ವಲಸಿಗರಿಂದ ದೈನಂದಿನ ಜೀವನಕ್ಕೂ ಪೆಟ್ಟು!

Published : Nov 03, 2026, 11:26 AM IST
Bengaluru Illegal Bangladeshi Migrants

ಸಾರಾಂಶ

ರಾಜ್ಯ ರಾಜಧಾನಿ ಬೆಂಗಳೂರಿಗೆ ಹೊರ ರಾಜ್ಯಗಳಿಂದ ವಲಸೆ ಬರುತ್ತಿರುವವರ ಪ್ರಮಾಣ ಮಿತಿ ಮೀರಿ ನಗರದ ಜನಸಂಖ್ಯೆ ಅತಿ ವೇಗವಾಗಿ ಬೆಳೆಯುತ್ತಿರುವ ಪರಿಣಾಮ ಕನ್ನಡಿಗರ ಔದ್ಯೋಗಿಕ ಮಾತ್ರವಲ್ಲ ದೈನಂದಿನ ಜೀವನಕ್ಕೂ ಪೆಟ್ಟು ಬೀಳುತ್ತಿದೆ.

 ಲಿಂಗರಾಜು ಕೋರಾ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿಗೆ ಹೊರ ರಾಜ್ಯಗಳಿಂದ ವಲಸೆ ಬರುತ್ತಿರುವವರ ಪ್ರಮಾಣ ಮಿತಿ ಮೀರಿ ನಗರದ ಜನಸಂಖ್ಯೆ ಅತಿ ವೇಗವಾಗಿ ಬೆಳೆಯುತ್ತಿರುವ ಪರಿಣಾಮ ಕನ್ನಡಿಗರ ಔದ್ಯೋಗಿಕ ಮಾತ್ರವಲ್ಲ ದೈನಂದಿನ ಜೀವನಕ್ಕೂ ಪೆಟ್ಟು ಬೀಳುತ್ತಿದೆ.

ಒಂದೆಡೆ ಐಟಿ ಬಿಟಿಯಿಂದ ಹಿಡಿದು ಖಾಸಗಿ ವಲಯದ ಎಲ್ಲಾ ಸಂಸ್ಥೆ, ಕೈಗಾರಿಗಳಲ್ಲಿ ಕನ್ನಡಿಗರ ಉದ್ಯೋಗ ಕಸಿಯುತ್ತಿರುವ ವಲಸಿಗರು, ಮತ್ತೊಂದೆಡೆ ಆಭರಣ ಮಳಿಗೆಗಳಿಂದ ಹಿಡಿದು ಎಲ್ಲ ರೀತಿಯ ವ್ಯಾಪಾರೋದ್ಯಮಗಳನ್ನು ಆಕ್ರಮಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಹೂವು, ತರಕಾರಿ, ಹಣ್ಣು ಕೊನೆಗೆ ಬೀದಿ ಬದಿಯ ಕಡಲೆ ಬೀಜ ವ್ಯಾಪಾರದ ವರೆಗೂ ಆವರಿಸಿಕೊಂಡು ಸ್ಥಳೀಯರ ದುಡಿಮೆ ಕಿತ್ತುಕೊಳ್ಳುತ್ತಿದ್ದಾರೆ. ಮಗದೊಂದೆಡೆ ವಲಸಿಗರೇ ಅರ್ಧಕ್ಕೂ ಹೆಚ್ಚು ತುಂಬಿ ಹೋಗಿರುವ ಬೆಂಗಳೂರಿನಲ್ಲಿ ಬಹುದೊಡ್ಡ ಮಟ್ಟದಲ್ಲಿ ಸಂಚಾರ ದಟ್ಟಣೆ, ನೀರಿನ ಅಭಾವ, ರಸ್ತೆ ನಿರ್ವಹಣೆ, ಕಸದ ಸಮಸ್ಯೆಗಳು ಸ್ಥಳೀಯ ಸರ್ಕಾರ ನಿಭಾಯಿಸಲಾಗದಷ್ಟು ಬಿಗಡಾಯಿಸುತ್ತಿವೆ. ನಗರದ ಮೂಲಸೌಕರ್ಯಗಳನ್ನು ಉಪಯೋಗಿಸಿಕೊಳ್ಳುತ್ತಿರುವ ಅನ್ಯರು ಸ್ಥಳೀಯರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು. ಆದರೆ, ಬರಬರುತ್ತಾ ಕನ್ನಡಿಗರೊಂದಿಗೆ ಸಂಘರ್ಷಕ್ಕೂ ಇಳಿಯುತ್ತಿರುವುದು ಕಂಡುಬರುತ್ತಿದೆ.

