ಪಾಕ್‌ ಉಗ್ರರ ಮೇಲೆರಗಿದ್ದು ಬೆಂಗಳೂರು ಡ್ರೋನ್‌

Follow Us

ಸಾರಾಂಶ

ಆಪರೇಷನ್‌ ಸಿಂದೂರದಲ್ಲಿ ಸ್ಕೈಸ್ಟ್ರೈಕರ್‌ ಡ್ರೋನ್‌ ಬಳಕೆ । ಅದಾನಿ ಒಡೆತನದ ಆಲ್ಫಾ ಡಿಸೈನ್ಸ್‌ನಿಂದ ನಿರ್ಮಾಣ

ಇದಕ್ಕಿದೆ ನಿಖರ ಗುರಿ ಗುರುತಿಸಿ ದಾಳಿಯ ಸಾಮರ್ಥ್ಯ । 10 ಕೆ.ಜಿ. ಬಾಂಬ್‌ ಸಾಗಿಸಬಲ್ಲ ಆತ್ಮಾಹುತಿ ಡ್ರೋನ್‌

  ಬೆಂಗಳೂರು : ''ಆಪರೇಷನ್‌ ಸಿಂದೂರ'' ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ನೆಲೆಗಳ ಮೇಲಿನ ದಾಳಿಗೆ ಬಳಸಲಾದ ಘಾತಕ ಶಸ್ತ್ರಾಸ್ತ್ರಗಳ ಪೈಕಿ ಭಾರೀ ಚರ್ಚೆಗೆ ಕಾರಣವಾಗುತ್ತಿರುವ ಸ್ಕೈ ಸ್ಟ್ರೈಕರ್‌ ಆತ್ಮಾಹುತಿ ಡ್ರೋನ್‌ ಉತ್ಪಾದನೆಯಾಗುವುದು ನಮ್ಮ ಬೆಂಗಳೂರಿನಲ್ಲಿ!

ಅದಾನಿ ಗ್ರೂಪ್‌ ಒಡೆತನದಲ್ಲಿರುವ ಅಲ್ಫಾ ಡಿಸೈನ್ಸ್ ಕಂಪನಿಯು ಇಸ್ರೇಲ್‌ನ ಎಲ್ಬಿಟ್ ಸೆಕ್ಯುರಿಟಿ ಸಿಸ್ಟಮ್ಸ್‌ ಸಂಸ್ಥೆ ಜತೆಗಿನ ಪಾಲುದಾರಿಕೆಯಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಈ ಡ್ರೋನ್‌ಗಳನ್ನು ಉತ್ಪಾದಿಸುತ್ತಿದೆ.

ಏನಿದರ ವಿಶೇಷತೆ?:

ಈ ಆತ್ಮಾಹುತಿ ಡ್ರೋನ್‌ಗಳು ಗುರಿಯನ್ನು ಗುರುತಿಸಿ ನಿಖರ ದಾಳಿ ನಡೆಸುವುದಕ್ಕೆ ಹೆಸರುವಾಸಿ. ಸುಮಾರು 100 ಕಿ.ಮೀ. ದೂರ ಕ್ರಮಿಸಬಲ್ಲ ಈ ಡ್ರೋನ್‌ಗಳು 5ರಿಂದ 10 ಕೆ.ಜಿ. ತೂಕದ ಸ್ಫೋಟಕ, ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿವೆ.

ಕೆಳಮಟ್ಟದಲ್ಲಿ ಹಾರಾಡುವ ಈ ಡ್ರೋನ್‌ ಬ್ಯಾಟರಿ ಚಾಲಿತವಾಗಿರುವ ಕಾರಣ ಹೆಚ್ಚು ಸದ್ದು ಮಾಡುವುದಿಲ್ಲ. ಹೀಗಾಗಿ ಶತ್ರುಗಳ ರೇಡಾರ್‌ ಜಾಲದ ಕಣ್ತಪ್ಪಿಸಿ ನಡೆಸುವ ಗೌಪ್ಯ ಸೇನಾ ಕಾರ್ಯಾಚರಣೆಗಳಿಗೆ ಈ ಡ್ರೋನ್‌ಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಯುಎಎಸ್‌(ಮಾನವರಹಿತ ವಿಮಾನ ವ್ಯವಸ್ಥೆ) ರೀತಿ ಹಾರಾಟ ಮತ್ತು ಕ್ಷಿಪಣಿಯ ರೀತಿ ದಾಳಿ ನಡೆಸುವ ಸಾಮರ್ಥ್ಯ ಈ ಡ್ರೋನ್‌ಗಳ ವಿಶೇಷ.

