ರಾಜ್ಯ ಕ್ರೀಡಾ ಪ್ರಾಧಿಕಾರ ಅಧಿಕಾರಿಗಳಿಗೆ ಸಿಎಂ ತರಾಟೆ

ಸಾರಾಂಶ

  ಕ್ರೀಡಾ ಸಮಿತಿಯನ್ನು ಕ್ರೀಡಾ ಪ್ರಾಧಿಕಾರವನ್ನಾಗಿ ಮಾಡಿದರೂ ಯಾವುದೇ ಪ್ರಗತಿ ಕಾಣದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರು : ರಾಜ್ಯ ಕ್ರೀಡಾ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕ್ರೀಡಾ ಸಮಿತಿಯನ್ನು ಕ್ರೀಡಾ ಪ್ರಾಧಿಕಾರವನ್ನಾಗಿ ಮಾಡಿದರೂ ಯಾವುದೇ ಪ್ರಗತಿ ಕಾಣದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶೀಲನಾ ಸಭೆ ನಡೆಸಿದ ಅವರು, ಪ್ರಾಧಿಕಾರ ಮಾಡಿದ ಉದ್ದೇಶವೇ ಈಡೇರದಿದ್ದರೆ ಅದನ್ನು ಮಾಡಿ ಪ್ರಯೋಜನವಾದರೂ ಏನು? ನಿಗದಿತವಾಗಿ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು. ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಕಾರ್ಯ ಚಟುವಟಿಕೆಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಅದಕ್ಕಿಂತ ಉತ್ತಮ ರೀತಿಯಲ್ಲಿ ಮಿತಿಯೊಳಗೆ ಕ್ರೀಡಾ ಕಾರ್ಯ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಕ್ರಮ ವಹಿಸಬೇಕು. ಮುಂದಿನ 5-6 ತಿಂಗಳಲ್ಲಿ ದಸರಾ ಆರಂಭವಾಗಲಿದ್ದು, ದಸರಾ ಕ್ರೀಡಾಕೂಟದ ವೇಳೆ ಪ್ರಾಧಿಕಾರ ಕ್ರಿಯಾಶೀಲವಾಗಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ವೇಳೆ ತರಬೇತುದಾರರ ನೇಮಕಾತಿಯಾಗದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದರೂ ಅಗತ್ಯ ತರಬೇತುದಾರರ ನೇಮಕಾತಿಯಾಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

176 ತರಬೇತುದಾರರ ನೇಮಕಾತಿಗೆ ಸೂಚನೆ ನೀಡಿ ಒಂದು ವರ್ಷವಾಗಿದೆ. ಆದರೂ ನೇಮಕಾತಿ ಪ್ರಕ್ರಿಯೆ ಚುರುಕುಗೊಂಡಿಲ್ಲ. ಇದಕ್ಕೆ ಕಾರಣವೇನು ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಅಲ್ಲದೆ, ಪ್ರತಿ ಜಿಲ್ಲೆಯಲ್ಲೂ ಉಪ ನಿರ್ದೇಶಕರು ಕಡ್ಡಾಯವಾಗಿ ಇರಬೇಕು. ಪ್ರತೀ ವರ್ಷ ಪ್ರಾಧಿಕಾರದ ಸಭೆ, ಆಡಿಟ್ ಆಗಬೇಕು. ನೇಮಕಾತಿಯೂ ಸಹ ಜರುಗಬೇಕು. ಇದು ನಡೆಯದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸಲು ಅನುದಾನ ನಿಗದಿಪಡಿಸಲು ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸುವ ಮೊದಲು ಕನಿಷ್ಠ 15 ರಾಷ್ಟ್ರಗಳ ಪಾಲ್ಗೊಳ್ಳುವಿಕೆ ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಸರಿಯಾದ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ಪ್ರಾಮಾಣಿಕರಿಗೆ ಪ್ರೋತ್ಸಾಹ ನೀಡಿ:

ಕೇವಲ ಲೆಟರ್‌ಹೆಡ್‌ಗಳಲ್ಲಿ ''ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟ'' ಎಂದು ಬರೆಯುವ ಸಂಸ್ಥೆಗಳಿಗೆ ಕಡಿವಾಣ ಹಾಕಿ ಪ್ರಾಮಾಣಿಕವಾಗಿ ಕ್ರೀಡಾಕೂಟ ನಡೆಸುವವರಿಗೆ ಪ್ರೋತ್ಸಾಹ ನೀಡಬೇಕು. ಕಂಠೀರವ ಕ್ರೀಡಾಂಗಣ ಹವಾನಿಯಂತ್ರಿತ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೊಳಿಸಬೇಕು. ಕಂಠೀರವ ಕ್ರೀಡಾಂಗಣದ ಜಿಮ್, ಶೌಚಾಲಯ, ಟ್ರ್ಯಾಕ್‌ಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಕ್ರೀಡಾಪಟುಗಳಿಗೆ ಅಗತ್ಯವಾದಷ್ಟು ಪೌಷ್ಟಿಕಾಂಶ ಆಹಾರ ಒದಗಿಸಬೇಕು. ಪದೇ ಪದೆ ಪರಿಶೀಲನೆ ನಡೆಸಿ, ಲೋಪದೋಷ ಕಂಡುಬಂದಲ್ಲಿ ವಾರ್ಡನ್‌ಗಳ ವಿರುದ್ಧ ಕ್ರಮ ಕೈಗೊಂಡು ವರದಿ ನೀಡಬೇಕು. ಕ್ರೀಡಾ ಹಾಸ್ಟೆಲ್‌ಗಳಿಗೆ ದಿಢೀರ್‌ ಭೇಟಿ ನೀಡುವ ಜತೆಗೆ ಅಲ್ಲೇ ಊಟ ಮಾಡಿ ಆಹಾರದ ಗುಣಮಟ್ಟ ಪರಿಶೀಲಿಸಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭ ಕಂಬಳವನ್ನು ಗ್ರಾಮೀಣ ಕ್ರೀಡೆ ಎಂದು ಮಾನ್ಯತೆ ನೀಡಿ ಪ್ರೋತ್ಸಾಹ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ, ಕ್ರೀಡಾಕೂಟಗಳಿಗೆ ಅನುದಾನ ನೀಡುವುದು, ಕಂಠೀರವ ಕ್ರೀಡಾಂಗಣ ನಿರ್ಮಾಣವಾಗಿ 29 ವರ್ಷಗಳಾಗಿರುವುದರಿಂದ ಪ್ರೇಕ್ಷಕರ ಸುರಕ್ಷತೆಗೆ ಗ್ಯಾಲರಿಗಳ ಗುಣಮಟ್ಟದ ಪರಿಶೀಲನೆ ನಡೆಸುವ ಕುರಿತು ಸಮಾಲೋಚನೆ ನಡೆಸಲಾಯಿತು.

Share this article