;Resize=(412,232))
ಬೆಂಗಳೂರು : ಬ್ರಾಹ್ಮಣ ಸಮುದಾಯದ ಯಾರೊಬ್ಬರಿಗೂ ನೂತನ ಸಂಪುಟದಲ್ಲಿ ಸಚಿವ ಸ್ಥಾನ ನೀಡದಿರುವುದು ಖಂಡನೀಯ. ಶಾಸಕರಾದ ಆರ್.ವಿ.ದೇಶಪಾಂಡೆ, ದಿನೇಶ್ ಗುಂಡೂರಾವ್ ಮತ್ತು ವಿಶ್ವಾಸ್ ವೈದ್ಯ ಈ ಮೂವರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸರ್ಕಾರವನ್ನು ಆಗ್ರಹಿಸಿದೆ.
ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್ ಅವರು, ಆರ್.ಗುಂಡೂರಾವ್, ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 30 ವರ್ಷಗಳಲ್ಲಿ ಪ್ರತಿಯೊಂದು ಸಚಿವ ಸಂಪುಟದಲ್ಲೂ ಬ್ರಾಹ್ಮಣ ಸಮುದಾಯದ ಕನಿಷ್ಠ ಒಬ್ಬರಾದರೂ ಸಚಿವ ಇರುತ್ತಿದ್ದರು. ಆದರೆ, ಈ ಬಾರಿಯ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯದ ಶಾಸಕರೊಬ್ಬರಿಗೆ ಸಚಿವ ಸ್ಥಾನ ಕೊಡದಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಮಹಾಸಭಾದ ಮಾಜಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಡಾ.ಕೆ.ಎಸ್.ಎನ್.ದೀಕ್ಷಿತ್, ಆರ್.ಲಕ್ಷ್ಮಿಕಾಂತ್, ಚಂದ್ರಶೇಖರ್, ಅರುಣ್ ಕುಮಾರ್ ಶರ್ಮಾ, ದಿವಾಕರ್ ಸೇರಿದಂತೆ ಇತರರು ಇದ್ದರು.
ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು ಹಳಿಯಾಳ ಕ್ಷೇತ್ರದಿಂದ 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸುದೀರ್ಘ ರಾಜಕೀಯ ಅನುಭವವಿದೆ. ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಹಾಗೂ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಸತತ 10 ವರ್ಷಗಳ ಕಾಲ ಸಚಿವರಾಗಿದ್ದರು. ನಂತರ 2015-2018ರವರೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲೂ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅಂತಹ ಅನುಭವಿಗಳಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂದರು.
ಬೆಂಗಳೂರಿನ ಗಾಂಧಿನಗರ ಕ್ಷೇತ್ರದ 6 ಬಾರಿಯ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಪುತ್ರರಾಗಿರುವ ದಿನೇಶ್ ಗುಂಡೂರಾವ್ ಅವರಿಗೂ ಈ ಬಾರಿ ಸಚಿವ ಸ್ಥಾನ ನೀಡಿಲ್ಲ. ಸಿದ್ದರಾಮಯ್ಯ ಅವರ ಮೊದಲ ಹಾಗೂ ಎರಡನೇ ಅವಧಿಯ ಸಚಿವ ಸಂಪುಟಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ 2018-2020ರವರೆಗೆ ಕೆಪಿಸಿಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದರು.