ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ

Published : Feb 02, 2026, 04:21 AM IST
Siddaramaiah

ಸಾರಾಂಶ

‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಏನೇನೂ ಕೊಟ್ಟಿಲ್ಲ, ಚೊಂಬು ಕೊಟ್ಟಿದ್ದಾರೆ ಅಷ್ಟೇ. ಕರ್ನಾಟಕಕ್ಕೆ ಹಾಗೂ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

 ಕಲಬುರಗಿ :  ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಏನೇನೂ ಕೊಟ್ಟಿಲ್ಲ, ಚೊಂಬು ಕೊಟ್ಟಿದ್ದಾರೆ ಅಷ್ಟೇ. ಕರ್ನಾಟಕಕ್ಕೆ ಹಾಗೂ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಟು ಹೈದರಾಬಾದ್, ಬೆಂಗಳೂರು ಟು ಚೆನ್ನೈ ಹೈಸ್ಪೀಡ್ ಟ್ರೈನ್ ಕೊಟ್ಟಿದ್ದಾರೆ. ಇದರಿಂದ ನಮಗಿಂತ ಆಂಧ್ರ, ತಮಿಳುನಾಡಿನವರಿಗೆ ಅನುಕೂಲ ಆಗುತ್ತೆ. ನಾವು ಬೆಂಗಳೂರಿನಿಂದ ಮುಂಬೈ, ಬೆಂಗಳೂರು ಟು ಪುಣೆ, ಬೆಂಗಳೂರು ಟು ಮಂಗಳೂರು ಹೈಸ್ಪೀಡ್ ಟ್ರೈನ್ ಕೇಳಿದ್ವಿ. ಆ ಬಗ್ಗೆ ಏನನ್ನೂ ಹೇಳಿಲ್ಲ’ ಎಂದರು.

ದೂರದೃಷ್ಟಿ ಇಲ್ಲ:

‘ಕೇಂದ್ರ ಸರ್ಕಾರದ ಈ ಬಜೆಟ್ ಬಹಳ ನಿರಾಶಾದಾಯಕ. ದೂರದೃಷ್ಟಿ ಇಲ್ಲದ, ಬರೀ ಹೇಳಿಕೆಗಳಿಂದ ಕೂಡಿದ ಬಜೆಟ್‌. ಬಜೆಟ್ ನಲ್ಲಿ ವಿಕಸಿತ ಭಾರತದ ಬಗ್ಗೆ ಬಹಳ ಮಾತಾಡಿದ್ದಾರೆ. ಇದೆಲ್ಲಾ ಮಾತಿನಲ್ಲಿ ಇದೆಯೇ ಹೊರತು ಕೃತಿಗೆ ಇಳಿಯುವಂತಿಲ್ಲ’ ಎಂದರು.

‘ನಾವು ನಮ್ಮ ರಾಜ್ಯದ ನೀರಾವರಿ ಯೋಜನೆ ಬಗ್ಗೆ ಕೇಳಿದ್ದೆವು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಿ ಎಂದು ಕೋರಿದ್ದೆವು. ನಮ್ಮ ಯಾವ ಮನವಿ, ಕೋರಿಕೆಗೂ ಬಜೆಟ್ ನಲ್ಲಿ ಸ್ಪಂದನೆ ಸಿಕ್ಕಿಲ್ಲ. 23-24ರ ಬಜೆಟ್ ನಲ್ಲಿ ಭದ್ರಾ ಯೋಜನೆಗೆ ಇವರೇ 5,300 ಕೋಟಿ ರು. ಕೊಡ್ತೀವಿ ಅಂತ ಘೋಷಣೆ ಮಾಡಿದ್ದರು, ಅದನ್ನು ಕೊಟ್ಟಿಲ್ಲ’ ಎಂದರು.

