ನಗರದಲ್ಲಿ ದೀಪಾವಳಿ ಬಳಿಕ ಕಾಫಿ-ಚಹಾ ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದು ನಿಚ್ಚಳ

Published : Oct 21, 2024, 10:28 AM IST
Coffee

ಸಾರಾಂಶ

ನಗರದಲ್ಲಿ ದೀಪಾವಳಿ ಬಳಿಕ ಕಾಫಿ-ಚಹಾ ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದು ನಿಚ್ಚಳವಾಗಿದೆ. ಭಾರತೀಯ ಕಾಫಿ ವ್ಯಾಪಾರಿ ಸಂಘ (ಐಸಿಟಿಎ) ಕೇಜಿ ಕಾಫಿಗೆ ₹100 ವರೆಗೆ ಹೆಚ್ಚಿಸುತ್ತಿರುವುದು ಹಾಗೂ ಟೀ ಪುಡಿಯ ದರ ಸಹ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಬೆಂಗಳೂರು : ನಗರದಲ್ಲಿ ದೀಪಾವಳಿ ಬಳಿಕ ಕಾಫಿ-ಚಹಾ ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದು ನಿಚ್ಚಳವಾಗಿದೆ. ಭಾರತೀಯ ಕಾಫಿ ವ್ಯಾಪಾರಿ ಸಂಘ (ಐಸಿಟಿಎ) ಕೇಜಿ ಕಾಫಿಗೆ ₹100 ವರೆಗೆ ಹೆಚ್ಚಿಸುತ್ತಿರುವುದು ಹಾಗೂ ಟೀ ಪುಡಿಯ ದರ ಸಹ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಈ ವರ್ಷದಲ್ಲಿ ಇಲ್ಲಿವರೆಗೆ ಎರಡು ಬಾರಿ ಚಹಾ-ಕಾಫಿ ಬೆಲೆ ಹೆಚ್ಚಳವಾಗಿದೆ. ಸಿಲಿಂಡರ್‌ ದರ, ಹಾಲಿನ ದರ ಹೆಚ್ಚಳ ಇದಕ್ಕೆ ಕಾರಣವಾಗಿತ್ತು. ಇದೀಗ ವರ್ಷದಲ್ಲಿ ಮೂರನೇ ಬಾರಿಗೆ ಕಾಫಿ ಬೆಲೆ ಹೆಚ್ಚಳ ಆಗುವುದು ಬಹುತೇಕ ಖಚಿತ. ಆದರೆ, ಗ್ರಾಹಕರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ಕೈಗೊಳ್ಳಲಿದ್ದೇವೆ. ಸದ್ಯಕ್ಕೆ ದರ ಎಷ್ಟು ಹೆಚ್ಚಿಸಬೇಕು ಎಂಬುದರ ಬಗ್ಗೆ ನಿರ್ಧರಿಸಿಲ್ಲ ಎಂದು ಬೃಹತ್‌ ಬೆಂಗಳೂರು ಹೊಟೇಲ್‌ ಮಾಲೀಕರ ಸಂಘ ತಿಳಿಸಿದೆ.

ಸದ್ಯ ನಗರದಲ್ಲಿ ಕಾಫಿ-ಚಹಾಕ್ಕೆ ₹15- ₹35 (ಸಾಮಾನ್ಯ ಹೊಟೆಲ್‌) ಇದ್ದು, ಐಷಾರಾಮಿ ಹೊಟೆಲ್‌, ಕೆಫೆಗಳಲ್ಲಿ ದರ ₹100 ಮೇಲಿದೆ. ಸಾಮಾನ್ಯ ಹೊಟೆಲ್‌ಗಳಲ್ಲಿ ₹2ವರೆಗೆ ಬೆಲೆ ಹೆಚ್ಚಿಸಲು ಚಿಂತನೆ ನಡೆದಿದೆ.

ಹವಾಮಾನ ವೈಪರೀತ್ಯ ಕಾರಣದಿಂದ ಕಾಫಿ ಬೆಳೆ ಕುಸಿತವಾಗಿದೆ. ಮಾರುಕಟ್ಟೆಗೆ ಅಗತ್ಯದಷ್ಟು ಕಾಫಿ ಪುಡಿ ಸಿಗದಿರುವುದು ಬೆಲೆ ಹೆಚ್ಚಲು ಪ್ರಮುಖ ಕಾರಣ. ಜನವರಿಯಲ್ಲಿ ಚಿಕೋರಿ ಮಿಶ್ರಿತ ಕಾಫಿ ಪುಡಿಗೆ ಕೇಜಿಗೆ ₹200- ₹250 ಇತ್ತು. ಆದರೆ, ಬಳಿಕ ಕಾಫಿ ಪುಡಿ ಬೆಲೆ ದುಪ್ಪಟ್ಟು ಏರಿಕೆಯಾಗಿದೆ. ರೊಬುಸ್ಟಾ ಕಾಫಿ ಪುಡಿ ಬೆಲೆ ಒಂದು ಕೇಜಿಗೆ ₹200ರಿಂದ ₹420ರವರೆಗೆ ಹಾಗೂ ಅರೇಬಿಕಾ ಕಾಫಿ ಪುಡಿಯಲ್ಲಿ ಕೇಜಿಗೆ ₹290ರಿಂದ ₹465 ವರೆಗೆ ಹೆಚ್ಚಾಗಿದೆ. ಚಿಕೋರಿ ರಹಿತ ಕಾಫಿಪುಡಿ ಕೇಜಿಗೆ ₹750 ವರೆಗೆ ಇದೆ. ಇದೀಗ ಐಸಿಟಿಎ ಪುನಃ ಕೇಜಿಗೆ ₹100 ವರಗೆ ಹೆಚ್ಚಿಸುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.

ಇನ್ನು ಚಹಾ ಪುಡಿ ದರವೂ ಕೇಜಿಗೆ ₹40- ₹50 ರಷ್ಟು ಹೆಚ್ಚಿದೆ. ಇದರ ಜೊತೆಗೆ ಹಾಲಿನ ದರವೂ ಏರಿಕೆಯಾಗಿದೆ. ಹೀಗಾಗಿ ಕಾಫಿ ಬೆನ್ನಲ್ಲಿ ಕಪ್‌ ಚಹಾ ಬೆಲೆಯೂ ಏರಿಕೆ ಆಗಲಿದೆ ಎಂದು ವರ್ತಕರು ಹೇಳಿದ್ದಾರೆ.

ದೀಪಾವಳಿ ಬಳಿಕ ಕಾಫಿ-ಚಹಾ ಬೆಲೆ ಹೆಚ್ಚಳ ಆಗಬಹುದು. ಗ್ರಾಹಕರಿಗೆ ಹೊರೆ ಆಗದಂತೆ ನಿರ್ಣಯ ಕೈಗೊಳ್ಳಲಿದ್ದೇವೆ. ಕಾಫಿ ಪುಡಿ ದರ ಹೆಚ್ಚಾಗುವುದು ಇದಕ್ಕೆ ಕಾರಣ.

-ಪಿ.ಸಿ.ರಾವ್‌, ಬೃಹತ್‌ ಬೆಂಗಳೂರು ಹೊಟೆಲ್‌ ಮಾಲೀಕರ ಸಂಘ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗಂಗಕಲ್ಯಾಣ ಯೋಜನೆ ಬಡ ರೈತರಿಗೆ ಅನುಕೂಲ
ಬೇಸಿಗೆಯಲ್ಲೂ ಸಮರ್ಪಕ ನೀರು ಸರಬರಾಜಿಗೆ ಅಗತ್ಯ ಕ್ರಮ