ಬೆಂಗಳೂರು ವಲಸಿಗರ ಸ್ವರ್ಗ:

ಇಡೀ ದೇಶದಲ್ಲಿ ವಲಸಿಗರ ಸ್ವರ್ಗ ಯಾವುದಾದರೂ ಇದ್ದರೆ ಅದು ಬೆಂಗಳೂರು ಎನ್ನುವಂತಾಗಿದೆ. ಅಚ್ಚರಿಯಾದರೂ ಇದು ಸತ್ಯ. ಭಾರತದ ಸರಾಸರಿ ಅಂತಾರಾಜ್ಯ ವಲಸೆ ಪ್ರಮಾಣ ಕೇವಲ ಶೇ.4.48ರಷ್ಟಿದೆ. ಆದರೆ, ಕರ್ನಾಟಕಕ್ಕೆ ಹೊರ ರಾಜ್ಯದವರ ವಲಸೆ ಆತಂಕ ಹುಟ್ಟಿಸುವ ಮಟ್ಟಿನಷ್ಟಿದ್ದು ಶೇ.37.82ರಷ್ಟಿದೆ. ಇದರಲ್ಲಿ ಬಹುತೇಕ ಮಂದಿ ಬೆಂಗಳೂರಿಗೇ ಬರುತ್ತಾರೆ. ಪ್ರಸ್ತುತ ನಗರದಲ್ಲಿ ವಲಸಿಗರ ಪ್ರಮಾಣ ಈಗಾಗಲೇ ಶೇ.50ರ ಗಡಿ ದಾಟಿದೆ. ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ತಲುಪಲು ವಲಸಿಗರ ಕೊಡುಗೆಯೇ ಅರ್ಧದಷ್ಟಿದೆ ಎನ್ನುತ್ತವೆ ಅಂಕಿ ಅಂಶಗಳು. ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ಇತ್ತೀಚೆಗೆ ಬಿಡುಗಡೆ ಮಾಡಿದ ವಲಸೆ ದತ್ತಾಂಶದ ಮೇಲೆ ಈ ವರ್ಗೀಕರಣ ಮಾಡಲಾಗಿದೆ.

ಬಂದವರು ವಾಪಸ್‌ ಹೋಗುವುದೇ ಇಲ್ಲ:

ಇನ್ನು, ಒಮ್ಮೆ ನಗರಕ್ಕೆ ಬಂದ ಬಹುತೇಕ ವಲಸಿಗರು ತಮ್ಮ ರಾಜ್ಯಗಳಿಗೆ ಮರಳುವುದು ಅತೀ ವಿರಳ. ಕುಟುಂಬ ಸಮೇತ ಇಲ್ಲಿಯೇ ತಮ್ಮ ನೆಲೆ ಕಂಡುಕೊಳ್ಳುತ್ತಿರುವವರು ಹೆಚ್ಚಾಗುತ್ತಿದೆ. ಇದರಿಂದ ಮನೆ ಬಾಡಿಗೆ, ವಸತಿ ಸಮುಚ್ಚಗಳ ಬೆಲೆ ಗಗನಕ್ಕೇರುತ್ತಲೇ ಇದ್ದು, ಕನ್ನಡಿಗರಿಗೆ ಕಡಿಮೆ ಬೆಲೆಯಲ್ಲಿ ಬಾಡಿಗೆ ಸಿಗದಂತಹ, ವಸತಿ ಸಮುಚ್ಚಯಗಳನ್ನು ಖರೀದಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಷ್ಟೇ ಅಲ್ಲ, ಇದರಿಂದ ಈಗಾಗಲೇ ನಗರದ ಕೆಲ ಪ್ರದೇಶಗಳು ಕನ್ನಡಿಗರ ಕೈತಪ್ಪಿ ಹೋಗಿವೆ. ಆ ಪ್ರದೇಶಗಳಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗಿ ನಾಡು, ನುಡಿ, ಸಂಸ್ಕೃತಿ, ಒಗ್ಗಟ್ಟಿಗೂ ಪೆಟ್ಟು ಬೀಳುತ್ತಿದೆ. ಬೆಂಗಳೂರಿನಿಂದ ಉತ್ತರ ಭಾರತದೆಡೆಗೆ ಇರುವ ರೈಲ್ವೆ ಸಂಪರ್ಕ ಮತ್ತು ರೈಲುಗಳ ಸಂಖ್ಯೆ, ನಮ್ಮದೇ ರಾಜ್ಯದ ಇತರೆ ಜಿಲ್ಲೆಗಳಿಗೂ ಇಲ್ಲದಂತಾಗಿದೆ. ಅಕ್ಷರಶಃ ಕನ್ನಡಿಗರೇ ಜೀವನ ಮಾಡಲಾಗದಷ್ಟು ದುಸ್ಥಿತಿ ಎದುರಾಗುತ್ತಿದೆ. ವಲಸಿಗರಿಗೆ ಸರ್ಕಾರ ಯಾವುದೇ ನಿಯಂತ್ರಣ ಹೇರದಿರುವುದೇ ಇದಕ್ಕೆಲ್ಲ ಕಾರಣ ಎನ್ನುವುದು ಕನ್ನಡಿಗರ ನೇರ ಆರೋಪ, ಅಸಮಾಧಾನ ಹಾಗೂ ಆಕ್ರೋಶ.

