ನಾಡಿದ್ದು ರಾಯಚೂರಿನಲ್ಲಿ ‘ಕೈ’ ಪ್ರತಿಭಟನಾ ಸಮಾವೇಶ

Sujatha NRPublished : May 5, 2025 10:31 AM

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧದ ಬೃಹತ್ ಪ್ರತಿಭಟನಾ ಸಮಾವೇಶ ಮೇ 7ರಂದು ಬುಧವಾರ ರಾಯಚೂರಲ್ಲಿ ನಡೆಯಲಿದೆ.

 ರಾಯಚೂರು : ಕಲ್ಯಾಣ ಕರ್ನಾಟಕದ ವಿಭಾಗೀಯ ಮಟ್ಟದ ‘ಸಂವಿಧಾನ ಬಚಾವೋ ಅಭಿಯಾನ’ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧದ ಬೃಹತ್ ಪ್ರತಿಭಟನಾ ಸಮಾವೇಶ ಮೇ 7ರಂದು ಬುಧವಾರ ರಾಯಚೂರಲ್ಲಿ ನಡೆಯಲಿದೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಗೋಪಿನಾಥ ಪಾಲನಿಯಪ್ಪನ್, ಈ ಬಗ್ಗೆ ಮಾಹಿತಿ ನೀಡಿದರು. ಬುಧವಾರ ಬೆಳಗ್ಗೆ 11ಕ್ಕೆ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ದೇಶದ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಕೇಂದ್ರದ ಈ ಜನವಿರೋಧಿ ನೀತಿ ಖಂಡಿಸಿ ಸಮಾವೇಶ ಆಯೋಜಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕದ 7 ಜಿಲ್ಲೆ ಒಳಗೊಂಡಂತೆ ರಾಯಚೂರಿನಲ್ಲಿ ಈ ಸಮಾವೇಶ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿದಂತೆ ರಾಜ್ಯದ ಎಲ್ಲ ಕಾಂಗ್ರೆಸ್ ನಾಯಕರು, ಕಲ್ಯಾಣ ಕರ್ನಾಟಕದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.