ಶೈಕ್ಷಣಿಕ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ನಿವಾರಿಸಲು ಕರ್ನಾಟಕದಲ್ಲಿ ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೆ ತರುವಂತೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಆದಷ್ಟು ಬೇಗ ಜಾರಿಗೆ ತರುತ್ತೇವೆ’ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರು/ನವದೆಹಲಿ : ಶೈಕ್ಷಣಿಕ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ನಿವಾರಿಸಲು ಕರ್ನಾಟಕದಲ್ಲಿ ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೆ ತರುವಂತೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಇದರ ಬೆನ್ನಲ್ಲೇ ‘ಆದಷ್ಟು ಬೇಗ ಈ ಕಾಯ್ದೆ ಜಾರಿಗೆ ತರುತ್ತೇವೆ’ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
ಏ.16ರಂದು ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ‘ಲಕ್ಷಾಂತರ ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯದ ಮಕ್ಕಳು ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇಂದಿಗೂ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬುದು ನಾಚಿಕೆಗೇಡಿನ ವಿಚಾರ. ತಾರಮತ್ಯದಿಂದಾಗಿ ರೋಹಿತ್ ವೇಮುಲ, ಪಾಯಲ್ ತಾಡ್ವಿ ಮತ್ತು ದರ್ಶನ್ ಸೋಲಂಕಿ ಅವರಂಥ ಪ್ರತಿಭಾವಂತರ ಹತ್ಯೆಯನ್ನು ಒಪ್ಪಲು ಸಾಧ್ಯವಿಲ್ಲ. ಇಂಥದ್ದಕ್ಕೆಲ್ಲ ಇದೀಗ ಅಂತ್ಯ ಹಾಡುವ ಕಾಲ ಬಂದಿದೆ. ಇದಕ್ಕಾಗಿ ರೋಹಿಲ್ ವೇಮುಲಾ ಕಾಯ್ದೆ ಜಾರಿಗೆ ತರಬೇಕೆಂದು ನಾನು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಬರೆದಿರುವ ಈ ಪತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ‘ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಅನುಭವಿಸಿದ ತಾರತಮ್ಯದ ಕುರಿತು ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದಾರೆ. ಜತೆಗೆ, ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿರುವ ಜಾತಿ ತಾರತಮ್ಯ ಈಗಾಗಲೇ ಪ್ರತಿಭಾವಂತರನ್ನು ಬಲಿಪಡೆದಿದೆ. ಇಂಥ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ. ಆದಷ್ಟು ಬೇಗ ಜಾರಿ ಮಾಡುತ್ತೇವೆ: ಸಿಎಂ
ರಾಹುಲ್‌ಗಾಂಧಿ ಪೋಸ್ಟ್‌ಗೆ ಎಕ್ಸ್ ಖಾತೆ ಮೂಲಕವೇ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಭಾವನಾತ್ಮಕ ಪತ್ರ ಹಾಗೂ ಸಾಮಾಜಿಕ ನ್ಯಾಯದ ಬಗೆಗಿನ ಅಚಲ ಬದ್ಧತೆಗೆ ಧನ್ಯವಾದ ತಿಳಿಸುತ್ತೇನೆ. ನಮ್ಮ ಸರ್ಕಾರ ಕರ್ನಾಟಕದಲ್ಲಿ ರೋಹಿತ್ ವೇಮುಲ ಕಾನೂನು ಜಾರಿಗೆ ತರುವ ದೃಢ ನಿಲುವು ಹೊಂದಿದೆ. ಯಾವುದೇ ವಿದ್ಯಾರ್ಥಿ ಜಾತಿ, ವರ್ಗ ಹಾಗೂ ಧರ್ಮದ ಆಧಾರದ ಮೇಲೆ ತಾರತಮ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳಲು ಆದಷ್ಟು ಬೇಗ ಈ ಕಾಯ್ದೆ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ದಲಿತ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಅವರು ಜಾತಿ ಆಧಾರಿತ ತಾರತಮ್ಯದ ಹಿನ್ನೆಲೆಯಲ್ಲಿ 2016ರಲ್ಲಿ ಸಾವಿಗೀಡಾಗಿದ್ದ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರಿ ಪ್ರಮಾಣದಲ್ಲಿ ಹೋರಾಟಗಳು ನಡೆದಿದ್ದವು. ಕೆಲ ತಿಂಗಳುಗಳಿಂದ ರಾಜ್ಯದಲ್ಲೂ ಹಲವು ಸಂಘಟನೆಗಳು ವೇಮುಲಾ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ರಾಹುಲ್‌ಗಾಂಧಿ ಪತ್ರಕ್ಕೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಯ್ದೆ ಜಾರಿ ಭರವಸೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಏನಿದು ವೇಮುಲ ಪ್ರಕರಣ?
