ಕೆಪಿಎಸ್‌ಸಿ ಹಗರಣ: 6 ಅಭ್ಯರ್ಥಿಗಳು ತಪ್ಪೊಪ್ಪಿಗೆಗೆ ರೆಡಿ?

Published : Aug 21, 2026, 06:00 AM IST
KPSC

ಸಾರಾಂಶ

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಕೆಲ ಅಭ್ಯರ್ಥಿಗಳಿಗೆ ಹೋಟೆಲ್‌ ಮತ್ತು ರೆಸಾರ್ಟ್‌ಗಳಲ್ಲಿ ಪ್ರಶ್ನೆ ಪತ್ರಿಕೆ ನೀಡಿ ಉತ್ತರ ಬರೆಸಿರುವ ಸ್ಫೋಟಕ ಮಾಹಿತಿಗಳು ಲಭ್ಯವಾಗಿದೆ

 ಬೆಂಗಳೂರು : ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಕೆಲ ಅಭ್ಯರ್ಥಿಗಳಿಗೆ ಹೋಟೆಲ್‌ ಮತ್ತು ರೆಸಾರ್ಟ್‌ಗಳಲ್ಲಿ ಪ್ರಶ್ನೆ ಪತ್ರಿಕೆ ನೀಡಿ ಉತ್ತರ ಬರೆಸಿರುವ ಸ್ಫೋಟಕ ಮಾಹಿತಿಗಳು ಲಭ್ಯವಾಗಿದೆ. ಮತ್ತೊಂದೆಡೆ ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಇದೇ ವೇಳೆ ಇ.ಡಿ ಅಧಿಕಾರಿಗಳ ದಾಳಿ ಮತ್ತು ತನಿಖೆಗೆ ಬೇಸ್ತು ಬಿದ್ದಿರುವ ಸುಮಾರು ಆರು ಅಭ್ಯರ್ಥಿಗಳ ತಪ್ಪೊಪ್ಪಿಗೆಗೆ ಮುಂದಾಗಿದ್ದಾರೆ ಎಂದೂ ತಿಳಿದು ಬಂದಿದೆ.

ಕೆಪಿಎಸ್‌ಸಿ ಹಗರಣ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆಗಿರುವ ಶಂಕೆಯ ಹಿನ್ನೆಲೆಯಲ್ಲಿ ಪಿಎಂಎಲ್‌ಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ ಅಧಿಕಾರಿಗಳು ಕೆಪಿಎಸ್‌ಸಿ ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅವರ ನಿವಾಸ, ಕೆಪಿಸಿಎಸ್‌ ಸದಸ್ಯರು ಹಾಗೂ ಅಭ್ಯರ್ಥಿಗಳ ನಿವಾಸ ಸೇರಿದಂತೆ ಏಕಕಾಲದಲ್ಲಿ 21 ಕ್ಕೂ ಕಡೆ ದಾಳಿ ನಡೆಸಿ ಕಳೆದ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಗುರುವಾರ ದಾಳಿಯನ್ನು ಬಹುತೇಕ ಅಂತ್ಯಗೊಳಿಸಿರುವ ಇ.ಡಿ ಅಧಿಕಾರಿಗಳು ದಾಖಲೆಗಳ ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದಾರೆ.

6 ಅಭ್ಯರ್ಥಿಗಳಿಂದ ತಪ್ಪೊಪ್ಪಿಗೆ?:

ಕೆಪಿಎಸ್‌ಸಿ ಹಗರಣದ ಸಂಬಂಧ ಆರೋಪಿತ ಕೆಲ ಅಭ್ಯರ್ಥಿಗಳ ನಿವಾಸದ ಮೇಲೆ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಅಭ್ಯರ್ಥಿಗಳಿಗೆ ಪ್ರಶ್ನೆಗಳ ಸುರಿ ಮಳೆಗೈದಿದ್ದಾರೆ. ಅಲ್ಲದೇ ಇ.ಡಿ ಅಧಿಕಾರಿಗಳು 20 ಅಂಕದ ಪ್ರಶ್ನೆಗಳನ್ನು ನೀಡಿ ತಕ್ಷಣವೇ ಉತ್ತರ ನೀಡಲು ಸೂಚನೆ ನೀಡಿದ್ದು, ಇ.ಡಿ ಅಧಿಕಾರಿಗಳ ದಾಳಿ ಮತ್ತು ತನಿಖೆಗೆ ಬೇಸ್ತು ಬಿದ್ದಿರುವ ಸುಮಾರು ಆರು ಅಭ್ಯರ್ಥಿಗಳ ತಪ್ಪೊಪ್ಪಿಗೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಆರೋಪಿತರ ತೀವ್ರ ವಿಚಾರಣೆ:

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಇದರಲ್ಲಿ ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ಕೈವಾಡವಿದೆ ಎಂದು ಆರೋಪಿಸಿ ಹಾಸನ ಮೂಲದ ಡಾ. ಮಂಜುನಾಥ ಎಂಬುವರು ಇತ್ತೀಚೆಗೆ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅಲ್ಲದೇ 29 ಅಭ್ಯರ್ಥಿಗಳನ್ನು ಅಕ್ರಮವಾಗಿ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳ ಹೆಸರು ಸಮೇತ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿತ ಅಭ್ಯರ್ಥಿಗಳ ನಿವಾಸದ ಮೇಲೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ರೆಸಾರ್ಟ್‌ ಮೇಲೆ ದಾಳಿ:

ಮಧ್ಯವರ್ತಿಗಳು ಹೋಟೆಲ್‌ ಮತ್ತು ರೆಸಾರ್ಟ್‌ವೊಂದಕ್ಕೆ ಕರೆದೊಯ್ದು ತರಬೇತಿ ನೀಡಿ ನಮ್ಮಿಂದ ಉತ್ತರ ಸಹಿತ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಬರೆಸಿಕೊಂಡಿದ್ದರು ಎಂದು ಕೆಲ ಅಭ್ಯರ್ಥಿಗಳು ಬಾಯ್ಬಿಟ್ಟಿದ್ದಾರೆ. ಅಭ್ಯರ್ಥಿಗಳ ಹೇಳಿಕೆಯ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದ್ದಾರೆ. ಕೆಲ ಅಭ್ಯರ್ಥಿಗಳನ್ನು ಬೆಂಗಳೂರು ಹೊರ ವಲಯ, ರಾಜ್ಯದ ಗಡಿಭಾಗದಲ್ಲಿರುವ ರೆಸಾರ್ಟ್‌, ಹೋಟೆಲ್‌ಗಳಿಗೆ ಕರೆದೊಯ್ದು ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು ಅಲ್ಲಿನ ಸಿ.ಸಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಜತೆಗೆ ಪರೀಕ್ಷೆಯ ಹಿಂದಿನ ದಿನ ಅಭ್ಯರ್ಥಿಗಳು ಎಲ್ಲಿ ಇದ್ದರು? ಎಂಬುದಕ್ಕೆ ಅವರ ಮೊಬೈಲ್‌ ಸಿಡಿಆರ್‌ ಸಂಗ್ರಹಕ್ಕೆ ಮುಂದಾಗಿದ್ದಾರೆ, ಇದರಿಂದ ಪರೀಕ್ಷೆಗೂ ಮುನ್ನವೇ ಪಶ್ನೆಪತ್ರಿಕೆ ಲೀಕ್‌ ಆಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಸಿಸಿ ಕ್ಯಾಮರಾ ದೃಶ್ಯ ಡಿಲೀಟ್‌!:

ಅಕ್ರಮ ಸಂಬಂದ ಇ.ಡಿ ಅಧಿಕಾರಿಗಳು ಮೂರನೇ ದಿನವೂ ಕೆಪಿಎಸ್‌ಸಿ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 8ರವರೆಗೂ ಕಚೇರಿಯಲ್ಲಿ ತಪಾಸಣೆ ನಡೆಸಿದ್ದಾರೆ. ಜತೆಗೆ ಓಎಂಆರ್‌ ಶೀಟ್‌ ಇರಿಸಿದ್ದ ಕೊಠಡಿಯ ಮೇಲ್ವಿಚಾರಕರನ್ನು ತೀವ್ರವಾಗಿ ವಿಚಾರಣೆ ನಡೆಸಿ, ಪರೀಕ್ಷಾ ಸಮಯದಲ್ಲಿ ಕೊಠಡಿಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸಿಸಿ ಕ್ಯಾಮೆರಾದ ಕೆಲ ದೃಶ್ಯಗಳನ್ನು ಡಿಲೀಟ್‌ ಮಾಡಿರುವುದು ಕಂಡು ಬಂದಿದೆ. ಅಲ್ಲದೇ ಓಎಂಆರ್‌ ಶೀಟ್‌ಗಳು ಅದಲು-ಬದಲಾಗಿರುವುದು ಕಂಡು ಬಂದಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ಸಂಪರ್ಕಕ್ಕೆ ಸಿಗದ ಶಾಂತ ಹೊಸಮನಿ!:

ಕೆಪಿಎಸ್‌ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಕೆಪಿಎಸ್‌ಸಿ ಸದಸ್ಯೆ ಶಾಂತ ಹೊಸಮನಿ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ ಅವರು ಸ್ಥಳದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಅವರನ್ನು ಸಂಪರ್ಕಿಸಲು ಇ.ಡಿ ಅಧಿಕಾರಿಗಳು ಪ್ರಯತ್ನಿಸಿದ್ದು ಅವರು ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಸಾಹುಕಾರ್‌ ಪುತ್ರಿ ಅಕ್ರಮ ನೇಮಕ: ದಾಖಲೆ ಸಲ್ಲಿಕೆಗೆ ಹೈಕೋರ್ಟ್‌ ಸೂಚನೆ

ಬೆಂಗಳೂರು: ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಮತ್ತು ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅಕ್ರಮವಾಗಿ ನೇಮಕವಾಗಲು ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಪುತ್ರಿ ಸುಮಾ ಸುಳ್ಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಿರುವ ಪ್ರಕರಣದ ತನಿಖೆಗೆ ಸಂಬಂಧಿಸಿದ ದಾಖಲೆ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಇ.ಡಿ. ದಾಳಿ ಬಳಿಕ ಮಂತ್ರಾಲಯಕ್ಕೆ ಸಾಹುಕಾರ್ ಯಾತ್ರೆ?

ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆಯಲ್ಲಿ ಬುಧವಾರ ತಡರಾತ್ರಿ ಇ.ಡಿ ದಾಳಿ ಅಂತ್ಯಗೊಂಡಿದ್ದು, ದಾಳಿ ಅಂತ್ಯವಾಗುತ್ತಿದಂತೆಯೇ ಗುರುವಾರ ಬೆಳಗಿನ ಜಾವ ಶಿವಶಂಕರಪ್ಪ ಅವರು ಕುಟುಂಬ ಸಮೇತ ಮಂತ್ರಾಲಯಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನಕಲಿ ಔಷಧ ಮಾರಾಟ ಜಾಲ ಪತ್ತೆಗೆ ಇದೀಗ ಎಸ್ಐಟಿ ಬಲೆ
ಶೀಘ್ರ ಗೃಹಲಕ್ಷ್ಮಿಯರ ಮನೆ-ಮನೆ ಸಮೀಕ್ಷೆ