15 ವರ್ಷದಲ್ಲಿ ಮೂರು ಪಟ್ಟು ಏರಿದ ವಲಸಿಗರ ಸಂಖ್ಯೆ

2001ರ ಜನಗಣತಿ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನ ಜನಸಂಖ್ಯೆ 65 ಲಕ್ಷ ಇದ್ದಾಗ ವಲಸಿಗರ ಪ್ರಮಾಣ ಶೇ.13ರಷ್ಟಿತ್ತು(16 ಲಕ್ಷ). ನಂತರ ಆ ಪ್ರಮಾಣ 2011ರ ಜನಗಣತಿ ವೇಳೆಗೆ ನಗರದ ಜನಸಂಖ್ಯೆ 96 ಲಕ್ಷ ದಾಟಿದ್ದು, ವಲಸಿಗರ ಪ್ರಮಾಣ ಶೇ.42ರಷ್ಟು(43 ಲಕ್ಷ ಜನ ವಲಸಿಗರು) ದಾಟಿದೆ. ಈ ಹತ್ತು ವರ್ಷಗಳಲ್ಲಿ ವಲಸಿಗರ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಇದಾದ ಬಳಿಕ ಪ್ರತೀ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಿದ್ದ ಜನಗಣತಿ ಕಾರ್ಯ ತಡವಾಗಿ ಈಗ ನಡೆಯುತ್ತಿದೆ. 2011ರ ಬಳಿಕ 15 ವರ್ಷಗಳು ಗತಿಸಿವೆ, ಈ ಅವಧಿಯಲ್ಲಿ ಬೆಂಗಳೂರಿನ ಜನಸಂಖ್ಯೆ 1.5 ಕೋಟಿ ರು. ತಲುಪಿಸಿರುವ ಅಂದಾಜಿದ್ದು, ವಲಸಿಗರ ಪ್ರಮಾಣ ಶೇ.50 ದಾಟಿರುವ ಅಂದರೆ 54 ಲಕ್ಷ ಮೀರಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಲಸಿಗರ ಪೈಕಿ ರಾಜ್ಯದ ಇತರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವವರು ತುಂಬಾ ಕಡಿಮೆ. ಅಂದಾಜು ಶೇ.10ರಷ್ಟಿರಬಹುದು. ಆದರೆ, ನೆರೆ ರಾಜ್ಯಗಳ ಜೊತೆಗೆ ಉತ್ತರ ಭಾರತದಿಂದ ಬರುವವರ ಸಂಖ್ಯೆ ಶೇ.60ರಷ್ಟಿದೆ. ಆರಂಭದಲ್ಲಿ ಹೊರ ರಾಜ್ಯಗಳ ಪುರುಷರು ಮಾತ್ರ ಉದ್ಯೋಗ, ದುಡಿಮೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಈಗ ಕುಟುಂಬ ಸಮೇತರಾಗಿ ಬರುವುದು ಹೆಚ್ಚುತ್ತಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ರಾಜಸ್ಥಾನ, ಗುಜರಾತ್‌, ಪಂಜಾಬ್‌ ಸೇರಿ ಇನ್ನಿತರೆ ರಾಜ್ಯಗಳಿಂದ ಬರುವ ವಲಸಿಗರ ಸಂಖ್ಯೆ ತೀವ್ರಗೊಳ್ಳುತ್ತಿದೆ. ವಲಸಿಗರು ಹೆಚ್ಚುತ್ತಿರುವ ಪರಿಣಾಮ ಇಲ್ಲಿನ ಮೂಲನಿವಾಸಿಗಳಾದ ಕನ್ನಡಿಗರ ಮೇಲೆ ಬೀರುತ್ತಿದೆ.