ರೋಹಿತ್ ವೇಮುಲ ಹೈದರಾಬಾದ್ ವಿವಿ ವಿದ್ಯಾರ್ಥಿಯಾಗಿದ್ದ. ಈ ಅವಧಿಯಲ್ಲೇ ಆತ ವಿವಿ ಕ್ಯಾಂಪಸ್‌ನಲ್ಲಿ ಜಾತಿ ತಾರತಮ್ಯ ವಿರೋಧಿಸಿ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಹೆಸರಲ್ಲಿ ಹಲವು ಪ್ರತಿಭಟನೆ ನಡೆಸಿದ್ದ. ಇದರ ನಡುವೆಯೇ 2015ರಲ್ಲಿ ಈತನಿಗೆ ನೀಡುತ್ತಿದ್ದ ಮಾಸಿಕ 25000 ರು. ಸ್ಟೈಫಂಡ್ ಅನ್ನು ವಿವಿ ಸ್ಥಗಿತಗೊಳಿಸಿತ್ತು. ಬಳಿಕ ವೇಮುಲ ಸೇರಿದಂತೆ 5 ಜನರನ್ನು ಅಮಾನತು ಮಾಡಿತ್ತು. ಈ ಆದೇಶ ಹೊರಬಿದ್ದ ಬೆನ್ನಲ್ಲೇ 2016ರ ಜ.17ರಂದು ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದ. ಇದರ ವಿರುದ್ಧ ದೇಶವ್ಯಾಪಿ ಹೋರಾಟ ನಡೆದಿತ್ತು. ಬಳಿಕ ನಡೆದ ತನಿಖೆ ವೇಳೆ ವೇಮುಲ ದಲಿತ ಸಮುದಾಯಕ್ಕೆ ಸೇರಿಲ್ಲ ಎಂದು ಗುಂಟೂರು ಜಿಲ್ಲಾ ಪರಿಶೀಲನಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಏನಿದು ವೇಮುಲ ಕಾಯ್ದೆ?
ಎಸ್‌ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಶೈಕ್ಷಣಿಕ ಸಂಸ್ಥೆಗಳು ತಾರತಮ್ಯ ಮಾಡಿದರೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸುವ ಅಂಶವನ್ನು ಈ ಕಾಯ್ದೆ ಒಳಗೊಂಡಿರಲಿದೆ. ಎಲ್ಲ ಶೈಕ್ಷಣಿಕ ಸಂಸ್ಥೆಗಳು ಈ ಸಮುದಾಯದ ವಿದ್ಯಾರ್ಥಿಗಳಿಗೆ ನೆರವು ನೀಡುವ ವ್ಯವಸ್ಥೆ ಹೊಂದುವುದು, ವಿವಿಗಳು ವಿದ್ಯಾರ್ಥಿಗಳ ಕುಂದುಕೊರತೆ ಪರಿಹರಿಸುವ ಸ್ವತಂತ್ರ ಸಮಿತಿ ರಚಿಸುವುದು ಕಡ್ಡಾಯವಾಗಲಿದೆ. ಶಿಕ್ಷಣ ಸಂಸ್ಥೆಯಲ್ಲಿ ಜಾತಿ ತಾರತಮ್ಯ ನಡೆದರೆ ಅದಕ್ಕೆ ಸಂಸ್ಥೆಯ ಅಧಿಕಾರಿಗಳೇ ಹೊಣೆ ಆಗಲಿದ್ದಾರೆ