;Resize=(412,232))
ವೆಂಕಟೇಶ್ ಕಲಿಪಿ
ಬೆಂಗಳೂರು : ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ಪದವೀಧರನಿಗೆ ಮೊಬೈಲ್ ಟವರ್ ಹತ್ತುವಂತೆ ಹೇಳಿ ಅವಮಾನಿಸಿದ್ದಷ್ಟೇ ಅಲ್ಲ, ಆತ ರಾಜೀನಾಮೆ ನೀಡಿದ ನಂತರವೂ ನೇಮಕಾತಿ ವೇಳೆ ಇಟ್ಟಿದ್ದ 90 ಸಾವಿರ ರು. ಭದ್ರತಾ ಠೇವಣಿ ಹಿಂದಿರುಗಿಸದೆ ಒಂಬತ್ತು ವರ್ಷ ಸತಾಯಿಸಿದ ಖಾಸಗಿ ಕಂಪನಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಜತೆಗೆ, ಭದ್ರತಾ ಠೇವಣಿ ಹಿಂದಿರುಗಿಸಲು ಕಂಪನಿಗೆ ತಾಕೀತು ಮಾಡಿದ್ದ ಅಧೀನ ನ್ಯಾಯಾಲಯದ ಆದೇಶವನ್ನೂ ಎತ್ತಿಹಿಡಿದಿದೆ.
ಅಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಯುನಿಟೆಲ್ ವರ್ಕ್ಸ್ ವೈರ್‌ಲೆಸ್ ಸೊಲ್ಯೂಷನ್ಸ್ ಲಿಮಿಟೆಡ್ ಸಲ್ಲಿಸಿದ್ದ ಸಿವಿಲ್ ಮರು ಪರಿಶೀಲನಾ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ ಈ ಆದೇಶ ಮಾಡಿದೆ.
ನೇಮಕಾತಿ ಆದೇಶದ ಪ್ರಕಾರ ಬೆಂಗಳೂರು ನಿವಾಸಿ ಎಸ್.ಎಸ್.ಕಿರಣ್ ಕುಮಾರ್ ಟ್ರೈನಿ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ ಕಂಪನಿ ಅಂತಹ ಕರ್ತವ್ಯಕ್ಕೆ ನಿಯೋಜಿಸದೆ ಮೊಬೈಲ್ ಟವರ್ ಹತ್ತುವ ಕೆಲಸ ನೀಡಿ ಕಿರಣ್‌ಗೆ ಅವಮಾನಿಸಿದೆ. ಈ ರೀತಿ ಕೆಟ್ಟದಾಗಿ ನಡೆಸಿಕೊಳ್ಳುವ ಜೊತೆಗೆ, ನೇಮಕಾತಿ ಆದೇಶಕ್ಕೆ ಸಂಪೂರ್ಣವಾಗಿ ವಿರುದ್ಧವಾದ ಅನುಚಿತ ಕೆಲಸಕ್ಕೂ ನಿಯೋಜಿಸಿದೆ. ಇದರಿಂದ ಬೇಸತ್ತು ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದ ಕಿರಣ್ ನಡೆ ಸಂಪೂರ್ಣವಾಗಿ ಸಮರ್ಥನೀಯವಾಗಿದೆ. ಟೆಲಿಕಾಂ ಎಂಜಿನಿಯರ್ ಕೌಶಲ್ಯರಹಿತ ಕಾರ್ಮಿಕನಂತೆ ಮೊಬೈಲ್ ಟವರ್ ಹತ್ತಬಾರದು ಎಂದು ನ್ಯಾಯಪೀಠ ನುಡಿದಿದೆ.
