₹500 ಕೋಟಿ ಮೌಲ್ಯದ ಜಮೀನು ಅಕ್ರಮ ಖಾತೆ ವರ್ಗಾವಣೆ-ಬೃಹತ್ ಹಗರಣ ಭೇದಿಸಿದ ಲೋಕಾಯುಕ್ತ

Published : Aug 21, 2026, 11:01 AM IST
karnataka lokayukta raids

ಸಾರಾಂಶ

ಸರ್ಕಾರಿ ಸಾಫ್ಟ್‌ವೇರ್ ಹಾಗೂ ಡಿಜಿಟಲ್ ಸಹಿ ದುರ್ಬಳಕೆ ಮಾಡಿ ಬರೋಬ್ಬರಿ ₹500 ಕೋಟಿ ಮೌಲ್ಯದ 62.20 ಎಕರೆ ಖಾಸಗಿ ಜಮೀನನ್ನು ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿರುವ ಬೃಹತ್ ಭೂ ಹಗರಣವನ್ನು ಲೋಕಾಯುಕ್ತ ಸಂಸ್ಥೆ ಭೇದಿಸಿದೆ.

​ಬೆಂಗಳೂರು : ಸರ್ಕಾರಿ ಸಾಫ್ಟ್‌ವೇರ್ ಹಾಗೂ ಡಿಜಿಟಲ್ ಸಹಿ ದುರ್ಬಳಕೆ ಮಾಡಿ ಬರೋಬ್ಬರಿ ₹500 ಕೋಟಿ ಮೌಲ್ಯದ 62.20 ಎಕರೆ ಖಾಸಗಿ ಜಮೀನನ್ನು ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿರುವ ಬೃಹತ್ ಭೂ ಹಗರಣವನ್ನು ಲೋಕಾಯುಕ್ತ ಸಂಸ್ಥೆ ಭೇದಿಸಿದೆ.

ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಶೋಧನಾ ವಾರಂಟ್ ಹೊರಡಿಸಿದ್ದರು. ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಉಮಾಮಹೇಶ್ ಮತ್ತು ಹಾಲಪ್ಪ ವೈ.ಬಾಲದಂಡಿ ಅವರ ತಂಡವು ದಿನಾಂಕ ಮೇ 7 ರಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ದೇವನಹಳ್ಳಿ ತಹಶೀಲ್ದಾರ್ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ದಾಖಲೆ ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಮತ್ತು ಪ್ರಸನ್ನಹಳ್ಳಿ ಗ್ರಾಮಗಳಲ್ಲಿ (ಸರ್ವೇ ನಂಬರ್‌ 84) 62.20 ಎಕರೆ ಖಾಸಗಿ ಜಮೀನನ್ನು ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿಕೊಡಲಾಗಿದೆ.

ಇದರ ಸರಕಾರಿ ಮೌಲ್ಯ 103.68 ಕೋಟಿ ರು. ಆದರೆ ಪ್ರಸ್ತುತ ಮಾರುಕಟ್ಟೆ ಮೌಲ್ಯ 500 ಕೋಟಿ ರು. ಆಗಿದ್ದು, ಎಕರೆಗೆ 8 ಕೋಟಿ ಬೆಲೆ ಇದೆ. ದೊಡ್ಡಬಳ್ಳಾಪುರ ಉಪವಿಭಾಗದ ಮಾಜಿ ಉಪವಿಭಾಗಾಧಿಕಾರಿ (ಎಸಿ) ದುರ್ಗಾಶ್ರೀ ಹಾಗೂ ಪ್ರಥಮ ದರ್ಜೆ ಸಹಾಯಕ ಮನೋಜ್ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಾಯುಕ್ತ ತನಿಖೆಯಲ್ಲಿ ಅಕ್ರಮ ಬಯಲು:

ನಕಲಿ ಆದೇಶಗಳ ಸೃಷ್ಟಿಸಿ ಇ-ಆಫೀಸ್‌ನಲ್ಲಿ ಜನರೇಟ್ ಆಗದ ನಕಲಿ ಆದೇಶಗಳನ್ನು ಬೇರೆಡೆ ಸೃಷ್ಟಿಸಿ, ದೇವನಹಳ್ಳಿ ತಹಶೀಲ್ದಾರ್ ಅವರಿಗೆ ‘ಭೂಮಿ’ ತಂತ್ರಾಂಶದಲ್ಲಿ ಸೇರ್ಪಡಿಸಲು ಕಳುಹಿಸಲಾಗಿತ್ತು. ಹೈಕೋರ್ಟ್ ಆದೇಶವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಆ ನಕಲಿ ಆದೇಶಗಳಲ್ಲಿ ಉಲ್ಲೇಖಿಸಲಾಗಿದ್ದ ಹೈಕೋರ್ಟ್‌ನ ರಿಟ್ ಅರ್ಜಿ ಹಾಗೂ ಕೆಎಟಿ ಪ್ರಕರಣ ಸಂಖ್ಯೆಗಳು ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ, ಅವು ಈ ಜಮೀನುಗಳಿಗೆ ಸಂಬಂಧಿಸಿಲ್ಲದಿರುವುದು ದೃಢಪಟ್ಟಿದೆ.

ಬಯೋಮೆಟ್ರಿಕ್ ಮತ್ತು ಡಿಜಿಟಲ್ ಸಹಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ವಿಷಯ ನಿರ್ವಾಹಕ ಮನೋಜ್ ತಮ್ಮ ಲಾಗಿನ್ ಮೂಲಕ ನಕಲಿ ದಾಖಲೆಗಳನ್ನು ಆರ್‌ಟಿಸಿ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ನಂತರ ಎಸಿ ದುರ್ಗಾಶ್ರೀ ಅವರು ತಮ್ಮ ಬಯೋಮೆಟ್ರಿಕ್ ಥಂಬ್ ಹಾಗೂ ಡಿಜಿಟಲ್ ಸಿಗ್ನೇಚರ್ ಬಳಸಿ ಅಕ್ರಮವಾಗಿ ಅನುಮೋದನೆ ನೀಡಿದ್ದರು.

ಲ್ಯಾಪ್‌ಟಾಪ್ ಬಳಸಿ ಕೃತ್ಯ:

ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಯಾವುದೇ ಅಧಿಕೃತ ಅರ್ಜಿ ಸ್ವೀಕೃತವಾಗದಿದ್ದರೂ ನೇರವಾಗಿ ಖಾತೆ ಬದಲಾವಣೆಗೆ ಕ್ರಮ ವಹಿಸಲಾಗಿದೆ. ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರು ಕಚೇರಿ ಕೆಲಸಗಳಿಗೆ ಅಧಿಕೃತ ಕಂಪ್ಯೂಟರ್ ಬದಲಿಗೆ ಖಾಸಗಿ ಲ್ಯಾಪ್‌ಟಾಪ್ ಬಳಸಿರುವುದು ಕಂಡುಬಂದಿದೆ.

ಆರೋಪಿಗಳಿಗೆ ಖುದ್ದು ಹಾಜರಾತಿಗೆ ಆದೇಶ:

​ಸಾರ್ವಜನಿಕ ದಾಖಲೆಗಳನ್ನು ತಿರುಚಿ, ಸರ್ಕಾರಿ ವ್ಯವಸ್ಥೆಗೆ ಧಕ್ಕೆ ತಂದು ನೂರಾರು ಕೋಟಿ ರು. ಮೌಲ್ಯದ ಆಸ್ತಿ ಅಕ್ರಮ ವರ್ಗಾವಣೆ ಎಸಗಿರುವ ಹಿನ್ನೆಲೆಯಲ್ಲಿ ಆರೋಪಿಗಳಾದ ಅಂದಿನ ಎಸಿ ದುರ್ಗಾಶ್ರೀ ಹಾಗೂ ಮನೋಜ್‌ನನ್ನು ಸೆ.22ಕ್ಕೆ ಲೋಕಾಯುಕ್ತ ಪೀಠದ ಮುಂದೆ ಖುದ್ದಾಗಿ ಹಾಜರಾಗಿ ತಮ್ಮ ಆಕ್ಷೇಪಣೆ ಸಲ್ಲಿಸುವಂತೆ ಉಪಲೋಕಾಯುಕ್ತರು ಆದೇಶಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

43.80 ಲಕ್ಷ ಮತದಾರರಿಗೆ ನೋಟಿಸ್‌ ನೀಡಲು ಸಿದ್ಧತೆ
ಕೆಪಿಎಸ್‌ಸಿ ಹಗರಣ: 6 ಅಭ್ಯರ್ಥಿಗಳು ತಪ್ಪೊಪ್ಪಿಗೆಗೆ ರೆಡಿ?