ನಾವು ರಾಜ್ಯದ ಜಾತಿಗಣತಿ ವರದಿ ವಿರೋಧಿಸಿಲ್ಲ : ಜೆಡಿಎಸ್‌

Sujatha NRPublished : May 5, 2025 10:47 AM

ಕೇಂದ್ರ ಸರ್ಕಾರದ ಜಾತಿ ಗಣತಿ ಸ್ವಾಗತಿಸಿರುವ ಜೆಡಿಎಸ್ ಪಕ್ಷ, ರಾಜ್ಯ ಸರ್ಕಾರದ ಜಾತಿ ಗಣತಿಯನ್ನು ವಿರೋಧಿಸಿಲ್ಲ. ಬದಲಿಗೆ ವರದಿ ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ ಮಾತ್ರ ವಿರೋಧಿಸಿದೆ

  ಬೆಂಗಳೂರು : ಕೇಂದ್ರ ಸರ್ಕಾರದ ಜಾತಿ ಗಣತಿ ಸ್ವಾಗತಿಸಿರುವ ಜೆಡಿಎಸ್ ಪಕ್ಷ, ರಾಜ್ಯ ಸರ್ಕಾರದ ಜಾತಿ ಗಣತಿಯನ್ನು ವಿರೋಧಿಸಿಲ್ಲ. ಬದಲಿಗೆ ವರದಿ ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ ಮಾತ್ರ ವಿರೋಧಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷ, ದೇವೇಗೌಡರ ಗರಡಿಯಲ್ಲೇ ಬೆಳೆದು ರಾಜಕೀಯ ಬದುಕು ಕಟ್ಟಿಕೊಂಡ ಸಿದ್ದರಾಮಯ್ಯನವರು ''ಇಬ್ಬಗೆಯ ನೀತಿ'' ಬಗ್ಗೆ ಆಣಿಮುತ್ತು ಉದುರಿಸಿದ್ದಾರೆ. ಈ ಮೂಲಕ ತಮ್ಮ ನಿಜಬಣ್ಣ ಬಹಿರಂಗಗೊಳಿಸಿದ್ದಾರೆ. ಸಿದ್ದರಾಮಯ್ಯನವರದ್ದು ಎರಡು ನಾಲಿಗೆ ಎಂದು ಹೇಳಿದೆ.

ದೇವೇಗೌಡರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರ ಬಗ್ಗೆ ಸಿದ್ದರಾಮಯ್ಯನವರು ಸಹಜ, ಸಕಾರಾತ್ಮಕ ಟೀಕೆ ಮಾಡಲಿ. ಆದರೆ, ಅದೇ ನಿತ್ಯಕೃಷಿ ಎಂಬಂತೆ ನಿರಂತರವಾಗಿ ಮೇರು ನಾಯಕನ ಬಗ್ಗೆಯೇ ವಿಷಕಾರುವುದು ಎಷ್ಟು ಸರಿ? ಜನತಾ ಪರಿವಾರದಲ್ಲಿದ್ದಾಗ ಇಂದಿರಾ ಗಾಂಧಿ ಬಗ್ಗೆ ಸಿದ್ದರಾಮಯ್ಯನವರು ಉದುರಿಸಿದ್ದ ಆಣಿಮುತ್ತುಗಳನ್ನು ಜೀರ್ಣಿಸಿಕೊಳ್ಳಲು ಕಾಂಗ್ರೆಸ್ ನಾಯಕರಿಂದ ಸಾಧ್ಯವಿದೆಯಾ? ಇಂದಿರಾ ಗಾಂಧಿ ನಮ್ಮ ನಡುವೆ ಇಲ್ಲ. ಹೀಗಾಗಿ ಅವರ ಬಗ್ಗೆ ಸಿದ್ದರಾಮಯ್ಯನವರ ಆಣಿಮುತ್ತುಗಳನ್ನು ಉಲ್ಲೇಖಿಸುವುದು ಅಪ್ರಸ್ತುತ ಎಂದಿದೆ.

ಹುದ್ದೆಯ ಶಿಷ್ಟಾಚಾರಕ್ಕಾದರೂ ಮುಖ್ಯಮಂತ್ರಿಯವರು ತಮ್ಮ ಮಾತುಗಳ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಅವರು ಹಿಂದೆ ಉದುರಿಸಿದ್ದ ಆಣಿಮುತ್ತುಗಳನ್ನು ಹೆಕ್ಕಿ ಹೆಕ್ಕಿ ಇಡಲಾಗುವುದು. ನಿಮ್ಮ ಗಣತಿಯ ಸತ್ಯಾಸತ್ಯತೆ ಎಲ್ಲರಂತೆ ನಮಗೂ ಅರ್ಥವಾಗಿದೆ. ನಿಮ್ಮ ಪಕ್ಷದ ಶಾಸಕರು, ಸಚಿವರು ನಿಮ್ಮ ಸರ್ಕಾರದ ಬಾಲ, ಬುಡ ಹಿಡಿದು ಅಲ್ಲಾಡುತ್ತಿದ್ದಾರೆ ಎಂದು ಜೆಡಿಎಸ್‌ ವ್ಯಂಗ್ಯವಾಡಿದೆ.