ಕೇಂದ್ರ ತಂಡದಿಂದ ಬರ ಅಧ್ಯಯನ ಶುರು

Published : Oct 04, 2026, 04:57 AM IST
Drought

ಸಾರಾಂಶ

ರಾಜ್ಯದಲ್ಲಿ ಮಳೆ ಕೊರತೆ ಮತ್ತು ಬರದ ನೈಜ ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರ ಅಂತರ್‌ ಸಚಿವಾಲಯದ ತಂಡ ಶನಿವಾರ ರಾಜ್ಯಕ್ಕೆ ಆಗಮಿಸಿದೆ

ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆ ಮತ್ತು ಬರದ ನೈಜ ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರ ಅಂತರ್‌ ಸಚಿವಾಲಯದ ತಂಡ ಶನಿವಾರ ರಾಜ್ಯಕ್ಕೆ ಆಗಮಿಸಿದ್ದು, ಮಂಡ್ಯ, ತುಮಕೂರು ಹಾಗೂ ಹಾಸನ ರೈತರ ಕಷ್ಟಗಳನ್ನು ಆಲಿಸಿದೆ. ಈ 3 ಜಿಲ್ಲೆ ಸೇರಿ ಅ.6ರವರೆಗೆ ರಾಜ್ಯದ 12 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಲಿದೆ.

ಶನಿವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಕೇಂದ್ರ ತಂಡದ ಅಧಿಕಾರಿಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬರ ಹಾಗೂ ಬೆಳೆ ಹಾನಿ ಕುರಿತು ಮಾಹಿತಿ ಪಡೆದರು. ಬಳಿಕ, 3 ತಂಡಗಳಾಗಿ ಬರ ಅಧ್ಯಯನ ಪ್ರವಾಸ ಆರಂಭಿಸಿದರು.

ಯಾವ ತಂಡ ಎಲ್ಲಿ?:

ಕೇಂದ್ರ ಬರ ಸಮಿತಿ ಸದಸ್ಯ ಡಾ.ನವೀನ್ ಕುಮಾರ ಜೈನ್ ನೇತೃತ್ವದ ತಂಡ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ಗೆ ಭೇಟಿ ನೀಡಿ, ವಾಸ್ತವ ಸ್ಥಿತಿ ಪರಿಶೀಲಿಸಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಜಲಸಂಗ್ರಹ ಕುರಿತು ಮಾಹಿತಿ ಪಡೆದುಕೊಂಡಿತು. ನಂತರ, ಮಂಡ್ಯ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಸ್ವಾಮಿ ಜೊತೆಗೂಡಿ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ, ಪಾಲಹಳ್ಳಿ, ಮದ್ದೂರು ತಾಲೂಕಿನ ಹೆಮ್ಮನಹಳ್ಳಿ, ಯರಗನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಬೆಳೆ ಹಾನಿಯ ಪರಿಶೀಲನೆ ನಡೆಸಿತು.

ಇದೇ ವೇಳೆ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್‌ ಕುಮಾರ್ ಸಾಹು ನೇತೃತ್ವದ ತಂಡ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿಗೆ ಭೇಟಿ ನೀಡಿತು. ತಾಲೂಕಿನ ಕಂಬದಹಳ್ಳಿ, ಟಿ.ಗೊಲ್ಲಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಬೆಳೆಹಾನಿಯ ಪರಿಶೀಲನೆ ನಡೆಸಿತು. ಜೊತೆಗೆ, ವಿಬಿ-ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿತು.

ಇನ್ನೊಂದೆಡೆ, ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕಾ ಇಲಾಖೆಯ ಉಪ ಆಯುಕ್ತ ಸುಧಂ ಭಾಗ್‌ ನೇತೃತ್ವದ ತಂಡ ಹಾಸನ ತಾಲೂಕಿನ ದುದ್ದ, ಕಿಟ್ಟಿನಕೆರೆ, ಗೌರಿಪುರ, ಚಿಕ್ಕಕದಲೂರು ಗ್ರಾಮಗಳಿಗೆ ತೆರಳಿ, ಹಾನಿಗೊಳಗಾದ ಜೋಳದ ಬೆಳೆಯ ಪರಿಶೀಲನೆ ನಡೆಸಿತು. ಈ ವೇಳೆ, ಹಾನಿಗೊಳಗಾಗಿರುವ, ಹುಳು ತಿಂದಿರುವ ಜೋಳವನ್ನು ಅಧಿಕಾರಿಗಳಿಗೆ ತೋರಿಸಿದ ರೈತರು, ಪರಿಹಾರ ನೀಡುವಂತೆ ಆಗ್ರಹಿಸಿದರು. ಜಾನುವಾರುಗಳಿಗೆ ಮೇವಿಗೂ ಸಂಕಷ್ಟ ಆಗಿದೆ. ಕುಡಿಯುವ ನೀರಿಗೂ ಮುಂದೆ ತೊಂದರೆಯಾಗುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

- ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ತಂಡದಿಂದ ಬರ ಅಧ್ಯಯನ

- ಬೆಂಗಳೂರಲ್ಲಿ ಸಿಎಂ, ಡಿಸಿಎಂ ಜೊತೆ ಸಭೆ

- ಬಳಿಕ, ಮೂರು ತಂಡಗಳಲ್ಲಿ ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳಿಗೆ ಭೇಟಿ

- ಕೆಆರ್‌ಎಸ್‌ ಗೆ ಕೇಂದ್ರ ಬರ ಸಮಿತಿ ತಂಡ ಭೇಟಿ, ವಾಸ್ತವ ಸ್ಥಿತಿ ಪರಿಶೀಲನೆ

ಮೊದಲ ಹಂತದಲ್ಲಿ 7142 ಕೋಟಿ ರು. ಪರಿಹಾರ ನೀಡಿ: ಡಿಕೆಶಿ

ಬರ ಪರಿಸ್ಥಿತಿ ಅಧ್ಯಯನಕ್ಕೆ ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರದ ಅಂತರ್‌ ಸಚಿವಾಲಯ ತಂಡದೊಂದಿಗೆ ಶನಿವಾರ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮೊದಲ ಹಂತದಲ್ಲಿ 177 ತಾಲೂಕುಗಳ ಬರ ಪರಿಹಾರವಾಗಿ 7142.64 ಕೋಟಿ ರು. ನೀಡುವಂತೆ ಮನವಿ ಮಾಡಿದ್ದಾರೆ. ಜತೆಗೆ ಬರ ಅಧ್ಯಯನ ನಡೆಸಿ ರಾಜ್ಯಕ್ಕೆ ನ್ಯಾಯಸಮ್ಮತ ಪರಿಹಾರ ಕೊಡುವಂತೆ ಹೇಳಿದ್ದಾರೆ.

ಕೇಂದ್ರ ತಂಡ ಪ್ರವಾಸದ 12 ಜಿಲ್ಲೆ ಯಾವುವು?

ಹಾಸನ, ಮಂಡ್ಯ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಮೈಸೂರು, ಚಾಮರಾಜನಗರ, ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಕೊಪ್ಪಳ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಎಚ್ಡಿಕೆ-ಅಶೋಕ್‌ರನ್ನು ದಾಸಯ್ಯನ ತರಹ ಡಂಗೂರ ಸಾರಲು ಬಿಟ್ಟಿದ್ದೀವಿ: ಸಚಿವ ಬಾಲಕೃಷ್ಣ
ಬರ ಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಿ: ಸಚಿವ ಬಾಲಕೃಷ್ಣ