ಗುತ್ತಿಗೆದಾರರಿಂದಲೇ ಕಮಿಷನ್‌ ಕೇಳಿದ ಗುತ್ತಿಗೆದಾರರು! : ಇಬ್ಬರು ಅಮಾನತು

Published : Feb 04, 2026, 07:33 AM IST
Money

ಸಾರಾಂಶ

ಸಚಿವರು, ಅಧಿಕಾರಿಗಳ ವಿರುದ್ಧ ಆಗಾಗ ಕಮಿಷನ್ ಆರೋಪ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ವಿರುದ್ಧವೇ ಈಗ ಕಮಿಷನ್‌ಗೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಕಮಿಷನ್‌ ವಸೂಲಿಗೆ ಯತ್ನಿಸಿದ ಆರೋಪದಲ್ಲಿ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಹಾಗೂ ಸಂಘಟನಾ ಕಾರ್ಯದರ್ಶಿ ಹನುಮಂತು ಅಮಾನತು 

 ಬೆಂಗಳೂರು :  ಸಚಿವರು, ಅಧಿಕಾರಿಗಳ ವಿರುದ್ಧ ಆಗಾಗ ಕಮಿಷನ್ ಆರೋಪ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ವಿರುದ್ಧವೇ ಈಗ ಕಮಿಷನ್‌ಗೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಗುತ್ತಿಗೆದಾರರಿಂದಲೇ ಕಮಿಷನ್‌ ವಸೂಲಿಗೆ ಯತ್ನಿಸಿದ ಆರೋಪದಲ್ಲಿ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಹಾಗೂ ಸಂಘಟನಾ ಕಾರ್ಯದರ್ಶಿ ಹನುಮಂತು ಎಂಬುವರನ್ನು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಅಮಾನತು ಮಾಡಿದೆ.

ಬಿಡ್‌ನಿಂದ ಹಿಂದೆ ಸರಿಯಲು ಈ ಕಮಿಷನ್ ಕೇಳಲಾಗಿದೆ ಎಂಬ ಆರೋಪವಿದೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ಸಂಘದ ಅಧ್ಯಕ್ಷ ಮಂಜುನಾಥ, ‘ಗುತ್ತಿಗೆದಾರರೊಬ್ಬರ ಬಳಿ ಶೇ.3ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿರುವ ಆಡಿಯೋ, ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅದರ ಆಧಾರದ ಮೇಲೆ ಇಬ್ಬರನ್ನು ಅಮಾನತು ಮಾಡಲಾಗಿದೆ. ನಮ್ಮ ಸಂಘ ಮತ್ತು ಆ ಆಡಿಯೋಗೆ ಯಾವುದೇ ಸಂಬಂಧವಿಲ್ಲ. ಈ ಕುರಿತು ಸತ್ಯಾಸತ್ಯತೆ ಅರಿಯಲು ಸಂಘದ ಆರು ಪದಾಧಿಕಾರಿಗಳ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ’ ಎಂದರು.

ಹಳೆಯ ಆಡಿಯೋ, ವಿಡಿಯೋ:

‘ವಿಡಿಯೋ ಬಹಳ ದಿನಗಳ ಹಿಂದಿನದ್ದಾಗಿದೆ. ಆದರೆ, ಅದನ್ನು ಈಗ ಬಿಡುಗಡೆ ಮಾಡಲಾಗಿದೆ. ವಿಡಿಯೋ ಬಿಡುಗಡೆ ಮಾಡಿರುವ ಹಿಂದಿನ ಉದ್ದೇಶ ಏನೆಂಬುದು ಗೊತ್ತಿಲ್ಲ. ಅದನ್ನು ಪತ್ತೆ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಮಂಜುನಾಥ ಹೇಳಿದರು.

ಮಾಧ್ಯಮಗಳಿಗೆ ಬಿಡುಗಡೆಯಾಗಿರುವ ವಿಡಿಯೋದಲ್ಲಿ, ಗೌರವಾಧ್ಯಕ್ಷ ಜಗನ್ನಾಥ ಅವರು ಕೆಲಸವೊಂದರ ವಿಚಾರವಾಗಿ ಮಾತನಾಡುತ್ತಾ ‘3 ಪರ್ಸೆಂಟ್ ಆಗಲೇಬೇಕು’ ಎನ್ನುತ್ತಾರೆ. ಮತ್ತೊಬ್ಬ ಗುತ್ತಿಗೆದಾರ ಮಾತನಾಡುತ್ತಾ, ‘ಶೇ.3ರಷ್ಟು ಎಂದರೆ ನಮಗೆ ಹೊರೆಯಾಗುತ್ತದೆ. ಶೇ.2.5ರಷ್ಟು ಮಾಡಿಕೊಳ್ಳಿ’ ಎಂದು ಮನವಿ ಮಾಡುತ್ತಾರೆ. ಈ ವಿಡಿಯೋ ಜಗನ್ನಾಥ ಅವರ ಅರಿವಿಗೆ ಬಾರದಂತೆ ಗೌಪ್ಯವಾಗಿ ರೆಕಾರ್ಡ್ ಮಾಡಿಕೊಂಡಿರುವಂತಿದೆ.

