ವಿಧಾನಸೌಧದ ಆವರಣದಲ್ಲಿ ಆ.15ರಂದು ನಡೆಯಲಿರುವ ‘ಸ್ವಾತಂತ್ರ್ಯ ಹಬ್ಬ–2026’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಗತ್ಯ ಭದ್ರತೆ ಕೈಗೊಳ್ಳುವ ಸಂಬಂಧ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ್ದಾರೆ.

 ಬೆಂಗಳೂರು : ವಿಧಾನಸೌಧದ ಆವರಣದಲ್ಲಿ ಆ.15ರಂದು ನಡೆಯಲಿರುವ ‘ಸ್ವಾತಂತ್ರ್ಯ ಹಬ್ಬ–2026’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಗತ್ಯ ಭದ್ರತೆ ಕೈಗೊಳ್ಳುವ ಸಂಬಂಧ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ್ದಾರೆ.

ಸ್ವಾತಂತ್ರ್ಯ ಹಬ್ಬದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಭದ್ರತೆ, ಸಂಚಾರ ವ್ಯವಸ್ಥೆ, ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನ, ವಾಹನ ನಿಲುಗಡೆ ಹಾಗೂ ಜನದಟ್ಟಣೆ ನಿರ್ವಹಣೆ ಸೇರಿದಂತೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

11 ಗಂಟೆಯಿಂದ ರಾತ್ರಿ 10 ರವರೆಗೆ ನಡೆಯಲಿರುವ ಕಾರ್ಯಕ್ರಮ

ವಿಧಾನಸೌಧದಲ್ಲಿ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10 ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ‘ದಿ ಪೀಪಲ್ಸ್ ಇಂಡಿಯಾ ಪೆರೇಡ್’, ವಿಧಾನಸೌಧದ ವಿಶೇಷ ಪ್ರವಾಸ, ಮಕ್ಕಳಿಗಾಗಿ ‘ಮಕ್ಕಳ ಮೇಳ’, ರಸಪ್ರಶ್ನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಕಚೇರಿ, ವಿವಿಧ ಜಿಲ್ಲೆಗಳ ಆಹಾರ ಮತ್ತು ಕರಕುಶಲ ಪ್ರದರ್ಶನಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಸಂಗೀತ ಕಾರ್ಯಕ್ರಮ ಹಾಗೂ ರಾತ್ರಿ ಪಟಾಕಿ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇರುವುದರಿಂದ ವಿಶೇಷ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸುಗಮ ಸಂಚಾರ ವ್ಯವಸ್ಥೆ, ಪಾದಚಾರಿಗಳ ಸುರಕ್ಷತೆ, ತುರ್ತು ಸೇವೆಗಳಿಗೆ ಅಗತ್ಯ ವ್ಯವಸ್ಥೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕೆ ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರ ಸುರಕ್ಷತೆಗೆ ಯಾವುದೇ ರೀತಿಯ ಲೋಪವಾಗದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶಿಸಿದರು. ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ನಾಳೆವರೆಗೂ ನೋಂದಣಿಗೆ ಅವಕಾಶ:

ಈ ಬಾರಿ ಅದ್ದೂರಿಯಾಗಿ ವಿಧಾನಸೌಧದ ಸುತ್ತಮುತ್ತ ಆಚರಿಸುವ ಸ್ವಾತಂತ್ರ್ಯಹಬ್ಬಕ್ಕೆ ಆ.14ರವರೆಗೂ ನೋಂದಣಿಗೆ ಅವಕಾಶವಿದೆ ಎಂದು ಜಿಬಿಎ ಮುಖ್ಯಆಯುಕ್ತ ಮಹೇಶ್ವರರಾವ್ ತಿಳಿಸಿದ್ದಾರೆ.

ಕ್ಯೂ ಆರ್ ಕೋಡ್, ಮೊಬೈಲ್ ಹಾಗೂ ವೆಬ್ ಮೂಲಕ 12 ಸಾವಿರ ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, ಕ್ಯೂರ್ ಆರ್ ಕೋಡ್ ಮೂಲಕ ನೋಂದಣಿ ಮಾಡಿಕೊಂಡ ನಂತರ ಆ ಹೆಸರನ್ನು ಆಯೋಜಕರು ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ನೋಂದಣಿಗೆ ಕಾಯುವಂತೆ ಸಂದೇಶ ಬರುತ್ತದೆ. ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವೆರೆಗೆ ನೋಂದಣಿ ಮಾಡಿಕೊಳ್ಳಲಾಗುತ್ತದೆ ಎಂದು ಅವರು ಕನ್ನಡಪ್ರಭಕ್ಕೆ ತಿಳಿಸಿದರು.