;Resize=(412,232))
ಉಮಾಶಂಕರ ಕಾರ್ಯ
ಬೆಂಗಳೂರು : ಮೆಟ್ರೋ ರೈಲು ಸಂಚಾರದ ಉದ್ದೇಶವೇ ಮೊದಲ ಮೈಲಿ, ಕೊನೆಯ ಮೈಲಿ ಸಂಪರ್ಕ ಬೆಸೆಯುವುದು. ಆದರೆ, ಮೆಜೆಸ್ಟಿಕ್ ಕಡೆಯಿಂದ ವಿಜಯನಗರ ಮಾರ್ಗವಾಗಿ ಬರುವ ಮೆಟ್ರೋ ಪ್ರಯಾಣಿಕರು ಬ್ಯಾಟರಾಯನಪುರ, ಸ್ಯಾಟಲೈಟ್ ಬಸ್ ನಿಲ್ದಾಣವನ್ನು ಸುಲಭವಾಗಿ ತಲುಪಲು ಸಾಧ್ಯವಾಗದೆ ಪ್ರತಿನಿತ್ಯ ಪರದಾಡುತ್ತಿದ್ದಾರೆ.
ದೀಪಾಂಜಲಿನಗರ ಮೆಟ್ರೋ ನಿಲ್ದಾಣದಿಂದ ಸಮೀಪದ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ತೆರಳಲು ಸಮರ್ಪಕ ಪಾದಚಾರಿ ರಸ್ತೆಯ ಸಂಪರ್ಕಕ್ಕಾಗಿ ಪ್ರಯಾಣಿಕರು ನಡೆದು ಹೋಗಲು ಪಾದಚಾರಿ ರಸ್ತೆ ಇಲ್ಲ. ಮೆಟ್ರೋ ಪ್ರಯಾಣಿಕರು ಆಟೋಗಳನ್ನೇ ಅವಲಂಬಿಸಿದ್ದಾರೆ. ಆಟೋಗಳು ಕೂಗಳತೆ ದೂರಕ್ಕೆ ದುಪ್ಪಟ್ಟು ದರ ಕೇಳುವುದರಿಂದ ಪ್ರಯಾಣಿಕರು ಪಾವತಿಸಿ ಬಸ್ ನಿಲ್ದಾಣ ತಲುಪುವಂತಾಗಿದೆ.
ಬಿಎಂಆರ್‌ಸಿಎಲ್ ಅಧಿಕಾರಿಗಳು ಪ್ರತಿ ಸಭೆಯಲ್ಲೂ ಮೊದಲ ಮೈಲು, ಕೊನೆಯ ಮೈಲಿ ಸಂಪರ್ಕ (ಬಸ್ ನಿಲ್ದಾಣಕ್ಕೂ ಮೆಟ್ರೋ ನಿಲ್ದಾಣಕ್ಕೂ ಸಂಪರ್ಕ) ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಿ ಎಂದು ಎಂಜಿನಿಯರ್‌ಗಳಿಗೆ ಹಲವು ಬಾರಿ ತಾಕೀತು ಮಾಡಿದರೂ ಇಂತಹ ಸಮಸ್ಯೆಗಳು ಅಲ್ಲಲ್ಲಿ ಕಂಡು ಬರುತ್ತಿವೆ.
ಸದಾ ವಾಹನಗಳಿಂದ ತುಂಬಿರುವ ಮೈಸೂರು ರಸ್ತೆಯಲ್ಲಿ ಅನತಿ ದೂರದ ಬಸ್ ನಿಲ್ದಾಣಕ್ಕೆ ನಡೆದು ಹೋಗಲು ಸ್ಥಳಾವಕಾಶವೇ ಇಲ್ಲ. ವಿಜಯನಗರದಿಂದ ಬರುವ ಮೆಟ್ರೋ ಪ್ರಯಾಣಿಕರು ದೀಪಾಂಜಲಿನಗರ ನಿಲ್ದಾಣದಲ್ಲಿ ಬಂದಿಳಿದರೆ ಬ್ಯಾಟರಾಯನಪುರಕ್ಕೆ ನಡೆದು ಹೋಗಲು ಅವಕಾಶವೇ ಇಲ್ಲ.
ಈ ಮೆಟ್ರೋ ನಿಲ್ದಾಣದಿಂದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಮೇಲ್ಸೇತುವೆ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ, ಇಲ್ಲಿ ಪಾದಚಾರಿ ರಸ್ತೆ ನಿರ್ಮಾಣಕ್ಕೆ ಅವಕಾಶವನ್ನೇ ಮಾಡಿಲ್ಲ. ಇದರಿಂದಾಗಿ ವಿಜಯನಗರ, ಚಂದ್ರಾ ಬಡಾವಣೆ ಪ್ರದೇಶಗಳಿಂದ ಬರುವ ಪ್ರಯಾಣಿಕರಿಗೆ ಅನಾನುಕೂಲಗಳೇ ಹೆಚ್ಚಿವೆ.
ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮೈಸೂರು ರಸ್ತೆಯ ಎಡಭಾಗಕ್ಕೆ ರಸ್ತೆ ದಾಟಲು ಪಾಲಿಕೆಯಿಂದ ಚಿಕ್ಕದೊಂದು ಸ್ಕೈ ವಾಕ್ ನಿರ್ಮಾಣ ಮಾಡಲಾಗಿದೆ. ಈ ಸ್ಕೈ ವಾಕ್‌ನಿಂದ ಎರಡೂ ಕಡೆ ಅಂದರೆ, ದೀಪಾಂಜಲಿನಗರ ಮೆಟ್ರೋ ನಿಲ್ದಾಣ, ಬ್ಯಾಟರಾಯನಪುರ ಸ್ಯಾಟಲೈಟ್ ಬಸ್ ನಿಲ್ದಾಣ ಎರಡೂ ಕಡೆಗೂ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ.
ದೀಪಾಂಜಲಿನಗರ ಮೆಟ್ರೋ ನಿಲ್ದಾಣದಿಂದ ಕೆ.ಆರ್.ಮಾರುಕಟ್ಟೆಗೆ ಹೋಗಬೇಕಾದವರು ಬಿಎಚ್‌ಇಎಲ್ ಬಸ್ ನಿಲ್ದಾಣಕ್ಕೆ ಬರಲು ನಡೆದು ಬರಬೇಕು. ಕೆಂಗೇರಿ ಬಸ್ ನಿಲ್ದಾಣದಿಂದ ಬರುವ ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್ ಕಡೆಗೆ ಹೋಗುವ ಬಸ್‌ಗಳು ಮೆಟ್ರೋ ನಿಲ್ದಾಣದ ಬಳಿ ನಿಲ್ಲುವುದಿಲ್ಲ.
ಇದು ಆಟೋಗಳಿಗೆ ವರದಾನವಾಗಿದ್ದು, ಕೇವಲ ಅನತಿ ದೂರದ ಪ್ರಯಾಣಕ್ಕೆ 40 ರು. ದರ ವಸೂಲಿ ಮಾಡುತ್ತಿದ್ದಾರೆ. ಒಂದೊಂದು ಬಾರಿ 50ರಿಂದ 60 ರು.ಗಳವರೆಗೂ ಪಡೆಯುತ್ತಾರೆ. ನೀವು ಇಷ್ಟು ಮೊತ್ತ ಪಾವತಿಸದಿದ್ದರೆ, ಗಂಟೆಗಟ್ಟಲೆ ಕಾಯುತ್ತಾ ನಿಲ್ಲಬೇಕು.
ಮೆಟ್ರೋ ಪ್ರಯಾಣಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲೆಂದೇ ಹಲವು ಬಾರಿ ಸಭೆಗಳನ್ನು ನಡೆಸಿದ್ದೇನೆ. ಮೊದಲ ಮೈಲಿ ಹಾಗೂ ಕೊನೆಯ ಮೈಲಿ ಸಂಪರ್ಕ ಕಲ್ಪಿಸದ ಹೊರತು ಮೆಟ್ರೋ ವ್ಯವಸ್ಥೆ ಪೂರ್ಣವಾಗಲಾರದು. ದೀಪಾಂಜಲಿನಗರ ಮೆಟ್ರೋ ನಿಲ್ದಾಣದಿಂದ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬರಲು ಈ ಸ್ಥಳದಲ್ಲಿ ಪಾದಚಾರಿ ಮೇಲ್ಸೇತುವೆಯನ್ನು ನಿರ್ಮಿಸುವುದು ಅತ್ಯುತ್ತಮ ಆಯ್ಕೆಯಾಗಿದೆ. ಆದಾಗ್ಯೂ, ಈ ಮೇಲ್ಸೇತುವೆಯಲ್ಲಿ ಪಿಲ್ಲರ್ ಹಾಕಲು ರಸ್ತೆಯಲ್ಲಿ ಸಾಕಷ್ಟು ಜಾಗವಿದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಮೆಟ್ರೋವನ್ನು ಬಸ್ ನಿಲ್ದಾಣದೊಂದಿಗೆ ವಿವಿಧ ಸಾರಿಗೆ ವ್ಯವಸ್ಥೆಯನ್ನು ಒಗ್ಗೂಡಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.