ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಛಲವಾದಿ ನಾರಾಯಣ ಸ್ವಾಮಿ ಸವಾಲು
ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಳಿಸಿಲ್ಲ ಎಂದು ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಈ ಮಾತನ್ನು ಈ ನಾಯಕರು ಸಾಬೀತುಪಡಿಸಿದರೆ ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಛಲವಾದಿ ನಾರಾಯಣ ಸ್ವಾಮಿ ಸವಾಲು ಹಾಕಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿಲ್ಲ. ಕಮ್ಯುನಿಸ್ಟ್ ಪಕ್ಷದ ಡಾಂಗೆ ಮತ್ತು ಆರ್‌ಎಸ್‍ಎಸ್‍ನ ಸಾವರ್ಕರ್ ಸೋಲಿಸಿದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಷ್ಟ್ರೀಯ ನಾಯಕ ಜೈರಾಂ ರಮೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಈ ನಾಲ್ವರು ತಮ್ಮ ಮಾತನ್ನು ಸಾಬೀತುಪಡಿಸಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತಿ ಘೋಷಿಸಲು ಸಿದ್ಧ ಎಂದು ಪ್ರಕಟಿಸಿದರು.
ಕಾಂಗ್ರೆಸ್ ನಾಯಕರು ಅವರ ಮಾತು ಸಾಬೀತುಪಡಿಸಿದರೆ ನನ್ನ ಸ್ವಂತ ವೇತನದಲ್ಲಿ ಒಂದು ಲಕ್ಷದ ಒಂದು ರುಪಾಯಿಯನ್ನು ಬಹುಮಾನವಾಗಿ ನೀಡುತ್ತೇನೆ. ಒಂದು ವೇಳೆ ತಮ್ಮ ಮಾತನ್ನು ಸಾಬೀತುಪಡಿಸಲು ಅವರು ವಿಫಲವಾದರೆ ಈ ನಾಲ್ವರೂ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದರು.
ಖರ್ಗೆಗಳಿಂದ ದಲಿತರಿಗೆ ಅನ್ಯಾಯ:
ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಖರ್ಗೆ ಡಬಲ್ ಇಂಜಿನ್ ಸುಳ್ಳುಗಾರರು. ಇಂತಹ ಖರ್ಗೆಗಳಿಂದ ಬಾಬಾಸಾಹೇಬ್ ಮತ್ತು ದಲಿತರಿಗೆ ಅನ್ಯಾಯವಾಗಿದೆ. ಅಂಬೇಡ್ಕರ್ ಅವರಿಗೆ ಈ ದೇಶದಲ್ಲಿ ನ್ಯಾಯ ಸಿಗಲಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ 65 ವರ್ಷ ಆಡಳಿತ ನಡೆಸಿದ್ದು, ಏಕೆ ನ್ಯಾಯ ಕೊಡಲಿಲ್ಲ ಎಂದು ತರಾಟೆ ತೆಗೆದುಕೊಂಡರು.
ದೇಶದ ಸಂವಿಧಾನ ಸಾವಿರ ವರ್ಷಗಳ ಹಿಂದಿನದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅವರಿಗೆ ಬುದ್ಧಿ ತಲೆಯಲ್ಲಿ ಇದೆಯೋ ಅಥವಾ ಪಾದಗಳಲ್ಲಿ ಇದೆಯೋ ಎಂದು ಅರ್ಥವಾಗುತ್ತಿಲ್ಲ. ಈ ರೀತಿ ಹೇಳಿಕೆ ನೀಡಿದ ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್ ನಾಯಕರು ಯಾವುದೇ ಮಾತನಾಡದಿರುವುದು ಸಂವಿಧಾನ ಮತ್ತು ಬಾಬಾಸಾಹೇಬರಿಗೆ ಮಾಡಿರುವ ಅಪಚಾರವಾಗಿದೆ. ಇಂಥವರು ಹೇಗೆ ಸಂವಿಧಾನ ಕಾಪಾಡುತ್ತಾರೆ ಎಂದು ಟೀಕಿಸಿದರು.
ಮೀಸಲಾತಿಗೆ ಬಿಜೆಪಿ ಮತ್ತು ಆರ್‌ಎಸ್‍ಎಸ್ ವಿರೋಧವಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ವಿರೋಧ ಯಾವತ್ತು ಇತ್ತು? ಈ ದೇಶದಲ್ಲಿ ಆಡಳಿತ ನಡೆಸಿದವರು ಬಿಜೆಪಿ ಮತ್ತು ಆರ್‌ಎಸ್‍ಎಸ್‌ನವರಾ? ದೇಶದಲ್ಲಿ ಸಮಾನತೆ ಬರುವವರೆಗೆ ಮೀಸಲಾತಿ ಇರಬೇಕು ಎಂದು ಆರ್‌ಎಸ್‍ಎಸ್‌ನವರು ಹೇಳಿದ್ದಾರೆ. ಅದೇ ರೀತಿ ಎಂದಿಗೂ ಮೀಸಲಾತಿ ಹಿಂಪಡೆಯುವುದಿಲ್ಲ ಎಂದು ಬಿಜೆಪಿ ಹೇಳುತ್ತದೆ ಎಂದು ಸ್ಪಷ್ಟಪಡಿಸಿದರು.