ಕಮಿಷನ್ ಕೇಳಿಲ್ಲ ಎಂದ ಜಗನ್ನಾಥ:

ಅಧಿಕಾರಿಗಳ ಕಮಿಷನ್ ವಿಚಾರವನ್ನು ಬಯಲು ಮಾಡಿದ ಕಾರಣ ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಗೌರವಾಧ್ಯಕ್ಷ ಜಗನ್ನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

‘ನಾನು ಯಾರಿಂದಲೂ ಯಾವುದೇ ಕಮಿಷನ್ ಕೇಳಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನಾನು ಯಾವುದೇ ಟೆಂಡರ್‌ಗೆ ಬಿಡ್ ಮಾಡಿಲ್ಲ. ಹೀಗಿರುವಾಗ ಕಮಿಷನ್‌ ಪ್ರಶ್ನೆಯೇ ಬರುವುದಿಲ್ಲ. ಸಂಘದವರು ನನ್ನನ್ನು ಅಮಾನತು ಮಾಡುವ ಮೂಲಕ ತಪ್ಪೊಪ್ಪಿಕೊಂಡಂತೆ ಆಗುತ್ತದೆ. ಅಂತಹ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಜಗನ್ನಾಥ ಹೇಳಿದ್ದಾರೆ.

ಬಿಡ್‌ನಿಂದ ಹಿಂದೆ ಸರಿಯಲು ಕಮಿಷನ್?

ಸರ್ಕಾರದ ಕಾಮಗಾರಿಗಳಿಗೆ ಕರೆಯುವ ಟೆಂಡರ್‌ಗೆ ಹಲವಾರು ಜನ ಬಿಡ್ ಮಾಡುತ್ತಾರೆ. ಅದರಲ್ಲಿ ಕೆಲ ಗುತ್ತಿಗೆದಾರರು ಕೇವಲ ಕಮಿಷನ್‌ಗಾಗಿಯೇ ಬಿಡ್ ಮಾಡುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅಂದರೆ, ಕೆಲಸ ಮಾಡುವ ಉಮೇದು ಹೊಂದಿರುವ ಬಿಡ್‌ದಾರರಿಂದ ಯೋಜನೆಯ ಮೊತ್ತದ ಇಂತಿಷ್ಟು ಪಾಲನ್ನು ಶೇಕಡಾವಾರು ರೂಪದಲ್ಲಿ ಪಡೆದುಕೊಂಡು, ತಾವು ಬಿಡ್‌ನಿಂದ ಹಿಂದೆ ಸರಿಯುತ್ತಾರೆ. ಈ ಮೂಲಕ ಸ್ಪರ್ಧೆ ಕಡಿಮೆ ಮಾಡಿ ನಿರ್ದಿಷ್ಟ ವ್ಯಕ್ತಿಗಳಿಗೆ ಕಾಮಗಾರಿ ಸಿಗುವಂತೆ ನೋಡಿಕೊಳ್ಳಲಾಗುತ್ತದೆ ಎನ್ನುವ ಆರೋಪವಿದೆ.

ಆಗಿದ್ದೇನು?

- ಟೆಂಡರ್ ಬಿಡ್ ಹಿಂಪಡೆಯಲು ಶೇ.3ರಷ್ಟು ಕಮಿಷನ್

- ಜಗನ್ನಾಥ್‌, ಹನುಮಂತು ಮೇಲೆ ಕೇಳಿಬಂದ ಆರೋಪ

- ಈ ಕುರಿತ ಆಡಿಯೋ, ವಿಡಿಯೋ ಇದೀಗ ಬಹಿರಂಗ

- ಹೀಗಾಗಿ ಗುತ್ತಿಗೆದಾರರ ಸಂಘದಿಂದ ಇಬ್ಬರೂ ಸಸ್ಪೆಂಡ್‌

- ಸತ್ಯಾಸತ್ಯತೆ ಪರಿಶೀಲನೆಗೆ ಸತ್ಯಶೋಧನಾ ಸಮಿತಿ ರಚನೆ

ನಾನು ಕಮಿಷನ್‌ ಕೇಳಿಲ್ಲ

ಅಧಿಕಾರಿಗಳ ಕಮಿಷನ್ ವಿಚಾರವನ್ನು ಬಯಲು ಮಾಡಿದ ಕಾರಣ ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ನಾನು ಯಾರಿಂದಲೂ ಯಾವುದೇ ಕಮಿಷನ್ ಕೇಳಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನಾನು ಯಾವುದೇ ಟೆಂಡರ್‌ಗೆ ಬಿಡ್ ಮಾಡಿಲ್ಲ. ಹೀಗಿರುವಾಗ ಕಮಿಷನ್‌ ಪ್ರಶ್ನೆಯೇ ಬರುವುದಿಲ್ಲ.

- ಜಗನ್ನಾಥ್, ಅಮಾನತುಗೊಂಡ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಅಪಾರ ಭಕ್ತರ ಸಮ್ಮುಖದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ
ಅಭಿವೃದ್ಧಿ ಪಥದತ್ತ ದೇವನಹಳ್ಳಿ ತಾಲೂಕು