ಬಿಬಿಎಂಪಿ ರೀತೀಲಿ ಬೆಂಗಳೂರು ಪೊಲೀಸ್‌ ಘಟಕವೂ 5 ಹೋಳು- 5 ಪೊಲೀಸ್‌ ಆಯುಕ್ತರ ನೇಮಕ

Published : Nov 19, 2026, 05:04 AM IST
Seemant Singh Out, Hithendra In As Bengaluru Chief Commissioner

ಸಾರಾಂಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲೇ ಆರು ದಶಕಗಳ ಬಳಿಕ ಅಧಿಕೃತವಾಗಿ ಬೆಂಗಳೂರು ನಗರ ಕಮಿಷನರ್ ಘಟಕವು ವಿಘಟನೆಗೊಂಡಿದ್ದು, ಹೊಸದಾಗಿ ಮುಖ್ಯ ಆಯುಕ್ತ, ಐವರು ಆಯುಕ್ತರು ಹಾಗೂ ಸಂಚಾರ ವಿಭಾಗದ ಆಯುಕ್ತ ಹುದ್ದೆಗಳನ್ನು ಸೃಜಿಸಿ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ನೇಮಿಸಿದೆ.

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲೇ ಆರು ದಶಕಗಳ ಬಳಿಕ ಅಧಿಕೃತವಾಗಿ ಬೆಂಗಳೂರು ನಗರ ಕಮಿಷನರ್ ಘಟಕವು ವಿಘಟನೆಗೊಂಡಿದ್ದು, ಹೊಸದಾಗಿ ಮುಖ್ಯ ಆಯುಕ್ತ, ಐವರು ಆಯುಕ್ತರು ಹಾಗೂ ಸಂಚಾರ ವಿಭಾಗದ ಆಯುಕ್ತ ಹುದ್ದೆಗಳನ್ನು ಸೃಜಿಸಿ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ನೇಮಿಸಿದೆ.

1963ರಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ಘಟಕವನ್ನು ಸರ್ಕಾರ ಸ್ಥಾಪಿಸಿತ್ತು. ಪ್ರಾರಂಭದಲ್ಲಿ ಹತ್ತು ವರ್ಷಗಳು ಡಿಐಜಿ ದರ್ಜೆ ಅಧಿಕಾರಿಗಳು ಆಯುಕ್ತರಾಗಿದ್ದರು. ತರುವಾಯ ಜನಸಂಖ್ಯಾ ಹೆಚ್ಚಳ ಹಾಗೂ ನಗರವು ವಿಸ್ತಾರವಾದಂತೆ ಎಡಿಜಿಪಿ ಮಟ್ಟದ ಅಧಿಕಾರಿಗಳು ಆಯುಕ್ತರಾಗುತ್ತಿದ್ದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಹೋಳು ಮಾಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚಿಸಿದ ಮಾದರಿಯಲ್ಲೇ ಪೊಲೀಸ್ ಕಮೀಷನರೇಟ್ ವಿಭಜನೆಗೆ ಸರ್ಕಾರ ನಿರ್ಧರಿಸಿತ್ತು. ಅಂತೆಯೇ 63 ವರ್ಷಗಳ ಬಳಿಕ ಬೆಂಗಳೂರು ಕಮೀಷನರೇಟ್‌ ಘಟಕವು ವಿಘಟನೆಗೊಂಡು ಐದು ಭಾಗಗಳಾಗಿವೆ.

ಈ ವಿಭಜನೆ ಬೆನ್ನಲ್ಲೇ ಅಸ್ವಿತ್ತಕ್ಕೆ ಬಂದ ಮುಖ್ಯ ಪೊಲೀಸ್ ಆಯುಕ್ತ ಹುದ್ದೆಗೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಡಿಜಿಪಿ ಹಿತೇಂದ್ರ ಅವರನ್ನು ಸರ್ಕಾರ ನೇಮಿಸಿದೆ. ಈ ಆದೇಶ ಹೊರಬಿದ್ದ ಕೆಲವೇ ತಾಸುಗಳಲ್ಲೇ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಅವರು ಹುದ್ದೆ ಅಲಂಕರಿಸಿದರು. ತಮ್ಮ ಬ್ಯಾಚ್‌ಮೇಟ್‌ ಆಗಿರುವ ಹಿತೇಂದ್ರ ಅವರಿಗೆ ಬ್ಯಾಟನ್ ನೀಡುವ ಮೂಲಕ ಅಧಿಕಾರವನ್ನು ನಿರ್ಗಮಿತ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಸ್ತಾಂತರಿಸಿದರು.

