತು. ನಂತರ 2025ರ ಜ.20ರಂದು ಬಜೆಟ್​ಗೂ ಮುನ್ನವೇ ಮತ್ತೊಮ್ಮೆ ಎಇಡಿ ಪರಿಷ್ಕರಣೆ ಮಾಡಲಾಗಿತ್ತು. ಆಗ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.185ರಿಂದ ಶೇ.195ಕ್ಕೆ (ಪ್ರತಿ ಬಲ್ಕ್​ ಲೀಟರ್​ಗೆ ರು.130ರವರೆಗೆ) ಹೆಚ್ಚಿಸಲಾಗಿತ್ತು.

ಇದೀಗ ಸರ್ಕಾರಕ್ಕೆ ಮೂರನೇ ಬಾರಿ ತೆರಿಗೆ ಹೆಚ್ಚಿಸಲು ಮುಂದಾಗಿದೆ. ಮೂಲ ಅಬಕಾರಿ ಸುಂಕವನ್ನು ಸಹ ಪರಿಷ್ಕರಿಸಲಾಗಿದೆ. ಆಲ್ಕೋಹಾಲ್​ ಪ್ರಮಾಣ ಆಧರಿಸಿದ ಶ್ರೇಣಿಕೃತ ವ್ಯವಸ್ಥೆ ಪರಿಚಯಿಸಲಾಗಿದೆ. ಶೇ.5 ಅಥವಾ ಅದಕ್ಕಿಂತ ಕಡಿಮೆ ಆಲ್ಕೋಹಾಲ್​ ಪ್ರಮಾಣ ಹೊಂದಿರುವ ಬಿಯರ್​ಗೆ ಪ್ರತಿ ಬಲ್ಕ್​ ಲೀ.ಗೆ 12 ರು. ಮತ್ತು ಶೇ.5ರಿಂದ ಶೇ.8ರಷ್ಟು ಆಲ್ಕೋಹಾಲ್​ ಹೊಂದಿರುವ ಬಿಯರ್​ಗೆ 20 ರು. ನಿಗದಿಪಡಿಸಲಾಗಿದೆ.

Share this article