;Resize=(412,232))
ಬೆಂಗಳೂರು : ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಬುಧವಾರ ಸುರಿದ ಮಳೆ ಬೆಸ್ಕಾಂ ಸೇವೆಯನ್ನು ಅಸ್ತವ್ಯಸ್ತಗೊಳಿಸಿದ್ದು, ವಿದ್ಯುತ್ ವ್ಯತ್ಯಯದ ಬಗ್ಗೆ ಬುಧವಾರ ರಾತ್ರಿ 12 ಗಂಟೆವರೆಗೆ 12,311 ದೂರುಗಳು ಬಂದಿವೆ.
ಭಾರೀ ಗಾಳಿ-ಮಳೆಗೆ 461 ವಿದ್ಯುತ್ ಕಂಬಗಳು, 77 ವಿದ್ಯುತ್ ಪರಿವರ್ತಕ, ಸುಮಾರು 1.8 ನಷ್ಟು ಕಿ.ಮೀ ಉದ್ದದ ವಿದ್ಯುತ್ ತಂತಿಗಳು ಹಾನಿಗೊಳಗಾಗಿದ್ದು, ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 87.32 ಲಕ್ಷ ರು. ನಷ್ಟ ಅಂದಾಜಿಸಲಾಗಿದೆ.
ಆಲಿಕಲ್ಲು ಸಹಿತ ಸುರಿದ ಗಾಳಿ-ಮಳೆಗೆ ಬೆಸ್ಕಾಂನ ವಿದ್ಯುತ್ ತಂತಿಗಳು ಹಾಗೂ ವಿದ್ಯುತ್ ಪರಿವರ್ತಕಗಳ ಮೇಲೆ ಮರ ಹಾಗೂ ಮರದ ಕೊಂಬೆಗಳು ಬಿದ್ದ ಪರಿಣಾಮ ಬೆಂಗಳೂರು ನಗರದ ಹಲವೆಡೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಿದ್ಯುತ್ ಪೂರೈಕೆ ಪುನರ್ ಸ್ಥಾಪಿಸುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ. ಕೆಲವು ಪ್ರದೇಶಗಳಲ್ಲಿ ಹಾನಿಗೊಳಗಾದ ವಿದ್ಯುತ್ ಮೂಲ ಸೌಕರ್ಯಗಳನ್ನು ಸರಿಪಡಿಸಿ , ತಕ್ಷಣವೇ ವಿದ್ಯುತ್ ಪೂರೈಕೆ ಮಾಡಲಾಗಿದೆ. ಉಳಿದ ಕಡೆ ವೇಗವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲೇ 186 ವಿದ್ಯುತ್ ಕಂಬಗಳು, 38 ಟ್ರಾನ್ಸ್ ಫಾರ್ಮರ್ ಗಳು ಹಾಗೂ 0.9 ನಷ್ಟು ಕಿ.ಮೀ ಉದ್ದದ ವಿದ್ಯುತ್ ತಂತಿಗಳು ಹಾನಿಯಾಗಿದೆ. ಗಾಳಿ-ಮಳೆಗೆ ವಿದ್ಯುತ್ ವ್ಯತ್ಯಯದ ಕುರಿತು ಬುಧವಾರ ಸಂಜೆಯಿಂದ ಮಧ್ಯರಾತ್ರಿವರೆಗೆ ಬೆಸ್ಕಾಂ ಸಹಾಯವಾಣಿಗೆ (1912) 55,000 ಕರೆಗಳು ಬಂದಿವೆ. ಈ ಪೈಕಿ ವಿದ್ಯುತ್ ವ್ಯತ್ಯಯಕ್ಕೆ ಸಂಬಂಧಿಸಿದಂತೆ 12311 ದೂರುಗಳನ್ನು ನೋಂದಣಿ ಮಾಡಿಕೊಂಡಿದ್ದು, 11859 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆ ಮುಂದುವರಿಯುವ ಸೂಚನೆ ಇರುವುದರಿಂದ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಳೆ ಹಾನಿ ಬೆನ್ನಲ್ಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಅವರು, ಬೆಸ್ಕಾಂನಿಂದ ಎಲ್ಲಾ ಕ್ರಮ ಕೈಗೊಳ್ಳಬೇಕು. ಜತೆಗೆ ವಿದ್ಯುತ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಹೇಳಿದ್ದಾರೆ.
ವಿದ್ಯುತ್ ಕಂಬ ವಾಲಿದ್ದರೆ ಅಥವಾ ಮರಗಳ ಕೊಂಬೆಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು ಕಂಡು ಬಂದರೆ ಅವುಗಳ ಸಮೀಪ ಹೋಗದೆ ಹತ್ತಿರದ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಮಾಹಿತಿ ನೀಡಬೇಕು ಅಥವಾ ಬೆಸ್ಕಾಂ 1912 ಅಥವಾ ವಾಟ್ಸ್ ಆಪ್ ಸಹಾಯವಾಣಿಗೆ ದೂರು ನೀಡಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.
ಬೆಂಗಳೂರು ನಗರ ಜಿಲ್ಲೆ: ದಕ್ಷಿಣ ವೃತ್ತ : 8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ-:8277884013 , ಉತ್ತರ ವೃತ್ತ :8277884014,
ಕೋಲಾರ ಜಿಲ್ಲೆ : 8277884015, ಚಿಕ್ಕಬಳ್ಳಾಪುರ ಜಿಲ್ಲೆ : 8277884016, ಬೆಂಗಳೂರು ಗ್ರಾಮಾಂತರ ಜಿಲ್ಲೆ : 8277884017, ರಾಮನಗರ ಜಿಲ್ಲೆ : 8277884018, ತುಮಕೂರು ಜಿಲ್ಲೆ : 8277884019, ಚಿತ್ರದರ್ಗ ಜಿಲ್ಲೆ : 8277884020, ಮತ್ತು ದಾವಣಗೆರೆ ಜಿಲ್ಲೆ : 8277884021