ಸಿಇಟಿ ಪಠ್ಯೇತರ ಎಡವಟ್ಟು ಸಮಗ್ರ ತನಿಖೆ: ಶೀಘ್ರ ತಂಡ

Published : May 02, 2024, 10:04 AM IST
Madyamik 2024 complete medha talika check the list below

ಸಾರಾಂಶ

ಸಿಟಿಇ ಪರೀಕ್ಷೆಯ ಪಠ್ಯೇತರ ಪ್ರಶ್ನೆಗಳಿಂದ ಉಂಟಾಗಿದ್ದ ಗೊಂದಲ ಬಗೆಹರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದ ಸರ್ಕಾರ ಇದೀಗ ಸಮಗ್ರ ತನಿಖೆಗೆ ಮುಂದಾಗಿದೆ.

ಲಿಂಗರಾಜು ಕೋರಾ 

 ಬೆಂಗಳೂರು : ಸಿಟಿಇ ಪರೀಕ್ಷೆಯ ಪಠ್ಯೇತರ ಪ್ರಶ್ನೆಗಳಿಂದ ಉಂಟಾಗಿದ್ದ ಗೊಂದಲ ಬಗೆಹರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದ ಸರ್ಕಾರ ಇದೀಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಯಾರಿಸಿದ ಸಿಇಟಿ ಪ್ರಶ್ನೆಪತ್ರಿಕೆಗಳಲ್ಲಿ 50 ಪಠ್ಯೇತರ ಪ್ರಶ್ನೆಗಳು ಸೇರುವ ಎಡವಟ್ಟು ಮಾಡಿದ್ಯಾರು? ಅಧಿಕಾರಿಗಳು ಎಡವಿದ್ದಾದರೂ ಎಲ್ಲಿ? ಇದರ ಹಿಂದೆ ಯಾರದ್ದಾದರೂ ಕೈವಾಡ ಇದೆಯಾ ಎಂಬ ಬಗ್ಗೆ ಸಮಗ್ರ ತನಿಖೆಗೆ ಮುಂದಾಗಿದೆ.

ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು ಪ್ರತ್ಯೇಕ ತಂಡ ರಚಿಸಿ ಶೀಘ್ರ ಅಧಿಕೃತ ಆದೇಶ ಮಾಡಲಿದೆ ಎಂದು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.

3.5 ಲಕ್ಷ ವಿದ್ಯಾರ್ಥಿಗಳು ಬರೆದ ಪರೀಕ್ಷೆಯನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಬೇಕಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಲ್ಲಿ ಎಡವಿದೆ. ಇದಕ್ಕೆ ಯಾವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನ ಕಾರಣ, ಪಶ್ನೆ ಪತ್ರಿಕೆ ರಚನಾ ಸಮಿತಿಯ ಲೋಪವೇನಾದರೂ ಇದೆಯಾ ಅಥವಾ ವಿದ್ಯಾರ್ಥಿ, ಪೋಷಕ ಸಂಘಟನೆಗಳು ಅನುಮಾನಿಸಿರುವಂತೆ ರಾಜ್ಯಪಠ್ಯಕ್ರಮ ಹೊರತಾದ ಶಾಲೆಗಳೊಂದಿಗೆ ಕೈಜೋಡಿಸಿ ಆ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಈ ಅಕ್ರಮ ನಡೆಸಲಾಗಿದೆಯಾ? ಪ್ರಾಧಿಕಾರ ಮತ್ತು ಪಿಯು ಇಲಾಖೆ ನಡುವಿನ ಸಮನ್ವಯತೆ ಕೊರತೆಯಿಂದ ಈ ಸಮಸ್ಯೆಯಾಗಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಹೀಗೆ ಯಾವ ಕಾರಣದಿಂದ ಎಡವಟ್ಟಾಗಿದೆ ಎಂಬ ಬಗ್ಗೆ ಎಲ್ಲ ಆಯಾಮಗಳಲ್ಲೂ ವಿವರವಾದ ತನಿಖೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧಾರ ಕೈಗೊಂಡಿದೆ.

ತಾವು ಮಾಡದ ತಪ್ಪಿಗೆ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಬಾರದು, ಅವರಿಗೆ ಸೂಕ್ತ ನ್ಯಾಯ ಒದಗಿಸಬೇಕೆಂಬುದು ಸರ್ಕಾರದ ಮೊದಲ ಆದ್ಯತೆಯಾಗಿತ್ತು. ಹಾಗಾಗಿ ಸಿಇಟಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಈ ನಾಲ್ಕೂ ವಿಷಯಗಳಲ್ಲಿ ಒಟ್ಟು 50 ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದು ತಜ್ಞರ ಸಮಿತಿಯ ವರದಿಯಲ್ಲಿ ಸಾಭೀತಾಗಿದ್ದರಿಂದ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳನ್ನು ಮಾತ್ರ ಸಿಟಿಇ ಪರೀಕ್ಷಾ ಮೌಲ್ಯಮಾಪನಕ್ಕೆ ಪರಿಗಣಿಸಿ ಬರುವ ಫಲಿತಾಂಶವನ್ನು ರ್‍ಯಾಂಕಿಂಗ್‌ಗೆ ಪರಿಗಣಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಆದೇಶಿಸಲಾಗಿದೆ.

