;Resize=(412,232))
ಬೆಂಗಳೂರು : ಬೆಂಗಳೂರಿನ ರಸ್ತೆ ಅಭಿವೃದ್ಧಿ, ಸಂಚಾರ ದಟ್ಟಣೆ, ವಾಹನ ನಿಲುಗಡೆಗೆ ವ್ಯವಸ್ಥೆ, ಸಾರ್ವಜನಿಕ ಕಾಮಗಾರಿಗಳು ಸೇರಿ ನಗರದ ಮೂಲಸಮಸ್ಯೆಗಳಿಗೆ ಪರಿಹಾರ ನೀಡುವ ದೃಷ್ಟಿಯಿಟ್ಟುಕೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯ ಐದು ನಗರ ಪಾಲಿಕೆಗಳು ಚೊಚ್ಚಲ ಬಜೆಟ್ ಮಂಡಿಸಿವೆ.
ಐದೂ ನಗರ ಪಾಲಿಕೆಗಳು ಅಳೆದು ತೂಗಿ ಬಜೆಟ್ ಮಂಡಿಸಿದ್ದರೂ, ಬೆಂಗಳೂರು ನಗರದ ಅಭಿವೃದ್ಧಿಗೆ 20216.72 ಕೋಟಿ ರು. ಮೊತ್ತದ ಬೃಹತ್ ಗಾತ್ರದ ಆಯವ್ಯಯವನ್ನು ನೀಡಲಾಗಿದೆ.
ಕಳೆದ ಬಾರಿ ಬಿಬಿಎಂಪಿ ಆರಂಭದಲ್ಲಿ 19927.08 ಕೋಟಿ ರು. ಮೊತ್ತದ ಬಜೆಟ್ ಮಂಡಿಸಲಾಗಿತ್ತು. ಆದರೆ, ವರ್ಷಾಂತ್ಯಕ್ಕೆ ಹೆಚ್ಚುವರಿಯಾಗಿ 509.69 ಕೋಟಿ ರು. ಸೇರಿಸಿ ಬಜೆಟ್ ಗಾತ್ರವನ್ನು 20439.77 ಕೋಟಿ ರು.ಗೆ ಹಿಗ್ಗಿಸಲಾಗಿತ್ತು. ಆದರೆ ಐದು ನಗರ ಪಾಲಿಕೆಗಳು ಒಟ್ಟಾಗಿ 223.05 ಕೋಟಿ ರು. ಕಡಿಮೆ ಮೊತ್ತದ ಬಜೆಟ್ ಮಂಡಿಸಿವೆ.
4 ಪಾಲಿಕೆಗಳು ಉಳಿತಾಯ ಬಜೆಟ್ ಮಂಡಿಸಿದ್ದರೆ, ಪೂರ್ವ ನಗರ ಪಾಲಿಕೆ ಕೊರತೆ ಬಜೆಟ್ ಮಂಡಿಸಿದೆ. ಪೂರ್ವ ನಗರ ಪಾಲಿಕೆಯು 3888.41 ಕೋಟಿ ರು. ಆದಾಯ ನಿರೀಕ್ಷೆ ಮಾಡಿ 3899.98 ಕೋಟಿ ರು. ವೆಚ್ಚ ಮಾಡುವ ಮೂಲಕ 11.57 ಕೋಟಿ ರು. ಕೊರತೆ ತೋರಿಸಿದೆ. ಉಳಿದ ನಾಲ್ಕು ನಗರ ಪಾಲಿಕೆಗಳು ಉಳಿತಾಯ ಬಜೆಟ್ ಮಂಡಿಸಿರುವ ಕಾರಣದಿಂದಾಗಿ ಎಲ್ಲ ಐದು ನಗರ ಪಾಲಿಕೆಗಳ ಬಜೆಟ್ ಕ್ರೋಢೀಕರಿಸಿದರೆ ಒಟ್ಟು 2.58 ಕೋಟಿ ರು. ಉಳಿತಾಯವನ್ನು ತೋರಿಸಲಾಗಿದೆ.
==
- ರಸ್ತೆ, ಚರಂಡಿ, ಡಾಂಬರ್‌ನಂಥ ಕೆಲಸಕ್ಕೆ ₹11720 ಕೋಟಿ
ಐದೂ ನಗರ ಪಾಲಿಕೆಗಳು ಮಂಡಿಸಿರುವ ಬಜೆಟ್‌ನಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ರಸ್ತೆ ಅಭಿವೃದ್ಧಿ, ಡಾಂಬರೀಕರಣ, ಚರಂಡಿ ದುರಸ್ತಿ, ಜಂಕ್ಷನ್‌ಗಳ ಅಭಿವೃದ್ಧಿ, ಮೂಲಸೌಕರ್ಯ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. ಒಟ್ಟಾರೆ 11720.53 ಕೋಟಿ ರು.ಗಳನ್ನು ಬೆಂಗಳೂರು ನಗರದ ಮೂಲಸೌಕರ್ಯ, ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ವ್ಯಯಿಸಲಿವೆ.
