ರಾಜ್ಯದಲ್ಲಿ ಶಿಕ್ಷಣ, ಪರೀಕ್ಷೆಯ ವ್ಯವಸ್ಥೆ ಸುಧಾರಣೆಗೆ ಸಮಿತಿ

Published : Aug 28, 2026, 10:02 AM IST
vidhan soudha

ಸಾರಾಂಶ

ಜಿರಳೆ ಪಾರ್ಟಿ ಮತ್ತು ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಪರೀಕ್ಷಾ ಸುಧಾರಣೆ ವಿಚಾರವಾಗಿ ತಿಂಗಳೊಳಗೆ ವರದಿ ಸಲ್ಲಿಸುವಂತೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಸಭೆಯ ನಿರ್ದೇಶನದ ಭಾಗವಾಗಿ ಕರ್ನಾಟಕ ಸರ್ಕಾರ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ.

ಬೆಂಗಳೂರು : ಜಿರಳೆ ಪಾರ್ಟಿ ಮತ್ತು ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಪರೀಕ್ಷಾ ಸುಧಾರಣೆ ವಿಚಾರವಾಗಿ ತಿಂಗಳೊಳಗೆ ವರದಿ ಸಲ್ಲಿಸುವಂತೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಸಭೆಯ ನಿರ್ದೇಶನದ ಭಾಗವಾಗಿ ಕರ್ನಾಟಕ ಸರ್ಕಾರ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ.

ರಾಜ್ಯದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಶಿಕ್ಷಣ ಸುಧಾರಣೆಗಳ ಕುರಿತು ವರದಿ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್‌ ಅಧ್ಯಕ್ಷತೆಯಲ್ಲಿ ಐವರು ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿ ರಚಿಸಲಾಗಿದೆ.

ಈ ಉಪ ಸಮಿತಿಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ. ವರದಿ ನೀಡಲು ಈ ಉಪಸಮಿತಿಗೆ 1 ತಿಂಗಳ ಕಾಲಾವಕಾಶ ನೀಡಲಾಗಿದೆ.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಸಿಜೆಪಿ ಮತ್ತು ಜಾರ್ಖಂಡ್‌ನಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷಾ ವೈಫಲ್ಯದ ವಿರುದ್ಧದ ವಿದ್ಯಾರ್ಥಿಗಳಿಂದ ವ್ಯಕ್ತವಾದ ಭಾರೀ ಹೋರಾಟದ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ತಜ್ಞರ ಜತೆಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸುವಂತೆ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಿಗೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೂಚನೆ ನೀಡಲಾಗಿತ್ತು.

ಯಾವ್ಯಾವ ವಿಚಾರ ಚರ್ಚೆ?:

ಈ ಉಪಸಮಿತಿಯು ಪ್ರಶ್ನೆ ಪತ್ರಿಕೆ ಸೋರಿಕೆಗೆ ತಡೆ, ರಾಜ್ಯ ಪರೀಕ್ಷೆಗಳು ಮತ್ತು ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಖಚಿತಪಡಿಸುವುದು, ನಿಗದಿತ ಸಮಯಕ್ಕೆ ಪರೀಕ್ಷೆ ಮತ್ತು ನೇಮಕಾತಿ ವೇಳಾಪಟ್ಟಿ ಸಿದ್ಧಪಡಿಸುವುದು, ಶಿಕ್ಷಣ ವೆಚ್ಚ, ಶುಲ್ಕ ಮತ್ತು ತರಬೇತಿ ನಿಯಂತ್ರಣ, ಖಾಸಗಿ ಶಿಕ್ಷಣ ಸಂಸ್ಥೆಗಳು ವಿಧಿಸುವ ಶುಲ್ಕಗಳ ನಿಯಂತ್ರಣ, ತರಬೇತಿ ಕೇಂದ್ರಗಳ ಮೇಲ್ವಿಚಾರಣೆ, ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಮೇಲಿನ ಶಿಕ್ಷಣದ ಆರ್ಥಿಕ ಹೊರೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಿದೆ.

ವಿವಿ ಮೂಲಸೌಲಭ್ಯ ಬಲವರ್ಧನೆಗೆ ಕ್ರಮ:

ಸರ್ಕಾರಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮೂಲಸೌಕರ್ಯ ಬಲಪಡಿಸುವುದು, ಶಿಕ್ಷಣದ ಗುಣಮಟ್ಟ ಸುಧಾರಣೆ, ಶಿಕ್ಷಕರ ಖಾಲಿ ಹುದ್ದೆಗಳ ಪರಿಹಾರ, ಪ್ರಯೋಗಾಲಯಗಳು, ಗ್ರಂಥಾಲಯಗಳು, ಹಾಸ್ಟೆಲ್‌ಗಳು ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲಿದೆ. ಪಠ್ಯಕ್ರಮ, ಕೌಶಲ್ಯ ಮತ್ತು ಉದ್ಯೋಗದೊಂದಿಗೆ ಸಂಪರ್ಕ, ಉದ್ಯಮದ ಅವಶ್ಯಕತೆಗಳೊಂದಿಗೆ ಪಠ್ಯಕ್ರಮ ಜೋಡಿಸುವುದು, ಕೌಶಲ್ಯ ಅಭಿವೃದ್ಧಿ, ಅಪ್ರೆಂಟಿಸ್‌ಶಿಪ್‌ಗಳು ಮತ್ತು ಇಂಟರ್ನ್‌ಶಿಪ್‌ಗಳನ್ನು ಉತ್ತೇಜಿಸುವುದು, ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮದ ನಡುವಿನ ಪಾಲುದಾರಿಕೆ ಬಲಪಡಿಸಲಿದೆ.

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಸಮಾಲೋಚನೆ ಮತ್ತು ವಿದ್ಯಾರ್ಥಿ ಬೆಂಬಲ ವ್ಯವಸ್ಥೆಗಳನ್ನು ಬಲಪಡಿಸುವುದು, ಶೈಕ್ಷಣಿಕ ಮತ್ತು ಪರೀಕ್ಷಾ ಸಂಬಂಧಿತ ಒತ್ತಡ ಪರಿಹರಿಸುವುದು, ಕೋಚಿಂಗ್ ಹಬ್‌ಗಳು, ಹಾಸ್ಟೆಲ್‌ಗಳು ಮತ್ತು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆ ಕ್ರಮಗಳನ್ನು ಅಭಿವೃದ್ಧಿಪಡಿಸಲಿದೆ.

ವಿದ್ಯಾರ್ಥಿ ವೇತನಗಳು ಮತ್ತು ಆರ್ಥಿಕ ಸಹಾಯ ಬಲಪಡಿಸುವುದು, ಹಾಸ್ಟೆಲ್ ಸಾಮರ್ಥ್ಯ ವಿಸ್ತರಿಸುವುದು, ಹುಡುಗಿಯರ ಶಿಕ್ಷಣವನ್ನು ಉತ್ತೇಜಿಸುವುದು ಮತ್ತು ಎಸ್ಸಿ-ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ ಮತ್ತು ಮೊದಲ ತಲೆಮಾರಿನ ಕಲಿಕಾ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಸೂಕ್ತ ಬೆಂಬಲ ಖಚಿತಪಡಿಸಲಿದೆ.

ಈ ಉಪಸಮಿತಿಯು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಸಂಸ್ಥೆಗಳು ಮತ್ತು ಇತರರೊಂದಿಗೆ ಸಮಾಲೋಚನೆ ಕೈಗೊಳ್ಳಲಿದೆ. ಈ ಕಾರ್ಯಕ್ಕೆ ಸಹಾಯ ಮಾಡಲು ಆಯಾಯ ಕ್ಷೇತ್ರಗಳ ವಿಷಯ ತಜ್ಞರನ್ನು ಆಯ್ಕೆ ಮಾಡಿಕೊಳ್ಳಲು ಉಪಸಮಿತಿಗೆ ಅವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಿಕ್ಷಣ, ಪರೀಕ್ಷಾ ವ್ಯವಸ್ಥೆಯಲ್ಲಿ ಅಕ್ರಮ ಬಗ್ಗೆ ಇತ್ತೀಚೆಗೆ ದಿಲ್ಲಿ, ಜಾರ್ಖಂಡ್‌, ಬಿಹಾರದಲ್ಲಿ ಜೆನ್‌ಝೀಗಳ ಪ್ರತಿಭಟನೆ

ಈ ಬಗ್ಗೆ ಇತ್ತೀಚಿನ ಸಿಡಬ್ಲ್ಯುಸಿ ಸಭೆಯಲ್ಲಿ ಗಹನ ಚರ್ಚೆ । ಕೈ ಆಡಳಿತದ ರಾಜ್ಯಗಳಲ್ಲೂ ಸುಧಾರಣೆಗೆ ನಿರ್ಧಾರ

ಶಿಕ್ಷಣ ತಜ್ಞರ ಜತೆ ಸಮಾಲೋಚಿಸಿ ವ್ಯವಸ್ಥೆ ಸುಧಾರಣೆಗೆ ಒಂದು ತಿಂಗಳಲ್ಲಿ ವರದಿ ಸಲ್ಲಿಕೆಗೆ ಸಿಎಂ ಡಿಕೆಗೆ ಸೂಚನೆ

ಸಚಿವ ಖಾದರ್‌ ನೇತೃತ್ವದಲ್ಲಿ ಸಮಿತಿ । ಪ್ರಶ್ನೆಪತ್ರಿಕೆ ಸೋರಿಕೆ, ಶಿಕ್ಷಣ ಶುಲ್ಕ ನಿಯಂತ್ರಣದ ವಿಷಯ ಪರಿಶೀಲನೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮೈಸೂರು ರೈಲ್ವೆ ವಿಭಾಗಕ್ಕೆ ಅ.1ಕ್ಕೆ ಮಂಗ್ಳೂರು ಸೇರ್ಪಡೆ
ಸಾವಿರಾರು ಜನರು ಗುಳೇ ಹೋದರೂ ಕೂಡ್ಲಿಗಿ, ಕೊಟ್ಟೂರು ‘ಬರ ಪೀಡಿತವಲ್ಲ’