ಈ ಲೋಪಕ್ಕೆ ಹೇಗಾಯಿತು, ಕಾರಣಕರ್ತರು ಯಾರು ಎಂದು ಪತ್ತೆಹಚ್ಚಿ ಕ್ರಮ ಜರುಗಿಸುವುದು ನಮ್ಮ ಮುಂದಿನ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ತನಿಖೆಗೆ ಶೀಘ್ರ ಆದೇಶ ಮಾಡಲಾಗುವುದು ಎಂದು ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

 ಅಧಿಕಾರಿಗಳ ಅಮಾನತಿನಲ್ಲಿಟ್ಟು ತನಿಖೆ ನಡೆಸಿ:  

ಏ.18 ಮತ್ತು 19ರಂದು ಪರೀಕ್ಷೆ ನಡೆದ ದಿನವೇ ವಿದ್ಯಾರ್ಥಿಗಳು ಮತ್ತು ಆಯಾ ವಿಷಯದ ವಿವಿಧ ಪಿಯು ಉಪನ್ಯಾಸಕರೇ 50ಕ್ಕೂ ಹೆಚ್ಚು ಪಠ್ಯೇತರ ಪ್ರಶ್ನೆಗಳನ್ನು ಕೇಳಿ ದೊಡ್ಡ ಲೋಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಎಬಿವಿಪಿ, ಎಐಡಿಎಸ್‌ಒ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು, ಖಾಸಗಿ ಶಾಲಾ, ಕಾಲೇಜು ಪೋಷಕರ ಸಮನ್ವಯ ವೇದಿಕೆ, ಸರ್ಕಾರಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಆಗಿರುವ ಗೊಂದಲ ಸರಿಪಡಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರ ವಿಷಯವಾರು ತಜ್ಞರ ಸಮಿತಿ ರಚಿಸಿ ವರದಿ ಪಡೆದು, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದೆ. ಈಗ ಮುಂದಿನ ಹಂತದಲ್ಲಿ ತಪ್ಪಿತಸ್ಥರ ಪತ್ತೆಗೆ ತನಿಖೆ ನಡೆಸಲು ಮುಂದಾಗಿದೆ.

ಸರ್ಕಾರದ ಮೊದಲ ಆದ್ಯತೆ ಸಿಇಟಿಯಲ್ಲಿ ಆಗಿದ್ದ ಲೋಪ ಸರಿಪಡಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದಾಗಿತ್ತು. ಅದನ್ನು ಸುಸೂತ್ರವಾಗಿ ನಿರ್ವಹಿಸಿದ್ದೇವೆ. ಮುಂದಿನ ಹಂತದಲ್ಲಿ ಈ ಲೋಪಕ್ಕೆ ಕಾರಣ ಏನು? ಯಾರು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

- ಶ್ರೀಕರ್‌, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

 ಈ ಬಾರಿ ಸಿಟಿಇ ರ್‍ಯಾಂಕಿಂಗ್‌ ಹೇಗೆ? 

ಸಿಇಟಿಯಲ್ಲಿ 50 ಪಠ್ಯೇತರ ಪ್ರಶ್ನೆಗಳನ್ನು ಕೈಬಿಟ್ಟಿರುವುದರಿಂದ ಈ ಬಾರಿ ರ್‍ಯಾಂಕಿಂಗ್‌ ಹೇಗೆ ನೀಡಲಾಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಸರ್ಕಾರದ ಆದೇಶದಂತೆ ಸಿಇಟಿಯ ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆಯಲ್ಲಿ ಕೇಳಲಾಗಿದ್ದ ಒಟ್ಟು 240 ಪ್ರಶ್ನೆಗಳ (ಪ್ರತಿ ವಿಷಯದಕ್ಕೆ 60ರಂತೆ) ಬದಲು 50 ಪಠ್ಯೇತರ ಪ್ರಶ್ನೆಗಳನ್ನು ಕೈಬಿಟ್ಟು 190 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಬರೆದಿರುವ ಉತ್ತರಗಳನ್ನು ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ. 190 ಪ್ರಶ್ನೆಗಳಲ್ಲಿ ಸರಿ ಉತ್ತರ ಬರೆದು ವಿದ್ಯಾರ್ಥಿಗಳು ಪಡೆದ ಒಟ್ಟು ಅಂಕದ ಶೇ.50ರಷ್ಟನ್ನು ದ್ವಿತೀಯ ಪಿಯುಸಿ ಫಲಿತಾಂಶ ಶೇ.50ರಷ್ಟು ಅಂಕಗಳೊಂದಿಗೆ ಸೇರಿಸಿ ರ್‍ಯಾಂಕಿಂಗ್‌ ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು