ಡಿಕೆಶಿ ಗ್ಯಾರಂಟಿ ಹೇಳಿಕೆಗೆ ಖರ್ಗೆ, ಸಿಎಂ ಚಾಟಿ - ಜನರಲ್ಲಿ ಅನುಮಾನ ಸೃಷ್ಟಿ ಮಾಡಿದ್ದೀರಿ, ಟೀಕಿಸುವವರಿಗೆ ವಿಷಯ ಕೊಟ್ಟಿದ್ದೀರಿ

Published : Nov 01, 2024, 08:14 AM IST
dk shivakumar

ಸಾರಾಂಶ

ನಿಮ್ಮ (ರಾಜ್ಯ ಸರ್ಕಾರದ) ಐದು ಗ್ಯಾರಂಟಿ ಯೋಜನೆ ನೋಡಿಕೊಂಡು ಮಹಾರಾಷ್ಟ್ರದಲ್ಲಿ ಅನುಕರಣೆ ಮಾಡಲು ಹೊರಟಿದ್ದೇವೆ. ಹೀಗಿರುವಾಗ ನೀವು ಒಂದು ಗ್ಯಾರಂಟಿ ಕೈಬಿಡುತ್ತೇವೆ ಎಂದು ಹೇಳಿ ಗೊಂದಲ ಮೂಡಿಸಿದ್ದೀರಿ’ ಎಂದು ಎಐಸಿಸಿ ಅಧ್ಯಕ್ಷ  ಖರ್ಗೆ ಅವರು ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು : ‘ನಿಮ್ಮ (ರಾಜ್ಯ ಸರ್ಕಾರದ) ಐದು ಗ್ಯಾರಂಟಿ ಯೋಜನೆ ನೋಡಿಕೊಂಡು ಮಹಾರಾಷ್ಟ್ರದಲ್ಲಿ ಅನುಕರಣೆ ಮಾಡಲು ಹೊರಟಿದ್ದೇವೆ. ಹೀಗಿರುವಾಗ ನೀವು ಒಂದು ಗ್ಯಾರಂಟಿ ಕೈಬಿಡುತ್ತೇವೆ ಎಂದು ಹೇಳಿ ಗೊಂದಲ ಮೂಡಿಸಿದ್ದೀರಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಮಾರ್ಪಾಡು ಬಗ್ಗೆ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದ ಡಿ.ಕೆ. ಶಿವಕುಮಾರ್‌ ಅವರಿಗೆ ಬುದ್ಧಿವಾದ ಹೇಳಿದರು.

ಈ ವೇಳೆ ಪಕ್ಕದಲ್ಲೇ ಇದ್ದ ಶಿವಕುಮಾರ್‌ ಅವರಿಗೆ, ‘ನೀವು 5 ಗ್ಯಾರಂಟಿ ನೀಡುತ್ತಿದ್ದೀರಿ. ಅದನ್ನು ನೋಡಿಕೊಂಡು ಮಹಾರಾಷ್ಟ್ರದಲ್ಲಿ ಅನುಕರಣೆ ಮಾಡಲು ಹೊರಟಿದ್ದೇವೆ. ಇದೀಗ ಒಂದು ಕೈ ಬಿಡುತ್ತೇನೆ ಎಂದು ಹೇಳಿದ್ದೀರಿ’ ಎಂದರು.

ಇದಕ್ಕೆ ಡಿ.ಕೆ. ಶಿವಕುಮಾರ್‌ ಅವರು ‘ಇಲ್ಲ ಸರ್‌ ಕೈಬಿಡುತ್ತೇವೆ ಎಂದು ಹೇಳಿಲ್ಲ’ ಎಂದು ಸಮಜಾಯಿಷಿ ನೀಡಲು ಮುಂದಾದಾಗ, ‘ನೀವು ಪೇಪರ್‌ ಓದ್ತಿಲ್ಲಪ್ಪ. ನಾವು ಪೇಪರ್‌ನಲ್ಲಿ ಬಂದಿದ್ದನ್ನು ನೋಡುತ್ತೇವೆ. ಇಂದು ಪೇಪರ್‌ನಲ್ಲಿ ಬಂದಿದೆ’ ಎಂದು ಸುದ್ದಿಗಾರರ ಎದುರೇ ಖರ್ಗೆ ಕಿವಿಮಾತು ಹೇಳಿದರು.

ಆಗ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ‘ಕೈಬಿಡುತ್ತೇವೆ ಎಂದಿಲ್ಲ. ಪರಿಷ್ಕರಣೆಗೆ ಪರಿಶೀಲಿಸುತ್ತೇವೆ’ ಎಂದಿದ್ದಾರೆ ಎಂದು ಸಮರ್ಥಿಸಿಕೊಂಡರು.

ಮಾತು ಮುಂದುವರೆಸಿದ ಖರ್ಗೆ, ‘ಪರಿಷ್ಕರಣೆನೋ ಯಾವುದೋ ಒಂದು ಹೇಳಿದ್ದೀರಿ. ಒಟ್ಟಿನಲ್ಲಿ ಜನರಲ್ಲಿ ಅನುಮಾನ ಸೃಷ್ಟಿ ಮಾಡಿದ್ರಲ್ಲ. ಟೀಕಿಸುವವರಿಗೆ ಒಂದು ಒಳ್ಳೆಯ ವಿಷಯ ಸಿಕ್ಕಿತಲ್ಲ’ ಎಂದು ಹೇಳಿ ಬೇಸರ ವ್ಯಕ್ತಪಡಿಸಿದರು.

ಬಜೆಟ್‌ ನೋಡಿಕೊಡು ಗ್ಯಾರಂಟಿಗೆ ಸೂಚಿಸಿದ್ದೇನೆ: ಖರ್ಗೆ

‘ಮಹಾರಾಷ್ಟ್ರದಲ್ಲಿ ಏಕಾಏಕಿ 5-10-20 ಗ್ಯಾರಂಟಿಗಳೆಲ್ಲಾ ಘೋಷಣೆ ಮಾಡಲು ಹೋಗಬೇಡಿ. ನಿಮ್ಮ ಬಜೆಟ್‌ಗೆ ತಕ್ಕಂತೆ ಗ್ಯಾರಂಟಿ ಕೊಡಬೇಕು. ಇಲ್ಲದಿದ್ದರೆ ದಿವಾಳಿ ಎದ್ದು ಹೋಗುತ್ತದೆ. ರಸ್ತೆಗೆ ಮಣ್ಣು ಹಾಕಲು ಹಣ ಇರಲ್ಲ ಎಂದು ಅಲ್ಲಿನವರಿಗೆ ತಿಳಿಸಿದ್ದೇನೆ’ ಎಂದು ಖರ್ಗೆ ಹೇಳಿದರು.

‘ಬಜೆಟ್‌ ನೋಡಿಕೊಂಡೇ ಗ್ಯಾರಂಟಿ ನೀಡಬೇಕು. ಈ ಸರ್ಕಾರ ವಿಫಲ ಆದರೆ ಮುಂದಿನ ತಲೆಮಾರಿಗೆ ಕೆಟ್ಟ ಹೆಸರು ಬಿಟ್ಟು ಹೋಗುತ್ತೀರೇ ಹೊರತು ಬೇರೆ ಏನೂ ಆಗಲ್ಲ. ಮತ್ತೆ ಅವರು 10 ವರ್ಷ ವನವಾಸದಲ್ಲಿ ಇರಬೇಕಾಗುತ್ತದೆ. ಹೀಗಾಗಿ ಬಜೆಟ್‌ ನೋಡಿ ಗ್ಯಾರಂಟಿ ಕೊಡಲು ಮಹಾರಾಷ್ಟ್ರದಲ್ಲಿ ಹೇಳಿದ್ದೇನೆ’ ಎಂದರು.

‘ರಾಹುಲ್‌ಗಾಂಧಿ ಅವರು ಸಹ ಬಜೆಟ್ ಕಳುಹಿಸಿದರೆ ಪರಿಶೀಲನೆ ನಡೆಸಿ ಬಳಿಕವಷ್ಟೇ ಗ್ಯಾರಂಟಿ ಘೋಷಣೆಗೆ ಬರುವುದಾಗಿ ತಿಳಿಸಿದ್ದಾರೆ. ಅಲ್ಲಿಯವರೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ 15 ದಿನದ ಹಿಂದೆ ಎಲ್ಲಾ ಮಾಹಿತಿ ತರಿಸಿಕೊಂಡು ಗ್ಯಾರಂಟಿಗಳನ್ನು ಸಿದ್ಧಪಡಿಸಲಾಗಿದೆ. ಮುಂಬೈನಲ್ಲಿ ಹೋಗಿ ಘೋಷಣೆ ಮಾಡುತ್ತೇವೆ’ ಎಂದು ಹೇಳಿದರು.

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