ಬೆಂಗಳೂರಿನಲ್ಲಿ ವಲಸಿಗರು ಮಿತಿ ಮೀರಿ ಹೋಗಿರುವುದು ಒಂದು ಅತ್ಯಂತ ಗಂಭೀರವಾದ ವಿಚಾರ. ಅಷ್ಟೇ ಅಲ್ಲ ಇದು ಕನ್ನಡಿಗರ ಕಣ್ಣೀರಿನ ಕಥೆ, ನೋವು. ಇದರ ಬಗ್ಗೆ ನಮ್ಮ ಸಂಸದರು ಲೋಕಸಭೆ, ರಾಜ್ಯಸಭೆಯಲ್ಲಿ ದನಿ ಎತ್ತಬೇಕು. ಆದರೆ, ಎಲ್ಲ ಪಕ್ಷಗಳ ಸಂಸದರೂ ದೆಹಲಿ ಗುಲಾಮರಾಗಿಬಿಟ್ಟಿದ್ದಾರೆ. ಕನ್ನಡಿಗರ ಗುಲಾಮರು ಯಾರೂ ಇಲ್ಲ. ಇಂತಹ ಪರಿಸ್ಥಿತಿ ತಮಿಳುನಾಡು, ಕೇರಳದಂತಹ ರಾಜ್ಯದಲ್ಲಿ ಆಗಿದ್ದರೆ ಅಲ್ಲಿನ ಸಂಸದರು ಖಂಡಿತ ಸುಮ್ಮನಿರುತ್ತಿರಲಿಲ್ಲ.

ಆದರೆ, ನಮ್ಮ ಸಂಸದರ ಮೌನ ನೋಡಿದರೆ ನಮ್ಮಲ್ಲಿ ಸಂಸದರೇ ಇಲ್ಲವೇನೊ ಎಂದು ಬಹಳ ನೋವಾಗುತ್ತದೆ. ಕನ್ನಡಿಗರ ಹಿತ ಕಾಯುವುದು ಯಾರಿಗೂ ಬೇಡವಾಗಿದೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಅಂತಾರಾಜ್ಯ ವಲಸೆ ನಿಯಂತ್ರಣ ವಿಚಾರವಾಗಿ ಸಂಸತ್‌ನಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಬೇಕಿದೆ. ಆಯಾ ರಾಜ್ಯದ ಜನರಿಗೆ ಅಲ್ಲೇ ಉದ್ಯೋಗ, ವ್ಯಾಪಾರಕ್ಕೆ ಅವಕಾಶವಾಗುವಂತಹ ಪ್ರತಿಯೊಂದು ರಾಜ್ಯದ ಸಮಗ್ರ ಅಭಿವೃದ್ಧಿಯ ಯೋಜನೆಗಳನ್ನು ತರುವ ಕೆಲಸಗಳು ಆಗಬೇಕು. ಆದರೆ, ಏನು ಮಾಡುವುದು. ನಮ್ಮ ಯಾವ ಪಕ್ಷದ ಸಂಸದರೂ ಇದರ ಬಗ್ಗೆ ಚಕಾರ ಎತ್ತುವರರಿಲ್ಲ.

- ವಾಟಾಳ್‌ ನಾಗರಾಜ್‌, ಕನ್ನಡ ಚಳಿವಳಿ ವಾಟಾಳ್‌ ಪಕ್ಷದ ರಾಜ್ಯಾಧ್ಯಕ್ಷ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಅಮೆರಿಕ ಮಧ್ಯಂತರ ಚುನಾವಣೆ- ಭಾರತದ ಮೇಲೇನು ಎಫೆಕ್ಟ್‌?
ಹಾಲಿನ ದರ ಹೆಚ್ಚಳ ಬೆನ್ನಲ್ಲೇ ಕಾಫಿ, ಟೀ ಬೆಲೆ ಏರಿಕೆ