==
ಸ್ವಂತ ಆದಾಯವೇ
ಸಂಪನ್ಮೂಲ ಮೂಲ
- ತೆರಿಗೆಯಿಂದ ₹6195 ಕೋಟಿ, ತೆರಿಗೆಯೇತರ ₹4913 ಕೋಟಿ
ಬಜೆಟ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಐದು ನಗರ ಪಾಲಿಕೆಗಳು ಸ್ವಂತ ಆದಾಯವನ್ನು ಹೆಚ್ಚಾಗಿ ನೆಚ್ಚಿಕೊಂಡಿವೆ. ಒಟ್ಟು 20218.99 ಕೋಟಿ ರು. ಆದಾಯದಲ್ಲಿ ತೆರಿಗೆ ಮತ್ತು ತೆರಿಗೇತರ ಆದಾಯಗಳಿಂದ ಒಟ್ಟು 11109.01 ಕೋಟಿ ರು. ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಅದರಲ್ಲೂ ತೆರಿಗೆ ಆದಾಯದಿಂದ 6195.80 ಮತ್ತು ತೆರಿಗೇತರ ಆದಾಯ ಮೂಲಗಳಿಂದ 4913.21 ಕೋಟಿ ರು. ಸಂಗ್ರಹಿಸುವುದಾಗಿ ತಿಳಿಸಲಾಗಿದೆ. ಆಸ್ತಿ ತೆರಿಗೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ಬಜೆಟ್‌ನಲ್ಲಿ ಘೋಷಿಸಿಕೊಂಡಿವೆ.
==
ಒಂದು ಪಾಲಿಕೆ ಮಾತ್ರ
ಬಿ-ಸ್ಮೈಲ್‌ಗೆ ಅನುದಾನ
ಜಿಬಿಎ ವ್ಯಾಪ್ತಿಯಲ್ಲಿ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬಿ-ಸ್ಮೈಲ್ ಸಂಸ್ಥೆ ರಚಿಸಿವೆ. ಅದರ ಮೂಲಕವೇ ಬೃಹತ್ ಯೋಜನೆ ಅನುಷ್ಠಾನ ಮಾಡಬೇಕು ಎಂದು ತಿಳಿಸಲಾಗಿದೆ. ಬೃಹತ್ ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ಅನುದಾನ ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಐದು ನಗರ ಪಾಲಿಕೆಗಳ ಪೈಕಿ ನಾಲ್ಕು ನಗರ ಪಾಲಿಕೆಗಳು ಬಿ-ಸ್ಮೈಲ್ ಅಡಿ ಕೈಗೊಳ್ಳುವ ಕಾಮಗಾರಿಗಳಿಗೆ ನಿಖರವಾಗಿ ಅನುದಾನ ನಿಗದಿ ಮಾಡಿಲ್ಲ. ಅದರೆ, ದಕ್ಷಿಣ ನಗರ ಪಾಲಿಕೆ ಬಿ-ಸ್ಮೈಲ್ ಅಡಿ ಕೈಗೊಳ್ಳುವ ಕಾಮಗಾರಿಗಳಿಗಾಗಿ 625.40 ಕೋಟಿ ರು. ಮೀಸಲಿಡುವುದಾಗಿ ಘೋಷಿಸಿದೆ.
==
ಮುನ್ಸಿಪಲ್ ಬಾಂಡ್ ವಿತರಿಸಿ
₹1000 ಕೋಟಿ ಸಂಗ್ರಹ ಗುರಿ
- ಎಲ್ಲಾ 5 ಪಾಲಿಕೆಗಳಿಂದ ತಲಾ ₹200 ಕೋಟಿ ಸಂಗ್ರಹ
ನಗರ ಪಾಲಿಕೆಗಳಿಗೆ ಆದಾಯ ಮೂಲ ಕಲ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಮುನ್ಸಿಪಲ್ ಬಾಂಡ್‌ಗಳನ್ನು ವಿತರಿಸಿ ಸಾಲ ಪಡೆಯುವ ಅವಕಾಶ ಕಲ್ಪಿಸಿದೆ. ಎಲ್ಲ ಐದು ನಗರ ಪಾಲಿಕೆಗಳು ಮುನ್ಸಿಪಲ್ ಬಾಂಡ್ ವಿತರಿಸಿ ತಲಾ 200 ಕೋಟಿ ರು.ಗಳಂತೆ ಒಟ್ಟಾರೆ ಒಂದು ಸಾವಿರ ಕೋಟಿ ರು. ಸಂಗ್ರಹಿಸುವುದಾಗಿ ಬಜೆಟ್‌ನಲ್ಲಿ ತಿಳಿಸಿವೆ. ಉಳಿದಂತೆ ಐದು ನಗರ ಪಾಲಿಕೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನ, ಅಸಾಧಾರಣ ಆದಾಯ ಮೂಲಗಳಿಂದ 8109.88 ಕೋಟಿ ರು. ಆದಾಯದ ನಿರೀಕ್ಷೆ ಇಟ್ಟುಕೊಂಡಿವೆ. ಅದರಲ್ಲೂ ಹೊಸ ಖಾತೆಗಳನ್ನು ನೀಡುವಾಗ ಮುದ್ರಾಂಕ ಶುಲ್ಕದ ಮೇಲೆ ಶೇ. 2ರಷ್ಟು ತೆರಿಗೆ ವಸೂಲಿ, ಬಿ ಖಾತಾಗಳಿಗೆ ಎ ಖಾತಾ ವಿತರಣೆ ಶುಲ್ಕ ಸೇರಿದಂತೆ ಮತ್ತಿತರ ಮೂಲಗಳಿಂದ ಆದಾಯ ಸಂಗ್ರಹಿಸುವುದಾಗಿ ತಿಳಿಸಿವೆ.
