;Resize=(412,232))
ಬೆಂಗಳೂರು : ‘ಜೆನ್-ಝೀಗಳು ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಅವರಿಗೆ ಜಾತಿ, ಧರ್ಮಗಳ ವ್ಯತ್ಯಾಸ ಬೇಕಾಗಿಲ್ಲ. ಜೀವನ ಕಟ್ಟಿಕೊಳ್ಳುವುದೇ ಅವರಿಗೆ ಮುಖ್ಯ. ಇಂಥದ್ದೊಂದು ಆಲೋಚನೆ ಕಡೆಗೆ ಅವರು ಇಡೀ ಸಮಾಜವನ್ನು ಕೊಂಡೊಯ್ಯುತ್ತಿರುವುದು ಗಮನಾರ್ಹ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು ಜನ್ಮದಿನಾಚರಣೆ ಅಂಗವಾಗಿ ಪ್ರೊ.ಪಿ.ವಿ.ನಂಜರಾಜ ಅರಸು ಅವರಿಗೆ ''ಡಿ. ದೇವರಾಜ ಅರಸು ಪ್ರಶಸ್ತಿ'' ಪ್ರದಾನ ಮಾಡಿ ಮಾತನಾಡಿದರು.
ಜೆನ್-ಝೀ ಸಮುದಾಯದ ಆಸೆ, ಆಕಾಂಕ್ಷೆಗಳು ಬೇರೆಯೇ ಇವೆ. ಅವರ ಆಸೆ, ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ನಾವು ಮಾಡಬೇಕು ಎಂದು ಕರೆ ನೀಡಿದರು.
ರಾಜ್ಯ ಸರ್ಕಾರ ಈಗಾಗಲೇ ಭಾರತ್ ಜೋಡೋ ಯುವ ಸಂಘ ಸ್ಥಾಪಿಸುತ್ತಿದೆ. ಹೀಗೆ ನಾವು ಗ್ಯಾರಂಟಿ ಯೋಜನೆ, ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಸಮಾನವಾಗಿ ಜಾರಿ ಮಾಡುತ್ತಾ, ರಾಜ್ಯವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುತ್ತಿದ್ದೇವೆ ಎಂದರು.
ಇಂದು ಮಾಜಿ ಸಿಎಂ ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನ. ದೇವರಾಜ ಅರಸು ಅವರು ಶ್ರೇಣೀಕೃತ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡವರು. ಪ್ರಪಂಚದ ಯಾವುದೇ ದೇಶದಲ್ಲಿ ಶ್ರೇಣಿಕೃತ ವ್ಯವಸ್ಥೆ ಇಲ್ಲ. ನಾನಂತು ಯಾವ ದೇಶದಲ್ಲೂ ಜಾತಿ ವ್ಯವಸ್ಥೆ ನೋಡಿಲ್ಲ. ಭಾರತದಲ್ಲಿ ಯಾಕೆ ಬಂತು ಎನ್ನುವುದಕ್ಕೆ ಉತ್ತರ ಎಲ್ಲರಿಗೂ ಗೊತ್ತಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಬೇಕೆಂಬ ತಮ್ಮ ಕನಸು ಸಾಕಾರಕ್ಕೆ ಅರಸು ಶ್ರಮಿಸಿದರು ಎಂದು ಪರಮೇಶ್ವರ್ ಹೇಳಿದರು.
ಮಲ ಹೊರುವ ಪದ್ಧತಿ ಜಗತ್ತಿನ ಯಾವ ದೇಶದಲ್ಲೂ ಇರಲಿಲ್ಲ. ಅಂತಹ ಅನಿಷ್ಠ ಪದ್ಧತಿ ರದ್ದು ಮಾಡಿದವರು, ಭೂ ಸುಧಾರಣೆಯಂತಹ ಕಾಯ್ದೆ ತಂದವರು ದೇವರಾಜ ಅರಸು. 21ನೇ ಶತಮಾನದಲ್ಲೂ ಈ ಅನಿಷ್ಟ ಪದ್ಧತಿ ಅನೇಕ ರಾಜ್ಯಗಳಲ್ಲಿ ಇನ್ನೂ ಇದೆ ಎನ್ನುವುದು ನೋವಿನ ವಿಚಾರ ಎಂದರು.
ಇದೀಗ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ದಾರಿಯಲ್ಲಿ ನಡೆದುಕೊಂಡು ಬಂದವರು. ದನಿಯಿಲ್ಲದ ಜನರಿಗೆ ದನಿ ನೀಡುವ ಕೆಲಸ ಮಾಡಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್, ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರರು. ಅನಿಷ್ಠ ಪದ್ಧತಿಗಳನ್ನು ರದ್ದು ಮಾಡಿ ಸಮಾಜದಲ್ಲಿ ಸುಧಾರಣೆ ತರುವಂತಹ ಕಾನೂನುಗಳನ್ನು ರೂಪಿಸಿದವರು. ಹಿಂದುಳಿದ ವರ್ಗ ಸೇರಿದಂತೆ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂದರು.
ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಬಸಂತಪ್ಪ, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ಭೀಮಣ್ಣ ಚಿಮ್ಮನಕಟ್ಟಿ, ಅಲ್ಲಮ್ಮಪ್ರಭು ಪಾಟೀಲ್ ಸೇರಿ ಹಲವರು ಹಾಜರಿದ್ದರು.
ಸಾಮಾಜಿಕ ಪರಿವರ್ತನೆಗೆ ಕೊಡುಗೆ:
ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಡಿ. ದೇವರಾಜ ಅರಸು ಅವರು ಶೋಷಿತರು, ಹಿಂದುಳಿದ, ಬಡವರು ಹಾಗೂ ಅವಕಾಶ ವಂಚಿತರ ಧ್ವನಿಯಾಗಿ ಸಾಮಾಜಿಕ ಪರಿವರ್ತನೆಗೆ ಅವರು ನೀಡಿದ ಕೊಡುಗೆ ಅಪಾರ. ಅಧಿಕಾರವೆಂದರೆ ಕೇವಲ ಆಡಳಿತ ನಡೆಸುವ ಸಾಧನವಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅವಕಾಶ, ಗೌರವ ಮತ್ತು ಸಮಾನ ಹಕ್ಕುಗಳನ್ನು ತಲುಪಿಸುವ ಜವಾಬ್ದಾರಿ ಎಂಬುದನ್ನು ಅರಸು ಅವರು ತಮ್ಮ ಆಡಳಿತದ ಮೂಲಕ ತೋರಿಸಿಕೊಟ್ಟರು ಎಂದರು.
ಭೂ ಸುಧಾರಣೆ ಅರಸು ಆಡಳಿತದ ಪ್ರಮುಖ ಮೈಲಿಗಲ್ಲು. ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗೆ ಅರಸು ಅವರು ವಿಶೇಷ ಆದ್ಯತೆ ನೀಡಿದ್ದರು. ತಂತ್ರಜ್ಞಾನದ ಅಭಿವೃದ್ಧಿ ವಿಚಾರದಲ್ಲೂ ಅರಸು ಸಾಕಷ್ಟು ಆಸಕ್ತಿ ಹೊಂದಿದ್ದರು. ಹೀಗಾಗಿಯೇ ಅರಸು ಅವರ ಶ್ರಮದಿಂದ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣವಾಯಿತು. ಬಿಡಿಎ ಸೇರಿ ನೂರಾರು ಯೋಜನೆಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಸ್ಮರಿಸಿದರು.