;Resize=(412,232))
ಬೆಂಗಳೂರು : ಪ್ರಜಾಪ್ರಭುತ್ವ ಸಂಸ್ಥೆಗಳನ್ನು ರಕ್ಷಿಸಲು, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗುವಂತೆ ಮಾಡಲು ಎಂದಿಗೂ ಪ್ರಶ್ನಿಸುವುದನ್ನು ನಿಲ್ಲಿಸಬೇಡಿ, ನಿಮ್ಮ ಮೌಲ್ಯಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ನಡೆದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (ಎನ್ಎಲ್ಎಸ್ಐಯು) 34ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಪ್ರಜೆಗಳಿಗೆ ಪ್ರಶ್ನಿಸಲು ಅವಕಾಶ ನೀಡಬೇಕು. ವಿಶ್ವದಾದ್ಯಂತ ಪ್ರಜಾಪ್ರಭುತ್ವ ಸಂಸ್ಥೆಗಳು ಸವಾಲುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಸಂವಿಧಾನ ರಕ್ಷಿಸುವ ವಿಶೇಷ ಜವಾಬ್ದಾರಿ ಯುವ ವಕೀಲರು ಮತ್ತು ನೀತಿ ನಿರೂಪಕರ ಮೇಲಿದೆ. ಎಲ್ಲರೂ ಸರ್ಕಾರದೊಂದಿಗೆ ಸಮ್ಮತಿಸುವುದೇ ಸಶಕ್ತ ಪ್ರಜಾಪ್ರಭುತ್ವವಲ್ಲ. ಪ್ರತಿಯೊಬ್ಬ ಪ್ರಜೆಗೂ ಸರ್ಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯವಿರುವುದೇ ನಿಜವಾದ ಸಶಕ್ತ ಪ್ರಜಾಪ್ರಭುತ್ವ ಎಂದು ಅಭಿಪ್ರಾಯಪಟ್ಟರು.
ಪದವೀಧರರು ವಿಚಾರಗಳನ್ನು ಪ್ರಶ್ನಿಸಬೇಕು, ಚರ್ಚಿಸಬೇಕು ಮತ್ತು ಸವಾಲು ಹಾಕಬೇಕು. ಅದೇ ಸಮಯದಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು. ಸಾಂವಿಧಾನಿಕ ತತ್ವಗಳು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಆಡಳಿತ, ನೀತಿ ನಿರೂಪಣೆ ಮತ್ತು ಸಾರ್ವಜನಿಕ ಜೀವನಕ್ಕೆ ಮಾರ್ಗದರ್ಶನ ನೀಡಬೇಕು ಎಂದರು.
ಭಾರತಕ್ಕೆ ಬೇಕಿರುವುದು ಹೆಚ್ಚಿನ ಸಂಖ್ಯೆಯ ವಕೀಲರಲ್ಲ. ಪ್ರಾಮಾಣಿಕತೆ, ಕರುಣೆ ಮತ್ತು ಧೈರ್ಯವಿರುವ ವಕೀಲರ ಅಗತ್ಯವಿದೆ. ಎಷ್ಟೇ ಕಷ್ಟವಾದರೂ ಸಾಮಾನ್ಯ ಜನರ ಸಂಕಷ್ಟಗಳನ್ನು ಅರ್ಥಮಾಡಿಕೊಂಡು ಸತ್ಯ, ನ್ಯಾಯ, ನಿಷ್ಠೆಗಾಗಿ ಧ್ವನಿ ಎತ್ತಬೇಕು ಎಂದು ಕಾನೂನು ಪದವೀಧರರಿಗೆ ಮುಖ್ಯಮಂತ್ರಿ ಕಿವಿ ಮಾತು ಹೇಳಿದರು.
ಕರ್ನಾಟಕ ಸರ್ಕಾರವು ಕಾನೂನು ಪದವೀಧರರಿಗೆ ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ ತರಬೇತಿ ನೀಡಲು ಮತ್ತು ಯುವ ವಕೀಲರಿಗೆ ನಿರಂತರ ಶಿಕ್ಷಣ ಒದಗಿಸಲು ಪ್ರತ್ಯೇಕ ಸಂಸ್ಥೆ ಸ್ಥಾಪಿಸಲಿದೆ. ಅಲ್ಲದೆ, ಎನ್ಎಲ್ಎಸ್ಐಯು ನಲ್ಲಿ ‘ಸ್ಟಾರ್ಟ್-ಅಪ್ ಲಾ ಕ್ಲಿನಿಕ್’ ಸ್ಥಾಪನೆಗೆ ಸರ್ಕಾರ ಬೆಂಬಲ ನೀಡಲಿದ್ದು, ಇಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಕೀಲರು ಯುವ ಉದ್ಯಮಿಗಳಿಗೆ ಉಚಿತ (ಪ್ರೋ ಬೋನೊ) ಕಾನೂನು ಸಲಹೆ ನೀಡಲಿದ್ದಾರೆ ಎಂದು ತಿಳಿಸಿದರು.
