;Resize=(412,232))
ಬೆಂಗಳೂರು : ಹಾಲಿನ ದರ ಹೆಚ್ಚಳ ಬೆನ್ನಲ್ಲೇ ಬಹಳಷ್ಟು ಹೋಟೆಲ್‌ಗಳಲ್ಲಿ ಕಾಫಿ, ಟೀ ದರ ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳವನ್ನು ಹೋಟೆಲ್ ಮಾಲೀಕರು ಸಮರ್ಥಿಸಿಕೊಂಡರೆ, ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪ್ರತಿ ಲೀಟರ್ ನಂದಿನಿ ಹಾಲಿನ ದರವನ್ನು 8 ರು. ಹಾಗೂ ಮೊಸರಿಗೆ 14 ರುಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಸಹಜವಾಗಿಯೇ ಕಾಫಿ, ಟೀ ಬೆಲೆಯಲ್ಲಿ 3 ರಿಂದ 5 ರು. ಹೆಚ್ಚಳ ಮಾಡಲಾಗಿದೆ. ಹಾಲಿನಿಂದ ತಯಾರಿಸುವ ಖೋವಾ ಸೇರಿ ಖಾದ್ಯಗಳ ಬೆಲೆಯನ್ನೂ ಹೆಚ್ಚಳ ಮಾಡುವ ಅನಿವಾರ್ಯತೆ ಇದೆ. ಜೊತೆಗೆ ಮಜ್ಜಿಗೆ, ಮೊಸರನ್ನ, ಮೊಸರು ವಡೆಯ ಬೆಲೆಯನ್ನೂ ಹೆಚ್ಚಳ ಮಾಡಬೇಕಿದೆ’ ಎಂದು ಹೋಟೆಲ್ ಮಾಲೀಕರು ಸಮರ್ಥಿಸಿಕೊಂಡಿದ್ದಾರೆ.
‘ನಂದಿನಿ ಹಾಲಿನ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕಾಫಿ, ಟೀ ಬೆಲೆಯನ್ನು ಅನಿವಾರ್ಯವಾಗಿ ಹೆಚ್ಚಳ ಮಾಡಲಾಗಿದೆ. ಗ್ರಾಹಕರು ಸಹಕರಿಸಬೇಕು’ ಎಂಬ ಬರಹ ಕೆಲ ಹೋಟೆಲ್‌ಗಳ ಕ್ಯಾಷ್ ಕೌಂಟರ್ ಬಳಿ ಕಂಡುಬಂದಿದೆ. ಆ ಮೂಲಕ ದರ ಹೆಚ್ಚಳದ ಅನಿವಾರ್ಯತೆಯನ್ನು ಹೋಟೆಲ್ ಮಾಲೀಕರು ಗ್ರಾಹಕರಿಗೆ ಮನದಟ್ಟು ಮಾಡಲು ಮುಂದಾಗಿದ್ದಾರೆ.
‘ರೈತರು ಮತ್ತು ಸಾರ್ವಜನಿಕರ ಹಿತ ಗಮನದಲ್ಲಿಟ್ಟುಕೊಂಡು ಸರ್ಕಾರ ಲೀಟರ್ ಹಾಲಿಗೆ ಎರಡ್ಮೂರು ರುಪಾಯಿ ಮಾತ್ರ ಹೆಚ್ಚಳ ಮಾಡಬೇಕಿತ್ತು. ಬೆಲೆ ಹೆಚ್ಚಳದಿಂದಾಗಿ ಫುಲ್ ಟೀ ಕುಡಿಯುತ್ತಿದ್ದವರು ಈಗ ಅರ್ಧ ಟೀ ಕುಡಿಯುವಂತಾಗಿದೆ. ಬಡ, ಮಧ್ಯಮ ವರ್ಗದವರ ಮೇಲೆ ಬೆಲೆ ಹೆಚ್ಚಳದಿಂದ ಬರೆ ಎಳೆದಂತಾಗಿದೆ. ರೈತರ ಹಾಲಿಗೆ ನೀಡುವ ಸಬ್ಸಿಡಿ ಹಣ ಹೆಚ್ಚಳ ಮಾಡಿ ಸರ್ಕಾರ ಸಾರ್ವಜನಿಕರ ಮೇಲಿನ ಹೊರೆ ಕಡಿಮೆ ಮಾಡಬೇಕು’ ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.