ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ

ಸಾರಾಂಶ

ಬಿಸಿಲ ಬೇಗೆಯಿಂದ ಬೇಯುತ್ತಿದ್ದ ಬೆಂಗಳೂರಿಗೆ ಬುಧವಾರ ಮಳೆರಾಯ ಕೃಪೆ ತೋರಿದ್ದು, ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚುಕಾಲ ಗಾಳಿ ಸಹಿತ ಮಳೆ ಸುರಿದಿದೆ.

 ಬೆಂಗಳೂರು : ಬಿಸಿಲ ಬೇಗೆಯಿಂದ ಬೇಯುತ್ತಿದ್ದ ಬೆಂಗಳೂರಿಗೆ ಬುಧವಾರ ಮಳೆರಾಯ ಕೃಪೆ ತೋರಿದ್ದು, ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚುಕಾಲ ಗಾಳಿ ಸಹಿತ ಮಳೆ ಸುರಿದಿದೆ. ಮುಂದಿನ ಐದಾರು ದಿನಗಳವರೆಗೆ ನಗರದಲ್ಲಿ ಇದೇ ರೀತಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಕೆಲದಿನಗಳಿಂದ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗುತ್ತಿದ್ದರೂ, ಮಳೆ ಸುರಿಯುತ್ತಿರಲಿಲ್ಲ. ಬುಧವಾರವೂ ನಗರದಲ್ಲಿ ಮಧ್ಯಾಹ್ನ ಒಂದು ಗಂಟೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತಾದರೂ, ಮಳೆಯ ನಿರೀಕ್ಷೆಯಿರಲಿಲ್ಲ. ಆದರೆ, ಮಧ್ಯಾಹ್ನ 3 ಗಂಟೆಗೆ ಅರ್ಧ ಗಂಟೆಗಿಂತ ಹೆಚ್ಚು ಕಾಲ ಸಾಧಾರಣ ಮಳೆಯಾಯಿತು. ಮಳೆಯೊಂದಿಗೆ ಗಾಳಿ ಬೀಸಿದ ಕಾರಣ ಮಳೆಯ ತೀವ್ರತೆ ಹೆಚ್ಚಿತ್ತು. ರಾತ್ರಿ 9.30 ರಿಂದ ಮುಂದುವರಿಯಿತು.

ಮಳೆಯಿಂದಾಗಿ ವಾಹನ ಸವಾರರು ಪರದಾಡಿದರು. ಮಳೆಯಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಅಂಗಡಿ ಮುಂಗಟ್ಟುಗಳು, ಬಸ್‌ ಶೆಲ್ಟರ್‌ಗಳ ನೆರವು ಪಡೆದರು. ಮಳೆ ನಿಂತ ನಂತರವೂ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದ ಪರಿಣಾಮ ರಸ್ತೆಗಳ ಮೇಲೆ ನೀರು ಹರಿದು ವಾಹನ ಚಲಾಯಿಸಲು ಪರದಾಡಿದರು.ಅದರಲ್ಲೂ ಮೈಸೂರು ರಸ್ತೆ, ಕಾವೇರಿ ಜಂಕ್ಷನ್‌, ಅನಿಲ್‌ ಕುಂಬ್ಳೆ ವೃತ್ತ ಸೇರಿದಂತೆ ಇನ್ನಿತರ ಕಡೆಗಳಲ್ಲಿ ರಸ್ತೆ ಮೇಲೆ ನೀರು ನಿಂತು ವಾಹನ ಚಾಲನೆಗೆ ಸಮಸ್ಯೆ ಉಂಟಾಗಿತ್ತು. ಕೆಲವೆಡೆ ಸಂಚಾರ ದಟ್ಟಣೆ ಉಂಟಾಯಿತು. ಬೆಂಗಳೂರಿನಲ್ಲಿ ಸರಾಸರಿ 4.3 ಮಿಲಿಮೀಟರ್‌ ಮಳೆಯಾಗಿದೆ.

Share this article