ನ್ಯಾಯಾಂಗದಲ್ಲಿ ಪ್ರಕರಣಗಳು ಬಾಕಿ ಉಳಿಯುತ್ತಿರುವ ಸವಾಲಿನ ಕುರಿತು ಪ್ರಸ್ತಾಪಿಸಿದ ಅವರು, ಭಾರತೀಯ ನ್ಯಾಯಾಲಯಗಳ ಮುಂದೆ ಕೋಟಿಗಟ್ಟಲೆ ಪ್ರಕರಣಗಳು ಬಾಕಿಯಿದ್ದು, ವ್ಯಕ್ತಿಗಳು ಮತ್ತು ಕುಟುಂಬಗಳು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ನಮಗೆ ಅದು ಕೇವಲ ಇನ್ನೊಂದು ಪ್ರಕರಣದ ಸಂಖ್ಯೆಯಾಗಿರಬಹುದು. ಆದರೆ ಆ ವ್ಯಕ್ತಿಗೆ ಅದು ಅವರ ಜೀವನವೇ ಆಗಿರಬಹುದು. ನ್ಯಾಯವನ್ನು ವೇಗವಾಗಿ, ಸರಳವಾಗಿ, ಕೈಗೆಟುಕುವಂತೆ ಮತ್ತು ಎಲ್ಲರಿಗೂ ಸಿಗುವಂತೆ ಮಾಡುವುದು ಅಗತ್ಯ ಎಂದು ಸಲಹೆ ನೀಡಿದರು.
ಈ ಪದವಿ ಪ್ರದಾನ ಸಮಾರಂಭದಲ್ಲಿ ಎನ್ಎಲ್ಎಸ್ಐಯು ಕುಲಾಧಿಪತಿಗಳೂ ಆದ ಸುಪ್ರಿಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನಟಿ ಅರುಂಧತಿ ನಾಗ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟಿನ ನ್ಯಾಯಮೂರ್ತಿಗಳು, ಎನ್ಎಲ್ಎಸ್ಐಯು ಕುಲಪತಿ ಡಾ. ಸುಧೀರ್ ಕೃಷ್ಣಸ್ವಾಮಿ, ಇತರೆ ಅಧಿಕಾರಿಗಳು, ಅಧ್ಯಾಪಕರು ಉಪಸ್ಥಿತರಿದ್ದರು.
ಪ್ರಜೆಗಳ ಆರ್ಥಿಕ ಬೆಳವಣಿಗೆಯಿಂದ ದೇಶದ ಅಭಿವೃದ್ಧಿ ಅಳೆಯಲ್ಲ: ಸಿಎಂ
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ಇದೆ. ಆದರೆ, ಅಭಿವೃದ್ಧಿಯನ್ನು ಕೇವಲ ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ ಮತ್ತು ಉದ್ಯೋಗದ ಮೂಲಕ ಅಳೆಯಬಾರದು, ಬದಲಿಗೆ ಪ್ರಜೆಗಳ ಘನತೆ, ಸ್ವಾತಂತ್ರ್ಯ, ಸಮಾನತೆ ಮತ್ತು ಭದ್ರತೆಯ ಮೂಲಕ ಅಳೆಯಬೇಕು ಎಂದು ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಮುಂದಿನ ಐದು ದಶಕಗಳಲ್ಲಿ ಭಾರತದ ಭವಿಷ್ಯ ರೂಪಿಸುವಲ್ಲಿ ಯುವಜನತೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ವಿದ್ಯಾರ್ಥಿಗಳು ತರಗತಿಗಳಿಂದ ಆಚೆಗೆ ನೋಡಿ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಸಾಮಾನ್ಯ ಕುಟುಂಬಗಳು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಂಡು ಪರಿಹಾರಗಳನ್ನು ಸಂಶೋಧಿಸುವಂತೆ ಸಲಹೆ ನೀಡಿದರು.
ಪದವಿ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಅಭಿನಂದಿಸುವೆ. ತಾವು ಕೂಡ ಒಮ್ಮೆ ವಕೀಲರಾಗಬೇಕೆಂದು ಬಯಸಿದ್ದೆ. ಆದರೆ, ವಿದ್ಯಾರ್ಥಿಯಾಗಿದ್ದಾಗಲೇ ಪಕ್ಷದ ಟಿಕೆಟ್ ದೊರೆತಿದ್ದರಿಂದ ರಾಜಕೀಯವು ತಮ್ಮನ್ನು ಸಾರ್ವಜನಿಕ ಜೀವನಕ್ಕೆ ಕರೆತಂದಿತು ಎಂದು ತಮ್ಮ ನೆನಪು ಮೆಲುಕು ಹಾಕಿದರು.