==
ಬೀದಿ ನಾಯಿ, ಪರಿಸರ ಸ್ನೇಹಿ
ಕ್ರಮಕ್ಕೆ ಬಜೆಟ್‌ನಲ್ಲಿ ಆದ್ಯತೆ
ಸುಪ್ರೀಂಕೋರ್ಟ್ ಆದೇಶದಂತೆ ಬೀದಿ ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸುವುದಾಗಿ ಎಲ್ಲ ಪಾಲಿಕೆಗಳು ತಿಳಿಸಿವೆ. ಜತೆಗೆ ಉದ್ಯಾನಗಳ ಅಭಿವೃದ್ಧಿ, ಅಪಾರ್ಟ್‌ಮೆಂಟ್‌ಗಳಲ್ಲಿ ಇವಿ ಚಾರ್ಜಿಂಗ್ ಕಡ್ಡಾಯಗೊಳಿಸುವುದು ಸೇರಿದಂತೆ ಮತ್ತಿತರ ಪರಿಸರಕ್ಕೆ ಪೂರಕ ಕ್ರಮಗಳನ್ನು ಘೋಷಿಸಿವೆ.
==
ಪ್ರತಿ ವಾರ್ಡ್‌ಗೂ
₹2.25 ಕೋಟಿ
- ಒಟ್ಟು ₹830 ಕೋಟಿ ಅನುದಾನ
ಬಿಬಿಎಂಪಿ ಅವಧಿಯಲ್ಲಿ ಹಳೇ ವಾರ್ಡ್‌ಗಳಿಗೆ 2 ಕೋಟಿ ರು. ಮತ್ತು ಹೊಸ ವಾರ್ಡ್‌ಗಳಿಗೆ 3 ಕೋಟಿ ರು. ವಾರ್ಷಿಕ ಅನುದಾನ ನೀಡಲಾಗುತ್ತಿತ್ತು. ಅದರಲ್ಲಿ ವಾರ್ಡ್ ಅಭಿವೃದ್ಧಿ ಕಾರ್ಯ, ರಸ್ತೆ ಗುಂಡಿ ಮುಚ್ಚುವುದು, ಚರಂಡಿ ಹೂಳೆತ್ತುವ ಕಾರ್ಯಗಳನ್ನು ಮಾಡಬೇಕಿತ್ತು. ಈಗಲೂ ಆ ಕಾರ್ಯಗಳನ್ನು ಮುಂದುವರಿಸಲಾಗಿದ್ದರೂ, ಎಲ್ಲ 369 ವಾರ್ಡ್‌ಗಳಿಗೆ ತಲಾ 2.25 ಕೋಟಿ ರು. ನಿಗದಿ ಮಾಡಿ ಒಟ್ಟಾರೆ 830.25 ಕೋಟಿ ರು. ಅನುದಾನ ಮೀಸಲಿಡಲಾಗಿದೆ.
==
ಐದೂ ಪಾಲಿಕೆಗಳ ಕ್ರೋಢೀಕೃತ ಬಜೆಟ್ ವಿವರ:
- ಒಟ್ಟು ಆದಾಯ: ₹20218.99 ಕೋಟಿ
- ಒಟ್ಟು ವೆಚ್ಚ (ಬಜೆಟ್ ಗಾತ್ರ): ₹20216.41 ಕೋಟಿ
- ಸಾರ್ವಜನಿಕ ಕಾಮಗಾರಿಗೆ ವೆಚ್ಚ: ₹11720.53 ಕೋಟಿ
- ತೆರಿಗೆ ಆದಾಯ: ₹6195.80 ಕೋಟಿ
- ತೆರಿಗೇತರ ಆದಾಯ: ₹4913.21 ಕೋಟಿ
ಪಶ್ಚಿಮ ಪಾಲಿಕೆ
₹4732 ಕೋಟಿ
==
ಉತ್ತರ ಪಾಲಿಕೆ
₹4341 ಕೋಟಿ
==
ಪೂರ್ವ ಪಾಲಿಕೆ
3888 ಕೋಟಿ ರು.
==
ದಕ್ಷಿಣ ಪಾಲಿಕೆ
₹3826 ಕೋಟಿ
==
ಕೇಂದ್ರ ಪಾಲಿಕೆ
3427 ಕೋಟಿ