ಐವರು ನೂತನ ಆಯುಕ್ತರು:

ಐದು ಪೊಲೀಸ್ ಕಮಿಷನರ್‌ ಘಟಕಗಳಿಗೆ ನಾಲ್ವರು ಐಜಿಪಿ ಹಾಗೂ ಓರ್ವ ಡಿಐಜಿ ಮಟ್ಟದ ಅಧಿಕಾರಿಯನ್ನು ಸರ್ಕಾರ ನೇಮಿಸಿದೆ. ಕೇಂದ್ರ ಘಟಕ-ಲಾಬೂ ರಾಮ್‌, ಉತ್ತರ-ಡಾ.ಬೋರಲಿಂಗಯ್ಯ, ಪಶ್ಚಿಮ- ವಿಕಾಸ್ ಕುಮಾರ್ ವಿಕಾಸ್‌, ಪೂರ್ವ-ಡಾ.ಪಿ.ಎಸ್.ಹರ್ಷ ಹಾಗೂ ದಕ್ಷಿಣ ಆಯುಕ್ತರಾಗಿ ವಂಶಿಕೃಷ್ಣ ಅವರು ಪ್ರಥಮ ಆಯುಕ್ತರಾಗಲಿದ್ದಾರೆ. ಮುಂದಿನ ಜನವರಿಯಲ್ಲಿ ವಂಶಿಕೃಷ್ಣ ಅವರಿಗೆ ಸೇವಾ ಹಿರಿತನ ಆಧಾರದ ಮೇರೆಗೆ ಐಜಿಪಿ ಹುದ್ದೆಗೆ ಮುಂಬಡ್ತಿ ಸಿಗಲಿದ್ದು, ಅಲ್ಲಿವರೆಗೆ ಅವರಿಗೆ ಆಡಳಿತ ವಿಭಾಗದ ಜತೆ ದಕ್ಷಿಣ ಆಯುಕ್ತ ಹುದ್ದೆಯನ್ನು ಪ್ರಭಾರಿಯಾಗಿ ನಿರ್ವಹಿಸಲಿದ್ದಾರೆ.

ಸಂಚಾರ-ರೌಡಿ ನಿಗ್ರಹಕ್ಕೆ ಆಯುಕ್ತ:

ನಗರದ ಮೂಲಭೂತ ಸಮಸ್ಯೆಯಾಗಿ ಕಾಡುತ್ತಿರುವ ಸಂಚಾರ ದಟ್ಟಣೆ ಶಾಶ್ವತ ಪರಿಹಾರಕ್ಕಾಗಿ ಸಂಚಾರ ವಿಭಾಗಕ್ಕೆ ಪ್ರತ್ಯೇಕ ಆಯುಕ್ತ ಹುದ್ದೆಯನ್ನು ಸರ್ಕಾರ ಸೃಜಿಸಿದೆ. ಈ ಪದವಿಗೆ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನು ಸರ್ಕಾರ ನಿಯೋಜಿಸಿದೆ. ಅಲ್ಲದೆ ಮುಖ್ಯಮಂತ್ರಿ ಶಿವಕುಮಾರ್ ಅವರ ಒತ್ತಾಸೆ ಮೇರೆಗೆ ರಚನೆಯಾಗಿರುವ ರೌಡಿ ನಿಗ್ರಹ ಪಡೆಯ ಪ್ರಭಾರ ಹೊಣೆಗಾರಿಕೆಯನ್ನು ಹೇಮಂತ್ ನಿಂಬಾಳ್ಕರ್ ಅವರಿಗೆ ಸರ್ಕಾರ ನೀಡಿದೆ.

ಐದು ದಶಕಗಳ ಬಳಿಕ ಒಕ್ಕಲಿಗ ಅಧಿಕಾರಿ

ಐದು ದಶಕಗಳ ಬಳಿಕ ಒಕ್ಕಲಿಗ ಸಮುದಾಯದ ಐಪಿಎಸ್ ಅಧಿಕಾರಿಯೊಬ್ಬರಿಗೆ ರಾಜಧಾನಿ ಪೊಲೀಸ್ ಮಹಾದಂಡ ನಾಯಕನ ಹುದ್ದೆ ಸಿಕ್ಕಿದೆ. 1970ರ ದಶಕದಲ್ಲಿ ಒಕ್ಕಲಿಗ ಸಮುದಾಯದ ಚಂದ್ರಶೇಖರ್ ಅವರು ಆಯುಕ್ತರಾಗಿದ್ದರು. ನಂತರ ಅವಕಾಶ ಸಿಗದೆ ಆಯುಕ್ತ ಹುದ್ದೆಯೂ ಆ ವರ್ಗದ ಅಧಿಕಾರಿಗಳ ಪಾಲಿಗೆ ಗಗನ ಕುಸುಮವಾಗಿತ್ತು.

ಈ ಹಿಂದೆ 2013-18ರ ಕಾಂಗ್ರೆಸ್ ಹಾಗೂ 2018-19ರ ಮೈತ್ರಿ ಸರ್ಕಾರದ ಅವಧಿಯಲ್ಲಿ ಪೊಲೀಸ್ ಆಯುಕ್ತ ಹುದ್ದೆಗೆ ಎರಡ್ಮೂರು ಬಾರಿ ಅಂದಿನ ಹಿರಿಯ ಐಪಿಎಸ್ ಅಧಿಕಾರಿ ಕಿಶೋರ್ ಚಂದ್ರ ಅವರ ಹೆಸರು ಪ್ರಸ್ತಾಪವಾದರೂ ರಾಜಕೀಯ ಕಾರಣಗಳಿಗೆ ಅವರು ಅವಕಾಶ ವಂಚಿತರಾದರು. ಇದಾದ ಬಳಿಕ ಆಯುಕ್ತ ಹುದ್ದೆಯೂ ಸೇವಾ ಹಿರಿತನವಿಲ್ಲದೆ ಒಕ್ಕಲಿಗ ಅಧಿಕಾರಿಗಳು ಗಣನೆಗೆ ಬರಲಿಲ್ಲ. ಆದರೆ, ಎಡಿಜಿಪಿ ಹುದ್ದೆಗೆ ಹಿತೇಂದ್ರ ಅವರು ಮುಂಬಡ್ತಿ ಪಡೆದ ಬಳಿಕ ಮತ್ತೆ ಆಯುಕ್ತರ ಪದವಿಗೆ ಆ ಸಮುದಾಯದ ಹಕ್ಕೊತ್ತಾಯ ಪ್ರಾರಂಭವಾಯಿತು.

ಕಳೆದ ಮೂರೂವರೆ ವರ್ಷಗಳಿಂದ ಹಿತೇಂದ್ರ ಅವರ ಹೆಸರು ಚಾಲ್ತಿಯಲ್ಲಿತ್ತು. ಕೊನೆಗೆ ತನ್ನದೇ ಸಮುದಾಯದ ಡಿ.ಕೆ.ಶಿವಕುಮಾರ್ ಅ‍ವರು ಮುಖ್ಯಮಂತ್ರಿ ಪದವಿಗೇರಿದ ನಂತರ ಆಯುಕ್ತರ ಸ್ಥಾನಕ್ಕೆ ಹಿತೇಂದ್ರ ಅವರ ಹೆಸರು ಮುಂಚೂಣಿಗೆ ಬಂತು. ಮುಖ್ಯಮಂತ್ರಿ ಅವರ ಬಳಿ ಒಕ್ಕಲಿಗರಿಗೆ ಅಧಿಕಾರ ನೀಡುವಂತೆ ಸಮುದಾಯದ ಮಂತ್ರಿಗಳು, ಶಾಸಕರು ಹಾಗೂ ಸ್ವಾಮೀಜಿಗಳು ಒತ್ತಾಯಿಸಿದ್ದರು ಎಂದು ತಿಳಿದು ಬಂದಿದೆ. ಕೊನೆಗೆ ಹಿತೇಂದ್ರ ಅವರಿಗೆ ಮುಖ್ಯ ಕಮಿಷನರ್ ಹುದ್ದೆಗೆ ನೇಮಿಸುವ ಮೂಲಕ ಐದು ದಶಕಗಳ ಒಕ್ಕಲಿಗ ಸಮುದಾಯದ ಬೇಡಿಕೆ ಈಡೇರಿದಂತಾಗಿದೆ ಎನ್ನಲಾಗಿದೆ.

