ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳ : ಸಂಪುಟ ಸಭೆ ಮಹತ್ವದ ತೀರ್ಮಾನ

Published : May 10, 2025, 08:36 AM IST
stethoscope

ಸಾರಾಂಶ

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಸೂಪರ್‌ ಸ್ಪೆಷಾಲಿಟಿ ವೈದ್ಯರ ವಯೋನಿವೃತ್ತಿ ವಯಸ್ಸು 60ರಿಂದ 65 ವರ್ಷಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆ ಮಹತ್ವ ತೀರ್ಮಾನ ಕೈಗೊಂಡಿದೆ.

ಬೆಂಗಳೂರು : ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಸೂಪರ್‌ ಸ್ಪೆಷಾಲಿಟಿ ವೈದ್ಯರ ವಯೋನಿವೃತ್ತಿ ವಯಸ್ಸು 60ರಿಂದ 65 ವರ್ಷಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆ ಮಹತ್ವ ತೀರ್ಮಾನ ಕೈಗೊಂಡಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ಸೂಪರ್‌ ಸ್ಪೆಷಾಲಿಟಿ ವೈದ್ಯರ ಕೊರತೆ ಇರುವ ಕಾರಣ ಅವರ ವಯೋನಿವೃತ್ತಿ ವಯಸ್ಸನ್ನು 60 ರಿಂದ 65 ವರ್ಷಕ್ಕೆ ಹೆಚ್ಚಳ ಮಾಡಲು ನಿರ್ಣಯಿಸಲಾಗಿದೆ. ರಾಜ್ಯದಲ್ಲಿ ಸೂಪರ್‌ ಸ್ಪೆಷಾಲಿಟಿ ವೈದ್ಯರ ಹುದ್ದೆಯು 500 ಇದ್ದು, ಇದರಲ್ಲಿ 250 ಮಂದಿ ಮಾತ್ರ ಕೆಲಸದಲ್ಲಿದ್ದಾರೆ. ಈ ಪೈಕಿ ಪ್ರಸ್ತುತ 50 ಮಂದಿ ನಿವೃತ್ತಿ ಅಂಚಿನಲ್ಲಿದ್ದಾರೆ. ಅವರ ನಿವೃತ್ತಿ ನಂತರ ಆ ಹುದ್ದೆ ಖಾಲಿ ಇರಲಿದೆ. ಸೂಪರ್‌ ಸ್ಪೆಷಾಲಿಟಿ ವೈದ್ಯರ ಅಗತ್ಯ ಇರುವ ಕಾರಣ ಅವರ ನಿವೃತ್ತಿ ವಯೋಮಿತಿ ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಗ್ರಾಮೀಣ ಸೇವೆ ಕಡ್ಡಾಯ ಸಡಿಲ ಮುಂದಕ್ಕೆ:

ಎಂಬಿಬಿಎಸ್‌ ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ನಿಯಮ ಸಡಿಲಗೊಳಿಸಿ ನಗರ ಪ್ರದೇಶದಲ್ಲಿಯೂ ಸೇವೆ ಸಲ್ಲಿಸಲು ಅನುಕೂಲ ಮಾಡಿಕೊಡುವ ಬಗ್ಗೆ ಚರ್ಚೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಕುರಿತ ತೀರ್ಮಾನವನ್ನು ಮುಂದಕ್ಕೆ ಹಾಕಲಾಗಿದೆ. ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಈ ಬಗ್ಗೆ ಚರ್ಚೆ ಮಾಡಿ ಸಂಪುಟ ಸಭೆಗೆ ತರುವ ಬಗ್ಗೆ ತಿಳಿಸಲಾಗಿದೆ ಎಂದು ತಿಳಿಸಿದರು.

ಅಂದಾಜು ಪ್ರತಿವರ್ಷ ಏಳು ಸಾವಿರದಷ್ಟು ಎಂಬಿಬಿಎಸ್‌ ವೈದ್ಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ಹೊರ ಬರುತ್ತಿದ್ದಾರೆ. ಆದರೆ, ಗ್ರಾಮೀಣ ಭಾಗದಲ್ಲಿ 1500ಕ್ಕೂ ಹೆಚ್ಚು ಹುದ್ದೆಗಳಲ್ಲಿ ಮಾತ್ರ ಸೇವೆ ಸಲ್ಲಿಸಲು ಅವಕಾಶ ಇರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಸೇವೆ ಕಡ್ಡಾಯವನ್ನು ಸಡಿಲಗೊಳಿಸಿ ನಗರ ಪ್ರದೇಶಕ್ಕೂ ಅವಕಾಶ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಬೇಕಿತ್ತು. ಆದರೆ, ಇನ್ನಷ್ಟು ಚರ್ಚೆಯ ಅಗತ್ಯ ಇರುವ ಕಾರಣ ಇದು ಅಪೂರ್ಣಗೊಂಡಿದೆ ಎಂದು ತಿಳಿಸಿದೆ.

ಇದೇ ವೇಳೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಹೊಸ ಆಸ್ಪತ್ರೆಗಳಿಗೆ ಅವಶ್ಯ ಇರುವ ವೈದ್ಯಕೀಯ ಯಂತ್ರೋಪಕರಣಗಳು ಮತ್ತು ಪೀಠೋಪಕರಣಗಳನ್ನು 26.89 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದರು.

ಸೇವೆಯಿಂದ ವಜಾ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ಜಿ.ಎಸ್‌.ಬಾಲಕೃಷ್ಣ ಎಂಬುವವರನ್ನು ದುರ್ನಡತೆ ಆರೋಪದ ಮೇರೆಗೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದ್ದಾರೆ.

ಕಲ್ಪನಾ ಎಂಬುವರಿಗೆ ಜನಿಸಿದ ಹೆಣ್ಣು ಮಗುವನ್ನು 50 ಸಾವಿರ ರು.ಗೆ ಪ್ರೇಮಲತಾ ಎಂಬುವರಿಗೆ ಮಾರಾಟ ಮಾಡಿದ್ದರು. ಅಲ್ಲದೆ, ಪ್ರೇಮಲತಾ ಎಂಬುವರಿಗೆ ಹೆರಿಗೆಯಾದಂತೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಲಾಗಿತ್ತು. ಈ ಆರೋಪ ಕುರಿತು ಇಲಾಖೆ ವಿಚಾರಣೆ ವೇಳೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ವಜಾಗೊಳಿಸಲು ನಿರ್ಣಯಿಸಲಾಗಿದೆ ಎಂದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭೂಪರಿವರ್ತನೆ ಇನ್ನು ಅತಿ ಸರಳ