ರಾಜೀನಾಮೆ ಅಂಗೀಕಾರವಾದ ಕೂಡಲೇ ನೇಮಕಾತಿ ವೇಳೆ ತಾನು ಠೇವಣಿಯಿಟ್ಟ ಭದ್ರತಾ ಹಣ ವಾಪಸ್ಸಾಗುತ್ತದೆ ಎಂಬ ವಿಶ್ವಾಸವನ್ನು ಕಿರಣ್ ಹೊಂದಿದ್ದರು. ಆದರೆ, ಇಲ್ಲದ ನೆಪ ಹೇಳಿಕೊಂಡು ಭದ್ರತಾ ಠೇವಣಿಯನ್ನು ಕಂಪನಿ ಹಿಂದಿರುಗಿಸಿಲ್ಲ. ಇದರಿಂದ ಕಿರಣ್ ಅನಿವಾರ್ಯವಾಗಿ ಕೋರ್ಟ್ ಮೊರೆ ಹೋದರು. ದುರದೃಷ್ಟವಶಾತ್, ಕಂಪನಿ ತನ್ನ ತಪ್ಪು ಅರಿತುಕೊಳ್ಳಲಿಲ್ಲ. ಬದಲಾಗಿ ಸುಳ್ಳು ಮತ್ತು ದುರ್ಬಲ ಅಂಶಗಳನ್ನು ಮುಂದಿಟ್ಟುಕೊಂಡು ಮೊಕದ್ದಮೆ ಹೂಡಿದೆ. ಹಾಗಾಗಿ ಅಧೀನ ನ್ಯಾಯಾಲಯದ ಆದೇಶ ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ, ಕಂಪನಿಯ ಅರ್ಜಿ ತಿರಸ್ಕರಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಯುನಿಟೆಲ್ ಲಿಮಿಟೆಡ್ ತ್ರಾಂತಿಕ ಎಂಜಿನಿಯರ್ ಹುದ್ದೆಗೆ ನೇಮಕವಾಗುವ ಅಭ್ಯರ್ಥಿಗೆ ತರಬೇತಿ ಅವಧಿಯಲ್ಲಿ ವಾರ್ಷಿಕ 1.56 ಲಕ್ಷ ರು. ವೇತನ ಹಾಗೂ ತರಬೇತಿ ಯಶಸ್ವಿಯಾಗಿ ಪೂರೈಸಿದರೆ ವಾರ್ಷಿಕ 4.17 ಲಕ್ಷ ರು. ವೇತನ ನಿಗದಿಪಡಿಸಿತ್ತು. ಆ ಹುದ್ದೆಗೆ ನೇಮಕಗೊಂಡಿದ್ದ ಎಂಜಿನಿಯರಿಂಗ್ ಪದವೀಧರ ಕಿರಣ್‌ಗೆ ಕಂಪನಿ ಗುತ್ತಿಗೆ ಆಧಾರದಲ್ಲಿ ಆರು ತಿಂಗಳ ಕಾಲ ಪ್ರೊಬೆಷನರಿ ಅವಧಿ ನಿಗದಿಪಡಿಸಿತ್ತು. ಮೇಲಾಗಿ ಭದ್ರತಾ ಖಾತರಿಯಾಗಿ 90 ಸಾವಿರ ರು. ಠೇವಣಿ ಪಡೆದಿತ್ತು.
ತರಬೇತಿ ಅವಧಿಯಲ್ಲಿ ಕಾರ್ಯವೊಂದರ ನಿಮಿತ್ತ ಮೊಬೈಲ್ ಟವರ್ ಹತ್ತುವಂತೆ ಕಿರಣ್‌ಗೆ ಕಂಪನಿ ನಿರ್ದೇಶಿಸಿತ್ತು. ಇದರಿಂದ ಮನನೊಂದ ಕಿರಣ್, ತನಗೆ ತೀವ್ರತರದ ಅವಮಾನವಾಗಿದೆ ಎಂದು ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ಅದನ್ನು ಕಂಪನಿ ಒಪ್ಪಿಕೊಂಡಿತ್ತು. ಆದರೆ, ನೇಮಕ ವೇಳೆ ಕಿರಣ್ ಒದಗಿಸಿದ್ದ 90 ಸಾವಿರ ರು. ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಂಡಿತ್ತು. ಇದರಿಂದ ಬಡ್ಡಿ ಸಹಿತ ಠೇವಣಿ ಹಿಂಪಡೆಯಲು ಕಂಪನಿ ವಿರುದ್ಧ ಕಿರಣ್ ನ್ಯಾಯಾಲಯಕ್ಕೆ ಸಿವಿಲ್ ರಿಕವರಿ ಸೂಟ್ (ದಾವೆ) ಹೂಡಿದ್ದರು. ಅದರ ವಿಚಾರಣೆ ನಡೆಸಿದ್ದ ನಗರದ 16ನೇ ಹೆಚ್ಚುವರಿ ಸಣ್ಣ ವ್ಯಾಜ್ಯಗಳ ನ್ಯಾಯಾಲಯ, ಕಿರಣ್‌ಗೆ ಭದ್ರತಾ ಠೇವಣಿ ಹಿಂದಿರುಗಿಸುವಂತೆ ಕಂಪನಿಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್‌ಗೆ ಮೆಟ್ಟಿಲೇರಿತ್ತು.
ಕಂಪನಿ ಪರ ವಕೀಲರು, ತರಬೇತಿ ಅವಧಿಯಲ್ಲಿ ತೃಪ್ತಿಕರವಾಗಿ ಕಿರಣ್ ಕೆಲಸ ಮಾಡದೆ ಮತ್ತು ದಿಢೀರ್ ಆಗಿ ರಾಜೀನಾಮೆ ನೀಡಿ ಅನಧಿಕೃತವಾಗಿ ಕರ್ತವ್ಯದಿಂದ ದೂರ ಉಳಿದು, ಕಂಪನಿಗೆ ನಷ್ಟ ಉಂಟು ಮಾಡಿದ್ದಾರೆ. ಇದರಿಂದ ಅವರ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಅಂಶ ಪರಿಗಣಿಸಲು ಅಧೀನ ನ್ಯಾಯಾಲಯ ವಿಫಲವಾಗಿದೆ. ನೇಮಕಾತಿ ಪತ್ರದ ಷರತ್ತುಗಳ ಅನ್ವಯ ಭದ್ರತಾ ಠೇವಣಿ ಹಾಕಿಕೊಳ್ಳಲು ಕಂಪನಿ ಹಕ್ಕು ಇದೆ ಎಂದು ವಾದಿಸಿದ್ದರು.