ಬೇಸಿಗೆಗೆ 16 ಕಡೆ ಕಾವೇರಿ ಕನೆಕ್ಟ್‌ - 110 ಹಳ್ಳಿಗಳ ವ್ಯಾಪ್ತಿಯಲ್ಲಿ ನೀರಿನ ಕೊರತೆ ನೀಗಿಸಲು ಆದ್ಯತೆ

ಸಾರಾಂಶ

ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುವವರಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಬೆಂಗಳೂರು ಜಲಮಂಡಳಿ 16 ‘ಕಾವೇರಿ ಕನೆಕ್ಟ್‌ ಸೆಂಟರ್‌’ ಆರಂಭಿಸಲು ತೀರ್ಮಾನಿಸಿದೆ.

 ಬೆಂಗಳೂರು : ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುವವರಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಬೆಂಗಳೂರು ಜಲಮಂಡಳಿ 16 ‘ಕಾವೇರಿ ಕನೆಕ್ಟ್‌ ಸೆಂಟರ್‌’ ಆರಂಭಿಸಲು ತೀರ್ಮಾನಿಸಿದೆ.

ಹೊಸದಾಗಿ ಕಾವೇರಿ ನೀರು ಪೂರೈಕೆ ಆರಂಭಿಸಲಾದ 110 ಹಳ್ಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಕಾವೇರಿ ಕನೆಕ್ಟ್‌ ಸೆಂಟರ್‌ ತೆರೆಯಲು ಸೂಚಿಸಲಾಗಿದ್ದು, ಬೆಂಗಳೂರು ಜಲಮಂಡಳಿಯ ಅಧಿಕಾರಿಗಳು ಸ್ಥಳ ಹುಡುಕಾಟ ಆರಂಭಿಸಿದ್ದಾರೆ.

ಈ ಸೆಂಟರ್‌ನಿಂದ ಅಗತ್ಯ ಇರುವ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಟ್ಯಾಂಕರ್‌ ಮೂಲಕ ಕಾವೇರಿ ನೀರು ಪೂರೈಕೆ ಮಾಡುವುದು ಜಲಮಂಡಳಿಯ ಉದ್ದೇಶವಾಗಿದೆ. ಈವರೆಗೆ ಬೆಂಗಳೂರು ಜಲಮಂಡಳಿ ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ಕಾವೇರಿ ನೀರು ನೀಡುತ್ತಿರಲಿಲ್ಲ. ಇದೀಗ ಮಂಡಳಿಗೆ ಹೆಚ್ಚುವರಿ ನೀರಿನ ಲಭ್ಯತೆ ಇರುವುದರಿಂದ ಆ ನೀರನ್ನು ಬಳಸಿಕೊಳ್ಳಲು ಖಾಸಗಿ ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳಿಗೂ ನೀರು ನೀಡಲು ತೀರ್ಮಾನಿಸಿದೆ.

ಕಾವೇರಿ ನೀರಿನ ಅಗತ್ಯವಿರುವವರು ಖಾಸಗಿ ಟ್ಯಾಂಕರ್ ಬಾಡಿಗೆ ಪಡೆದು ಕಾವೇರಿ ಕನೆಕ್ಟ್‌ ಸೆಂಟರ್‌ಗೆ ಬಂದು ಜಲಮಂಡಳಿ ನಿಗದಿ ಪಡಿಸಿದ ದರ ಪಾವತಿಸಿ ನೀರು ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರೇ ಟ್ಯಾಂಕರ್‌ ಹುಡುಕಿಕೊಂಡು ಬಾಡಿಗೆ ಮೊತ್ತವನ್ನು ಅವರೇ ಪಾವತಿ ಮಾಡಬೇಕು. ಇದಲ್ಲದೇ ಜಲಮಂಡಳಿಯು ನೀರಿನ ಕೊರತೆ ಇರುವ ಕಡೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ಯಾಂಕರ್‌ಗೆ ಆರ್‌ಎಫ್‌ಐಡಿ

ಕಾವೇರಿ ಕನೆಕ್ಟ್‌ ಸೆಂಟರ್‌ಗೆ ಎಷ್ಟು ಟ್ಯಾಂಕರ್‌ ಆಗಮಿಸಿ ಎಷ್ಟು ನೀರು ತುಂಬಿಕೊಂಡು ಹೋಗಿವೆ ಎಂಬ ಬಗ್ಗೆ ಪಾರದರ್ಶಕತೆ ಕಾಪಾಡಲು ಜಲಮಂಡಳಿಯ ಎಲ್ಲ ಟ್ಯಾಂಕರ್‌ಗೆ ಆರ್‌ಎಫ್‌ಐಡಿ ಟ್ಯಾಗ್‌ ಆಳವಡಿಕೆ ತೀರ್ಮಾನಿಸಲಾಗಿದೆ. ಆನ್‌ಲೈನ್‌ ಮೂಲಕ ಹಣ ಪಾವತಿ ವ್ಯವಸ್ಥೆಯನ್ನೂ ಜಾರಿಗೊಳಿಸುವುದಕ್ಕೆ ಚಿಂತನೆ ನಡೆಸಲಾಗಿದೆ.

Share this article