ಸಚಿವರು, ಶಾಸಕರಿಗೆ ಸಿಎಂ ‘ಗೃಹಪ್ರವೇಶ’ ಔತಣ

Published : Nov 20, 2026, 11:22 AM IST
DK Shivakumar

ಸಾರಾಂಶ

ಮುಖ್ಯಮಂತ್ರಿ ಅವರ ನೂತನ ಅಧಿಕೃತ ನಿವಾಸ ‘ಗಂಗಾ’ (ಕುಮಾರಕೃಪಾ ಅತಿಥಿಗೃಹ) ಗೃಹಪ್ರವೇಶದ ಹಿನ್ನೆಲೆಯಲ್ಲಿ ಸಚಿವರು, ಶಾಸಕರು ಸೇರಿದಂತೆ ಎಲ್ಲ ಪಕ್ಷದ ಜನಪ್ರತಿನಿಧಿಗಳು, ಕಾಂಗ್ರೆಸ್‌ ನಾಯಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗುರುವಾರ ಭರ್ಜರಿ ಔತಣ ನೀಡಿದರು.

ಬೆಂಗಳೂರು : ಮುಖ್ಯಮಂತ್ರಿ ಅವರ ನೂತನ ಅಧಿಕೃತ ನಿವಾಸ ‘ಗಂಗಾ’ (ಕುಮಾರಕೃಪಾ ಅತಿಥಿಗೃಹ) ಗೃಹಪ್ರವೇಶದ ಹಿನ್ನೆಲೆಯಲ್ಲಿ ಸಚಿವರು, ಶಾಸಕರು ಸೇರಿದಂತೆ ಎಲ್ಲ ಪಕ್ಷದ ಜನಪ್ರತಿನಿಧಿಗಳು, ಕಾಂಗ್ರೆಸ್‌ ನಾಯಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗುರುವಾರ ಭರ್ಜರಿ ಔತಣ ನೀಡಿದರು.

ಡಿಕೆಶಿ ಅವರು ಕುಮಾರಕೃಪಾ ಅತಿಥಿ ಗೃಹದ ಒಂದು ಭಾಗವನ್ನು ತಮ್ಮ ಅಧಿಕೃತ ನಿವಾಸವನ್ನಾಗಿ ಪರಿವರ್ತಿಸಿಕೊಂಡು, ಅದಕ್ಕೆ ಗಂಗಾ ಎಂದು ಹೆಸರಿಟ್ಟಿದ್ದಾರೆ. ಕಾರ್ತಿಕ ಮಾಸದ ಮೊದಲ ಸೋಮವಾರದಂದು ಕುಟುಂಬ ಸಮೇತರಾಗಿ ಗಂಗಾ ನಿವಾಸಕ್ಕೆ ಗೃಹ ಪ್ರವೇಶ ನಡೆಸಿದರು. ಈ ಸಂತಸವನ್ನು ಎಲ್ಲ ಪಕ್ಷದ ನಾಯಕರೊಂದಿಗೆ ಹಂಚಿಕೊಳ್ಳುವ ಉದ್ದೇಶದೊಂದಿಗೆ ಗುರುವಾರ ಗೃಹಪ್ರವೇಶದ ಔತಣ ಕೂಟ ಏರ್ಪಡಿಸಿದ್ದರು. ಪಕ್ಷಾತೀತವಾಗಿ ಶಾಸಕರು, ಸಂಸದರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚಿನ ಜನರು ಔತಣ ಕೂಟದಲ್ಲಿ ಪಾಲ್ಗೊಂಡು ವಿಶೇಷ ಭೋಜನವನ್ನು ಸವಿದರು.

ಔತಣಕೂಟದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌, ಸಚಿವರಾದ ಸತೀಶ್‌ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಯು.ಟಿ. ಖಾದರ್‌, ಶಿವರಾಜ ತಂಗಡಗಿ, ಕೃಷ್ಣ ಬೈರೇಗೌಡ, ಸಂತೋಷ್‌ ಲಾಡ್‌, ರಘುಮೂರ್ತಿ, ಶಿವಲಿಂಗೇಗೌಡ, ಬೈರತಿ ಸುರೇಶ್‌ ಸೇರಿದಂತೆ ಬಹುತೇಕ ಎಲ್ಲ ಸಚಿವರು ಪಾಲ್ಗೊಂಡಿದ್ದರು. ಅವರೊಂದಿಗೆ ಬಿಜೆಪಿ ಶಾಸಕರಾದ ಎಸ್‌.ಆರ್‌. ವಿಶ್ವನಾಥ್‌, ಗೋಪಾಲಯ್ಯ, ರವಿಸುಬ್ರಹ್ಮಣ್ಯ, ಎಂ. ಕೃಷ್ಣಪ್ಪ, ಜನಾರ್ದನ ರೆಡ್ಡಿ, ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌, ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಸೇರಿ ಹಲವರು ಭಾಗಿಯಾಗಿ ಮುಖ್ಯಮಂತ್ರಿ ಅವರಿಗೆ ಶುಭ ಕೋರಿದರು.

