;Resize=(412,232))
ಬೆಂಗಳೂರು : ಭಾರಿ ಸಂಚಲನ ಸೃಷ್ಟಿಸಿರುವ ನಕಲಿ ಔಷಧಿ ಮಾರಾಟ ಜಾಲ ಪತ್ತೆ ಪ್ರಕರಣದ ತನಿಖೆಗೆ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಪಶ್ಚಿಮ) ಸಿ.ವಂಶಿಕೃಷ್ಣ ಸಾರಥ್ಯದಲ್ಲಿ ‘ವಿಶೇಷ ತನಿಖಾ ತಂಡ (ಎಸ್‌ಐಟಿ)’ವನ್ನು ರಚಿಸಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ.
ನಾಡಿಗೆ ವಿಷವುಣ್ಣಿಸುತ್ತಿದ್ದ ನಕಲಿ ಔಷಧ ದಂಧೆಕೋರರ ವಿರುದ್ಧದ ರಚಿಸಲಾದ ಎಸ್ಐಟಿಗೆ ಸಿ.ವಂಶಕೃಷ್ಣ ಅವರು ಮುಖ್ಯಸ್ಥರಾಗಿದ್ದು, ಎಸ್ಪಿ ಶಿವಪ್ರಕಾಶ್ ದೇವರಾಜು, ಸಿಐಡಿ ಎಸ್ಪಿ ಲೋಕೇಶ್.ಬಿ.ಜಗಲಾಸರ್, ಸಹಾಯಕ ಔಷಧ ನಿಯಂತ್ರಕರಾದ ಮಂಜುನಾಥ್ ರೆಡ್ಡಿ, ನಮ್ರತಾ ಹಲ್ಲೂರು ಹಾಗೂ ಔಷಧ ನಿರೀಕ್ಷಕಿ ನೇಹಾ ಮುರ್ಗಿ ಸದಸ್ಯರಾಗಿದ್ದಾರೆ. ಈ ಎಸ್‌ಐಟಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಮೇಲುಸ್ತುವಾರಿ ವಹಿಸಲಿದ್ದಾರೆ.
ಮೂರು ದಿನಗಳ ಹಿಂದೆ ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಸಮೀಪ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಔಷಧಗಳಿಗೆ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿದ್ದ ಘಟಕದ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಆ ಜಿಲ್ಲೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ದಾಳಿ ವೇಳೆ 4.91 ಕೋಟಿ ರು ಮೌಲ್ಯದ ನಕಲಿ ಔಷಧಿಗಳು ಜಪ್ತಿಯಾಗಿತ್ತು. ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಕಲಿ ಔಷಧಿ ಮಾರಾಟ ಜಾಲ ಪತ್ತೆ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು, ಆ ಜಾಲವನ್ನು ಬುಡ ಸಹಿತ ಜಾಲಾಡಲು ಎಸ್‌ಐಟಿ ರಚನೆಗೆ ತೀರ್ಮಾನಿಸಿತು. ಈ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಚರ್ಚಿಸಿದರು. ಕೊನೆಗೆ ನಕಲಿ ಔಷಧ ದಂಧೆಕೋರರ ವಿರುದ್ಧ ತನಿಖೆಗೆ ಜಂಟಿ ಆಯುಕ್ತ ವಂಶಿಕೃಷ್ಣ ಸಾರಥ್ಯದಲ್ಲಿ ಎಸ್‌ಐಟಿ ರಚಿಸಿ ಒಳಾಡಳಿತ ಇಲಾಖೆಯ (ಆಡಳಿತ) ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಗುರುವಾರ ಆದೇಶಿಸಿದ್ದಾರೆ.
ಎಸ್‌ಐಟಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ಕಚೇರಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ಈ ಎಸ್‌ಐಟಿಗೆ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ)ರು ಮೇಲುಸ್ತುವಾರಿಗಳಾಗಿರುತ್ತಾರೆ ಎಂದು ಆದೇಶದಲ್ಲಿ ಹೇಳಿದ್ದಾರೆ.
ನಕಲಿ ಔಷಧ ತಯಾರಿಕೆ ಗಂಭೀರ ವಿಷಯ. ಇದು ಯಾವ್ಯಾವ ರಾಜ್ಯಗಳಲ್ಲಿ ಸಕ್ರಿಯವಾಗಿದೆ ಎಂಬ ಬಗ್ಗೆ ತನಿಖೆ ನಡೆಸಲು ಕೇಂದ್ರ ಆರೋಗ್ಯ ಸಚಿವರು, ವಿವಿಧ ಸಿಎಂಗಳಿಗೆ ಪತ್ರ ಬರೆದಿದ್ದೇನೆ.
- ಯು.ಟಿ. ಖಾದರ್, ಆರೋಗ್ಯ ಸಚಿವ