ಕೋಲಾರ ಸೀಮೆಯ ಹಿತೇಂದ್ರ

ನೂತನ ಮುಖ್ಯ ಪೊಲೀಸ್ ಆಯುಕ್ತ ಹಿತೇಂದ್ರ ಅವರು ಕೋಲಾರ ಜಿಲ್ಲೆಯವರು. 1996ನೇ ಸಾಲಿನ ಐಪಿಎಸ್ ಅಧಿಕಾರಿ ಆಗಿರುವ ಅವರು, ತುಮಕೂರು, ಮಂಡ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಏಳು ವರ್ಷ ಸಿಬಿಐನಲ್ಲಿ ಕಾರ್ಯನಿರ್ವಹಿಸಿ ಮರಳಿದರು. ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ಮೂರೂವರೆ ವರ್ಷ ಹಾಗೂ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಅನುಭವ ಹೊಂದಿದ್ದಾರೆ. ಇನ್ನು ತನಿಖೆಗೆ ಖ್ಯಾತಿಗಳಿಸಿರುವ ಅವರು ಪ್ರಸುತ್ತ ಕೆಪಿಎಸ್‌ಸಿ ನೇಮಕಾತಿ ಹಗರಣದ ಎಸ್‌ಐಟಿ ಮುಖ್ಯಸ್ಥರಾಗಿದ್ದಾರೆ. ಈ ಹಿಂದೆ ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸಿದ್ದರು. ಇನ್ನು ದಯಾನಂದ್ ಅವರ ಬಳಿಕ ಮತ್ತೆ ಕನ್ನಡಿಗ ಅಧಿಕಾರಿಗೆ ರಾಜಧಾನಿ ಆಡಳಿತ ಹೊಣೆ ಸಿಕ್ಕಂತಾಗಿದೆ.

6 ದಶಕಗಳ ಬಳಿಕ ಹೋಳು

ಬೆಂಗಳೂರು ಮೊದಲ ಪೊಲೀಸ್‌ ಕಮಿಷನರೇಟ್‌ ರಚನೆಯಾಗಿ 63 ವರ್ಷಗಳ ಬಳಿಕ 5 ಹೋಳು

ನಗರ ವಿಸ್ತರಣೆಯಾಗಿ, ಜನಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ನಿರ್ವಹಣೆಗಾಗಿ ಘಟಕ ವಿಭಜನೆ

ರಾಜಧಾನಿಗೆ ಇನ್ನು ಒಬ್ಬ ಮುಖ್ಯ ಪೊಲೀಸ್‌ ಆಯುಕ್ತರು, 5 ಪೊಲೀಸ್‌ ಆಯುಕ್ತರ ಸೇವೆ

ಮುಖ್ಯ ಪೊಲೀಸ್ ಆಯುಕ್ತರಾಗಿ ಹಿತೇಂದ್ರ, ಆಯುಕ್ತರಾಗಿ ಲಾಬು ರಾಮ್‌, ಬೋರಲಿಂಗಯ್ಯ, ಹರ್ಷ, ವಂಶಿಕೃಷ್ಣ, ವಿಕಾಸ್‌ ಕುಮಾರ್‌ ನೇಮಕ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪ್ರೇಯಸಿ ಬಿಟ್ಟು ಹೋಗಿದ್ದಕ್ಕೆಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಡಾಂಬರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