ಔತಣಕೂಟದಲ್ಲಿ ಪಾಲ್ಗೊಂಡವರಿಗೆ ಬಾಳೆ ಎಲೆ ಊಟದ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ಎಲ್ಲ ಭಾಗದ ಆಹಾರ ಖಾದ್ಯಗಳನ್ನು ಉಣಬಡಿಸಲಾಯಿತು. ಮುದ್ದೆ, ರೊಟ್ಟಿ ಸೇರಿದಂತೆ ಇನ್ನಿತರ ಸಸ್ಯಹಾರಿ ಖಾದ್ಯಗಳನ್ನು ಬಡಿಸಲಾಯಿತು.

ಸಿದ್ದರಾಮಯ್ಯ ಗೈರು:

ಚಿಕ್ಕಮಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾದ ಕಾರಣದಿಂದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್‌ ಅವರ ಔತಣ ಕೂಟಕ್ಕೆ ಗೈರಾಗಿದ್ದರು. ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಸೇರಿ ಇನ್ನಿತರ ನಾಯಕರು ಔತಣಕೂಟಕ್ಕೆ ಹಾಜರಾಗಲಿಲ್ಲ.

ಹೆಸರು ಬದಲಾಯಿಸಿದ್ದಕ್ಕೆ ವಾಟಾಳ್‌ ಪ್ರತಿಭಟನೆ

ನೂರು ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿರುವ ಕುಮಾರಕೃಪಾ ಅತಿಥಿ ಗೃಹವನ್ನು ಮುಖ್ಯಮಂತ್ರಿ ಅವರ ಗಂಗಾ ನಿವಾಸವಾಗಿ ಪರಿವರ್ತಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಔತಣ ಕೂಟ ಏರ್ಪಡಿಸಿದ್ದ ಸಂದರ್ಭದಲ್ಲಿಯೇ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕುಮಾರಕೃಪಾ ಅತಿಥಿ ಗೃಹ ಹೊರಭಾಗದಲ್ಲಿ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಿದರು.

ಕುಮಾರಕೃಪಾ ಅತಿಥಿ ಗೃಹದ ಹೆಸರನ್ನು ಬದಲಿಸಿರುವುದು ಹಾಗೂ ಐತಿಹಾಸಿಕ ಕಟ್ಟಡದ ಕಲ್ಲುಗಳನ್ನು ಬದಲಾಯಿಸಿ ನವೀಕರಣ ಮಾಡಿರುವುದು ಖಂಡನೀಯ. ಮಾಹಾತ್ಮ ಗಾಂಧಿ, ಬೌದ್ಧ ಧರ್ಮ ಗುರು ದಲೈಲಾಮಾ ಸೇರಿದಂತೆ ಅನೇಕ ಮಹನೀಯರು ಇಲ್ಲಿಗೆ ಭೇಟಿ ನೀಡಿದ್ದಾರೆ. ಈವರೆಗೆ ಯಾವುದೇ ನವೀಕರಣವೂ ನಡೆದಿರಲಿಲ್ಲ. ಇದೀಗ ಮುಖ್ಯಮಂತ್ರಿ ಅವರು ನವೀಕರಿಸಿ ಗಂಗಾ ಎಂದು ಹೆಸರು ಬದಲಿಸಿರುವುದು ಸರಿಯಲ್ಲ. ಐತಿಹಾಸಿಕ ಕುಮಾರಕೃಪಾ ಅತಿಥಿ ಗೃಹವನ್ನು ಉಳಿಸಿಕೊಳ್ಳಲು ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಈ ವಿಚಾರವಾಗಿ ಕರ್ನಾಟಕ ಬಂದ್‌ಗೂ ಕರೆ ಕೊಡುವುದಾಗಿ ಎಚ್ಚರಿಕೆ ನೀಡಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬಸವಮಂಟಪ’ ವಿರುದ್ಧ ಭುಗಿಲೆದ್ದ ಆಕ್ರೋಶ
ಪ್ರತಿ ತಿಂಗಳೂ ಬಿಸಿಯೂಟ, ಅನ್ನಭಾಗ್ಯ ಗುಣಮಟ್ಟ ಟೆಸ್ಟ್‌