ಆಧುನಿಕ ಯುದ್ಧಕ್ಕೆ ಪೂರಕ:

ಬದಲಾಗಿರುವ ಆಧುನಿಕ ಯುದ್ಧತಂತ್ರಕ್ಕೆ ಪೂರಕವಾಗಿ ಈ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಿಖರವಾಗಿ ದಾಳಿಯನ್ನು ಗುರುತಿಸುವ ಈ ಡ್ರೋನ್‌ಗಳು ಕೊನೇ ಕ್ಷಣದವರೆಗೂ ಗುರಿ ಬದಲಾಯಿಸಲು ಅವಕಾಶ ನೀಡುತ್ತವೆ. ಇನ್ನೇನು ನಿರ್ದಿಷ್ಟ ಗುರಿಯತ್ತ ಬಾಂಬ್‌ ಹಾಕಲು ಕೇವಲ 2 ಸೆಕೆಂಡುಗಳಿವೆ ಎನ್ನುವಾಗಲೂ ಈ ಡ್ರೋನ್‌ ಅನ್ನು ವಾಪಸ್‌ ಕರೆಸಿಕೊಳ್ಳಬಹುದು. ಅಥವಾ ಬೇರೆ ಗುರಿಗಳತ್ತ ಸಾಗುವಂತೆ ನಿರ್ದೇಶನ ನೀಡಬಹುದು. ಈ ಡ್ರೋನ್‌ಗಳು 5 ಕೆ.ಜಿ. ಸಾಮರ್ಥ್ಯದ ಬಾಂಬ್‌ನೊಂದಿಗೆ ಎರಡು ಗಂಟೆ ಹಾಗೂ 10 ಕೆ.ಜಿ. ಬಾಂಬ್‌ನೊಂದಿಗೆ ಸುಮಾರು 1 ಗಂಟೆ ಕಾಲ ಆಕಾಶದಲ್ಲಿ ಯಾರ ಕಣ್ಣಿಗೂ ಬೀಳದಂತೆ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿವೆ.

2019ರಲ್ಲಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಬಳಿಕ ತುರ್ತು ಬಳಕೆಗೆಂದು 2021ರಲ್ಲಿ ಸುಮಾರು 100 ಡ್ರೋನ್‌ಗಳ ಖರೀದಿಗೆ ಆರ್ಡರ್ ನೀಡಿತ್ತು.

ಏರೋ ಇಂಡಿಯಾದಲ್ಲಿ ಭಾಗವಹಿಸಿದ್ದ ಕಂಪನಿ

ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಈ ಡ್ರೋನ್‌ಗಳನ್ನು ಉತ್ಪಾದಿಸುವ ಅಲ್ಫಾ ಡಿಸೈನ್ಸ್ ಕಂಪನಿ ಕೂಡ ಭಾಗವಹಿಸಿತ್ತು. ಮಿಲಿಟರಿ ಕಮ್ಯುನಿಕೇಷನ್ ಸಿಸ್ಟಮ್, ಎಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್, ಜಾಮರ್ಸ್, ಏವಿಯಾನಿಕ್ಸ್, ಅನ್‌ಮ್ಯಾನಡ್ ಸಿಸ್ಟಮ್ಸ್, ಸ್ಪೇಸ್ ಸ್ಯಾಟಲೈಟ್ ಸೇರಿ ಅನೇಕ ಮಿಲಿಟರಿ ಬಳಕೆಯ ಉತ್ಪನ್ನಗಳನ್ನು ಈ ಕಂಪನಿ ಉತ್ಪಾದಿಸುತ್ತದೆ.

ಹುಡುಕಿ ಹುಡುಕಿ ದಾಳಿ

ಇಸ್ರೇಲ್‌ ಸಹಯೋಗದಲ್ಲಿ ಆಲ್ಫಾ ಡಿಸೈನ್ಸ್‌ ಕಂಪನಿಯಿಂದ ಸ್ಕೈ ಸ್ಟ್ರೈಕರ್‌ ಡ್ರೋನ್‌ಗಳ ನಿರ್ಮಾಣ

100 ಕಿ..ಮೀ ದೂರದವರೆಗೆ 10 ಕೆಜಿ ಬಾಂಬ್‌ ಹೊತ್ತೊಯ್ದು ದಾಳಿ ನಡೆಸುವ ಸಾಮರ್ಥ್ಯ ಇದಕ್ಕಿದೆ

ಕೊನೆಯ ಕ್ಷಣದವರೆಗೂ ಗುರಿ ಬೆನ್ನಟ್ಟಿ ದಾಳಿ ಮಾಡುವ ಸಾಮರ್ಥ್ಯ ಈ ಆತ್ಮಾಹುತಿ ಡ್ರೋನ್‌ಗಿದೆ

ಕೆಳಮಟ್ಟದಲ್ಲಿ ಸಂಚಾರ ಕಾರಣ ಮತ್ತು ಬ್ಯಾಟರಿ ಚಾಲಿತವಾಗಿರುವ ಕಾರಣ ಹೆಚ್ಚು ಸದ್ದು ಮಾಡದು

ಸತತ ಒಂದು ಗಂಟೆಗಳ ಕಾಲ ಯಾರ ಕಣ್ಣಿಗೂ ಬೀಳದೇ ಆಗಸದಲ್ಲಿ ಹಾರಾಡುವ ಶಕ್ತಿ ಇದರದ್ದು