ನುಡಿದಂತೆ ನಡೆದಿಲ್ಲ:

‘ನುಡಿದಂತೆ ನಡೆಯಿರಿ ಅಂತಾ ನಾವು ಅವರನ್ನು ಆಗ್ರಹ ಮಾಡಿದ್ವಿ. ಭದ್ರಾ ಯೋಜನೆಗೆ ಅನುದಾನ ಘೋಷಿಸಿ 3 ಬಜೆಟ್ ಆದರೂ ನಯಾಪೈಸೆ ಕೊಟ್ಟಿಲ್ಲ. ಮೇಕೆದಾಟು ಯೋಜನೆಗೆ ತಮಿಳುನಾಡಿನವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಆ ಅರ್ಜಿ ವಜಾ ಆಗಿದೆ. ಆದರೂ, ಮೇಕೆದಾಟು ಯೋಜನೆಗೆ ಕ್ಲಿಯರೆನ್ಸ್‌ ಮಾಡಿ ಕೊಟ್ಟಿಲ್ಲ, ಮೇಕೆದಾಟು ಅಣೆಕಟ್ಟನ್ನು ಕಟ್ಟೋದು ತಮಿಳುನಾಡಿನಲ್ಲಿ ಅಲ್ಲ, ಕರ್ನಾಟಕದಲ್ಲಿ. ಮಳೆಗಾಲ ಸರಿಯಾಗಿ ಆದರೆ 177.25 ಟಿಎಂಸಿ ನೀರು ಕೊಡಬೇಕು ಅಂತ ತೀರ್ಪು ಇದೆ. ಈ ವರ್ಷ ಅದರ ಎರಡರಷ್ಟು ನೀರು ಕೊಟ್ಟಿದ್ದೀವಿ. ಇದರಿಂದ ತಮಿಳುನಾಡಿನವರಿಗೆ ಏನೂ ತೊಂದರೆ ಆಗಲ್ಲ’ ಎಂದರು.

‘ಮಹದಾಯಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯ ಅನುಮತಿ (ಎನ್ವಿರಾನ್‌ಮೆಂಟಲ್‌ ಕ್ಲಿಯರೆನ್ಸ್) ಕೊಡಬೇಕು ಎಂದು ಒತ್ತಾಯ ಮಾಡಿದ್ವಿ. ಇದುವರೆಗೂ ಕೊಟ್ಟಿಲ್ಲ. ಇದರಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕಬ್ಬು, ಬೇಳೆ ಕಾಳುಗಳಿಗೆ ಸಹಾಯಧನ ಘೋಷಿಸುವಂತೆ ಕೇಳಿದ್ವಿ. ಅದನ್ನೂ ಕೊಟ್ಟಿಲ್ಲ. ಕರ್ನಾಟಕಕ್ಕೆ ಹಾಗೂ ದಕ್ಷಿಣ ಭಾರತಕ್ಕೆ ಏನೇನೂ ಕೊಟ್ಟಿಲ್ಲ. ಚೊಂಬು ಕೊಟ್ಟಿದ್ದಾರೆ’ ಎಂದು ಟೀಕಿಸಿದರು.

ರಾಜ್ಯಕ್ಕೆ ದೊಡ್ಡ ಅನ್ಯಾಯ:

‘14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಬಂದಿದ್ದ ಪಾಲು ಶೇ.4.71. ಆದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಇನ್ನೂ ಕಮ್ಮಿ, ಅಂದರೆ, ಶೇ.3.64ರಷ್ಟು ಮಾತ್ರ ಬಂದಿದೆ. ಕನಿಷ್ಠ ಶೇ 4.71ರಷ್ಟಾದರೂ ಕೊಡಿ ಎಂದು ಒತ್ತಾಯ ಮಾಡಿದ್ದೆವು. 14ನೇ ಹಣಕಾಸು ಆಯೋಗಕ್ಕಿಂತ ಜಾಸ್ತಿ ಮಾಡಲು ಕೇಳಿದ್ದೆವು. ಆದರೆ, ಶೇ.4.131ರಷ್ಟು ಮಾತ್ರ ಕೊಡಲಾಗಿದೆ. ಇದು ರಾಜ್ಯಕ್ಕೆ ಮಾಡಿದ ದೊಡ್ಡ ಅನ್ಯಾಯ’ ಎಂದು ಸಿದ್ದು ಹರಿಹಾಯ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ವಿಜಯಪುರ: ಉರ್ದು ಶಾಲೆ ಶೌಚಾಲಯದಲ್ಲಿ ರಾಸಾಯನಿಕ ಸ್ಫೋಟ
ಕೆಆರ್‌ಪುರಂ-ಹೊಸಕೋಟೆಗೆ ಮೆಟ್ರೋ ಕನಸು ಶೀಘ್ರ ನನಸು