ರದ್ದಾದ ಎಲ್ಲ ಬಿಪಿಎಲ್ ಪಡಿತರ ಚೀಟಿಗಳನ್ನು ಒಂದು ವಾರದೊಳಗೆ ಮರು ಸ್ಥಾಪಿಸುವುದಾಗಿ ಸರ್ಕಾರ ಹೇಳಿದ್ದರೂ ಸಹ ಅದು ಕೈಗೂಡಿಲ್ಲ. ಈ ಕುರಿತು ಅದು ಹಾಕಿಕೊಂಡಿದ್ದ ಸೋಮವಾರದ ಗಡುವು ಮುಗಿದಿದೆ. ಆದರೆ ಈ ಪ್ರಕ್ರಿಯೆ ಮಾಡಲು ಕನಿಷ್ಠ 15 ದಿನಗಳ ಕಾಲಾವಕಾಶ ಬೇಕಾಗುತ್ತದೆ
ಬೆಂಗಳೂರು : ರದ್ದಾದ ಎಲ್ಲ ಬಿಪಿಎಲ್ ಪಡಿತರ ಚೀಟಿಗಳನ್ನು ಒಂದು ವಾರದೊಳಗೆ ಮರು ಸ್ಥಾಪಿಸುವುದಾಗಿ ಸರ್ಕಾರ ಹೇಳಿದ್ದರೂ ಸಹ ಅದು ಕೈಗೂಡಿಲ್ಲ. ಈ ಕುರಿತು ಅದು ಹಾಕಿಕೊಂಡಿದ್ದ ಸೋಮವಾರದ ಗಡುವು ಮುಗಿದಿದೆ. ಆದರೆ ಈ ಪ್ರಕ್ರಿಯೆ ಮಾಡಲು ಕನಿಷ್ಠ 15 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಅಮಾನತು ಮಾಡಿರುವ ಪಡಿತರ ಚೀಟಿಗಳನ್ನು ಮರುಸ್ಥಾಪನೆ ಕಾರ್ಯ ನಡೆಯುತ್ತಿದ್ದರೂ, ರದ್ದಾಗಿರುವ ಹಾಗೂ ಅಮಾನತ್ತಿನಲ್ಲಿ ಇಡಲಾಗಿರುವ ಎಲ್ಲ ಕಾರ್ಡ್‌ಗಳನ್ನು ಬಿಪಿಎಲ್ ಕಾರ್ಡ್‌ಗಳಾಗಿ ಮಾಡಲು ಕೇವಲ ಮೂರ್ನಾಲ್ಕು ದಿನಗಳಲ್ಲಿ ಸಾಧ್ಯವಿಲ್ಲ. ಎನ್‌ಐಸಿ ತಂತ್ರಾಂಶದ ಮೂಲಕ ಮರು ಸ್ಥಾಪನೆ ಮಾಡಲು ಮತ್ತು ಅಮಾನತ್ತಿನಲ್ಲಿಡಲಾಗಿದ್ದ ಕಾರ್ಡ್‌ಗಳನ್ನು ಆ್ಯಕ್ಟಿವ್ ಮಾಡಲಾಗುತ್ತಿದೆ. ಹಂತ ಹಂತವಾಗಿ ಈ ಕಾರ್ಯ ಮಾಡಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.
