ಸುಹಾಸ್‌ ಮೇಲೆ 5 ಕೇಸುಗಳಿವೆ ಅದಕ್ಕೇ ಮನೆಗೆ ಹೋಗಿಲ್ಲ: ಪರಂ

Published : May 05, 2025, 09:18 AM IST
Dr G Parameshwara

ಸಾರಾಂಶ

ಮಂಗಳೂರಿನ ಬಜ್ಪೆ ಬಳಿ ಕೊಲೆಯಾದ ಸುಹಾಸ್ ಶೆಟ್ಟಿ ಮೇಲೆ ಐದು ಕೇಸ್​ಗಳಿವೆ. ಹಾಗಾಗಿ ನಾವು ಯಾರೂ ಅವರ ಮನೆಗೆ ಭೇಟಿ ಕೊಟ್ಟಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಬೆಂಗಳೂರು : ಮಂಗಳೂರಿನ ಬಜ್ಪೆ ಬಳಿ ಕೊಲೆಯಾದ ಸುಹಾಸ್ ಶೆಟ್ಟಿ ಮೇಲೆ ಐದು ಕೇಸ್​ಗಳಿವೆ. ಹಾಗಾಗಿ ನಾವು ಯಾರೂ ಅವರ ಮನೆಗೆ ಭೇಟಿ ಕೊಟ್ಟಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದರಲ್ಲಿ ಅನಗತ್ಯ ವಿವಾದ ಮಾಡುವ ವಿಚಾರ ಏನೂ ಇಲ್ಲ. ಇದೊಂದು ಕೊಲೆ ಪ್ರಕರಣವಾಗಿದ್ದು, ಸುಹಾಸ್‌ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತರು ನಿಜವಾದ ಆರೋಪಿಗಳೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರನ್ನೋ ಆರೋಪಿ ಎಂದು ಹೇಳಲು ಆಗುತ್ತದೆಯೇ? ಕೊಲೆ ಪ್ರಕರಣದಲ್ಲಿ ಯಾರ್‍ಯಾರನ್ನೋ ಬಂಧಿಸಲು ಆಗುವುದಿಲ್ಲ. ನಮ್ಮ ಪೊಲೀಸ್‌ ಇಲಾಖೆ ಸಮರ್ಥವಾಗಿ ಕೆಲಸ ಮಾಡಿ ಎಂಟು ಆರೋಪಿಗಳನ್ನು ಬಂಧಿಸಿದೆ. ತನಿಖೆ ನಡೆಯುತ್ತಿದ್ದು ಆ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.

ಬಿಜೆಪಿ ಆರೋಪಗಳು ಶುದ್ಧ ಸುಳ್ಳು. ಬಿಜೆಪಿಯವರ ಕಾಲದಲ್ಲೂ ಕೊಲೆಗಳು ಆಗಿವೆ. ಸುಹಾಸ್ ಪ್ರಕರಣ ಎನ್ಐಎಗೆ ಕೊಡುವ ಅವಶ್ಯಕತೆ ಇಲ್ಲ. ನಮ್ಮ ಪೊಲೀಸರೇ ತನಿಖೆ ನಡೆಸುತ್ತಾರೆ. ಇದು ಪ್ರತೀಕಾರಕ್ಕೆ ನಡೆದಿದೆಯಾ ಎಂಬುದು ತನಿಖೆಯಿಂದಲೇ ಗೊತ್ತಾಗಬೇಕು ಎಂದರು.

ಮಂಗಳೂರು ಭೇಟಿ ವೇಳೆ ಕೇವಲ ಮುಸ್ಲಿಂ ಸಮುದಾಯದವರ ಜೊತೆ ಸಭೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾವು ಯಾವುದೇ ಸಭೆ ಕರೆದಿಲ್ಲ. ಐಬಿಗೆ ಬಂದಾಗ ಬೇಡ ಎನ್ನಲು ಆಗುತ್ತದೆಯೇ? ಬೇರೆ ಸಮುದಾಯದವರೂ ಬರಬೇಕಾಗಿತ್ತು. ಕಾಂಗ್ರೆಸ್‌ನ ರಮಾನಾಥ್‌ ರೈ ಸೇರಿ ಹಲವರು ಬಂದಿದ್ದರು. ಅವರು ಹಿಂದೂಗಳಲ್ಲವೇ? ಇಂತಹ ಕ್ಷುಲ್ಲಕ ರಾಜಕಾರಣ ಮಾಡಬಾರದು ಎಂದರು.

PREV

Recommended Stories

ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌
ಸಂಜೆ ಕೋರ್ಟ್‌ಗೆ ವಕೀಲರ ಸಂಘಗಳ ವಿರೋಧ