ಬಿಪಿಎಲ್ ಮರುಸ್ಥಾಪಿಸಲು ಸೋಮವಾರ ಕಡೆ ದಿನವಾಗಿತ್ತು. ನವೆಂಬರ್ 25ರೊಳಗೆ ಸರಿಪಡಿಸಲು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಗಡುವು ನೀಡಿದ್ದು ನಿಜ. ಆದರೆ ನಿಗದಿತ ಅವಧಿಯೊಳಗೆ ಎಲ್ಲವನ್ನು ಮರುಸ್ಥಾಪಿಸಲು ಕಷ್ಟ. ಹಂತ ಹಂತವಾಗಿ ಕಾರ್ಯ ಪೂರ್ಣಗೊಳಿಸಲು ಆಹಾರ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಜೊತೆಗೆ ಗುರುತಿಸಿರುವ ತೆರಿಗೆ ಪಾವತಿದಾರರು 1,06,152 ಮತ್ತು ಸರ್ಕಾರಿ ನೌಕರರು 4,272 ಮಂದಿ ಪಡೆದಿರುವ ಬಿಪಿಎಲ್ ಪಡಿತರಚೀಟಿ ರದ್ದುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರುಸ್ಥಾಪನೆ ಕಾರ್ಯವನ್ನು ಆಹಾರ ತಂತ್ರಾಂಶದಲ್ಲಿ ಜಂಟಿ ನಿರ್ದೇಶಕರು, ಉಪ ನಿರ್ದೇಶಕರ ಲಾಗಿನ್‌ನಲ್ಲಿ ಅವಕಾಶ ನೀಡಲಾಗಿದೆ. ಈ ಕಾರ್ಯವನ್ನು ನೋಡಲ್ ಅಧಿಕಾರಿಗಳು ಉಸ್ತುವಾರಿ ವಹಿಸಿದ ಜಿಲ್ಲೆಗಳಲ್ಲಿ ಮೇಲ್ಚಿಚಾರಣೆಗೊಳಿಸುತ್ತಿದ್ದಾರೆ.
ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾಯಿಸಲಾದ ಕಾರ್ಡ್‌ಗಳನ್ನು ಪುನಃ ಬಿಪಿಎಲ್ ಆಗಿ ಪರಿವರ್ತಿಸಲಾಗುತ್ತಿದೆ. ಅಮಾನತ್ತಿನಲ್ಲಿದ್ದ ಬಿಪಿಎಲ್ ಕಾರ್ಡ್‌ಗಳ ಅಮಾನತು ತೆರವುಗೊಳಿಸಲಾಗುತ್ತಿದೆ. ಬೆಂಗಳೂರಿನಲ್ಲಿ ರಾಜಾಜಿನಗರ ಐಆರ್‌ಐ, ಪಶ್ಚಿಮ ವಲಯಲದಲ್ಲಿ ಬಸವನಗುಡಿ, ಉತ್ತರ ವಲಯದಲ್ಲಿ ಮೆಜೆಸ್ಟಿಕ್ ಸಮೀಪದ ಆಹಾರ ಇಲಾಖೆ ಕೇಂದ್ರ, ಕೆಂಗೇರಿ, ಬನಶಂಕರಿ, ಆರ್ ಟಿ ನಗರ - ವಯ್ಯಾಲಿ ಕವಾಲ್ ಆಹಾರ ಇಲಾಖೆಯ ಕಚೇರಿ, ಯಲಹಂಕ ಆಹಾರ ನಾಗರಿಕ ಸರಬರಾಜು ಇಲಾಖೆಗಳಲ್ಲಿ ತಿದ್ದುಪಡಿ ಕಾರ್ಯ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲೂ ಇದು ಆಯಾ ಪ್ರದೇಶವಾರು ಕಚೇರಿಗಳಲ್ಲಿ ನಡೆಯುತ್ತಿದೆ.
ಸರ್ಕಾರದ ಉಚಿತ ಯೋಜನೆ ಬಡವರಿಗೆ ತಲುಪಬೇಕು. ತಿಳಿದೋ, ತಿಳಿಯದೆಯೋ ಬಿಪಿಎಲ್ ಕಾರ್ಡ್ ಪಡೆದಿರುವ ಸರ್ಕಾರಿ ನೌಕರರು ಕಾರ್ಡ್ ಹಿಂದಿರುಗಿಸಬೇಕು. ಸರ್ಕಾರಿ ನೌಕರಿಗೆ ಸೇರುವುದಕ್ಕೂ ಮೊದಲು ಕಾರ್ಡ್ ಪಡೆದಿದ್ದರೆ ಈಗ ಹಿಂದಿರುಗಿಸಿ ಸರ್ಕಾರ ಕೈಗೊಳ್ಳಬಹುದಾದ ಕ್ರಮದಿಂದ ತಪ್ಪಿಸಿಕೊಳ್ಳುವುದು ಒಳಿತು.
- ಷಡಾಕ್ಷರಿ, ಮಾಜಿ ಅಧ್ಯಕ್ಷ, ಸರ್ಕಾರಿ ನೌಕರರ ಸಂಘ